ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಉಳಿಸುವ ಕಾರ್ಯ ನಡೆಯಲಿ

ಯುವ ಸೌರಭ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿಕೆ
Last Updated 27 ಸೆಪ್ಟೆಂಬರ್ 2019, 15:09 IST
ಅಕ್ಷರ ಗಾತ್ರ

ಬೀದರ್‌: ‘ನಮ್ಮ ನಾಡಿನ ಸಂಸ್ಕೃತಿ ಹಾಗೂ ಸಂಪ್ರದಾಯ ಉಳಿಸುವ ಕಾರ್ಯ ಪ್ರತಿ ಮನೆಯಿಂದ ಆರಂಭವಾಗಬೇಕು. ತಾಯಂದಿರೇ ಇದರ ಹೊಣೆ ಹೊತ್ತುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಯುವ ಸೌರಭ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದೆ. ಕಲೆ, ಸಂಸ್ಕೃತಿ ಅಷ್ಟೇ ಅಲ್ಲ, ಉಡುಗೆ ತೊಡುಗೆಯನ್ನು ಅನುಕರಣೆ ಮಾಡುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ ನಿಧಾನವಾಗಿ ಹಿಮ್ಮುಖವಾಗಿ ಸಾಗುತ್ತಿದೆ. ಆದ್ದರಿಂದ ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ ಮೂಲಕ ನಾಡಿನ ಕಲೆ ಉಳಿಯುವಂತೆ ಮಾಡಬೇಕು’ ಎಂದು ಹೇಳಿದರು.

‘ಟಿವಿ ಧಾರವಾಹಿಗಳಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಧಾರವಾಹಿಗಳು ಕುಟುಂಬಗಳನ್ನು ಒಡೆಯುವ ಕೆಲಸ ಮಾಡುತ್ತಿವೆ. ನಾದಿನಿಯನ್ನು ಮನೆಯಿಂದ ಹೇಗೆ ತಳ್ಳಬೇಕು, ಮಾವನನ್ನು ಹೇಗೆ ವೃದ್ಧಾಶ್ರಮಕ್ಕೆ ಕಳಿಸಬೇಕು. ಮೈದುನನ್ನು ಅವಿಭಕ್ತ ಕುಟುಂಬದಿಂದ ಹೇಗೆ ದೂರ ಮಾಡಬೇಕು ಎನ್ನುವ ಕುರಿತಾಗಿ ಸಂದೇಶ ನೀಡುತ್ತಿವೆ. ಇಂತಹ ಧಾರವಾಹಿಗಳನ್ನು ವೀಕ್ಷಿಸುವುದಕ್ಕಿಂತ ಅವುಗಳಿಂದ ದೂರ ಇರುವುದೇ ಒಳ್ಳೆಯದು’ ಎಂದು ಕಿವಿಮಾತು ಹೇಳಿದರು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ‘ಸಾಹಿತ್ಯ ಹಾಗೂ ಸಂಗೀತ ಬೆಸೆದುಕೊಂಡಾಗ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಲು ಸಾಧ್ಯವಿದೆ’ ಎಂದು ತಿಳಿಸಿದರು.

‘ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡದಿಂದ ಹೊರಬಹುದಾಗಿದೆ. ಅದು ವ್ಯಕ್ತಿಯಲ್ಲಿನ ದೌರ್ಬಲ್ಯವನ್ನು ತೊಡೆದು ಹಾಕಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ವ್ಯಕ್ತಿ ತನ್ನ ಗುರಿಯತ್ತ ಮುನ್ನುಗ್ಗುವಂತೆ ಪ್ರೇರೇಪಿಸುತ್ತದೆ’ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್‌.ಜಿ.ಹುಗ್ಗಿಪಾಟೀಲ ಮಾತನಾಡಿದರು. ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ವಿಜಯಕುಮಾರ ಸೋನಾರೆ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವಿ.ಎಸ್. ಕಟ್ಟಿಮನಿ, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಸಾಂಸ್ಕೃತಿಕ ಕಾರ್ಯದರ್ಶಿ ಗಂಗಾಂಬಿಕಾ ಪಾಟೀಲ, ಇತಿಹಾಸ ವಿಭಾಗದ ಮುಖ್ಯಸ್ಥ ಸಿ.ಬಿ.ದೇವರಾಜ್ ಇದ್ದರು.

ಭಕ್ತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT