ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ಅಮೂಲ್ಯ ತಾಣ ರಕ್ಷಿಸಿ: ಸಂಜೀವಕುಮಾರ ಹೇಳಿಕೆ

ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ರಾಜ್ಯ ಕಾರ್ಯದರ್ಶಿ
Last Updated 25 ಮೇ 2022, 15:07 IST
ಅಕ್ಷರ ಗಾತ್ರ

ಬೀದರ್‌: ವಿಸ್ಮಯದ ಭೂಮಿಯಲ್ಲಿ ಅಗಣಿತ ಜೀವ ಸಂಕುಲಗಳಿದ್ದು ಸಸ್ಯ, ಮಣ್ಣು ಹಾಗೂ ಜೀವ ಸಂಕುಲಗಳ ಸೊಬಗು ನೆನಪಿಸುವ ಪ್ರಕೃತಿ ಮಾತೆಯ ಅಮೂಲ್ಯ ತಾಣಗಳ ಸಂರಕ್ಷಣೆಗೆ ಪಣ ತೊಡುವ ದಿನವೇ ಜೀವ ವೈವಿಧ್ಯ ದಿನವಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯ ಕಾರ್ಯದರ್ ಸಂಜೀವಕುಮಾರ ಸ್ವಾಮಿ ಹೇಳಿದರು.

ನಗರದ ನೌಬಾದ್‌ನಲ್ಲಿ ಇರುವ ಹಿಮಾಲಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜಾಗೃತಿ ವೇದಿಕೆ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಡಾ.ಕೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಜೀವ ವೈವಿಧ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಮೇ 22ರಂದು ವಿಶ್ವದಾದ್ಯಂತ ಜೀವ ವೈವಿಧ್ಯ ದಿನ ಆಚರಿಸಲಾಗುತ್ತದೆ. ಜೀವ ವೈವಿಧ್ಯಗಳಲ್ಲಿ ಜಗತ್ತಿನ ಸೌಂದರ್ಯ ಅಡಗಿದೆ. ಆಹಾರ ಸರಪಳಿಯಲ್ಲಿ ಯಾವುದೇ ಕೊಂಡಿ ಕಳಚಿದರೂ ಈ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಆಹಾರ ಸರಪಳಿ ಒಂದು ಜೀವ ಇನ್ನೊಂದು ಜೀವವನ್ನು ಅವಲಂಬಿಸಿದೆ. ಇರುವೆಯಿಂದ ಹದ್ದಿನವರೆಗೂ, ಹುಲ್ಲಿನಿಂದ ಆಲದ ಮರವರೆಗೂ ಆಹಾರ ಸರಪಳಿ ಹರಡಿಕೊಂಡಿದೆ ಎಂದರು.

ಆಹಾರ ಸರಪಳಿಯಲ್ಲಿನ ಒಂದು ಕೊಂಡಿ ನಾಶವಾದರೆ ಇಡೀ ಸರಪಳಿ ನಾಶವಾಗುತ್ತದೆ. ನಾವೆಲ್ಲರೂ ಸಕಲ ಜೀವ ಸಂಕುಲಗಳನ್ನು ಉಳಿಸಿ-ಬೆಳೆಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅನಂತ ಕುಲಕರ್ಣಿ ಮಾತನಾಡಿ, ಜೀವ ವೈವಿಧ್ಯ ಸಂರಕ್ಷಣೆ ಎಂದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಕಾಪಾಡುವುದು. ಅದಕ್ಕೆಂದೇ ಅರಣ್ಯ ಸಂರಕ್ಷಣೆ ಮಾಡಬೇಕಿದೆ. ಮಾಲಿನ್ಯ ತಡೆಗೆ ಒತ್ತಕೊಟ್ಟು ಪರಿಸರ ಸ್ವಚ್ಛವಾಗಿಟ್ಟು ಕೊಂಡರೂ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದರು.

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ನಮ್ಮ ಬದುಕಿಗೆ ಆಧಾರವಾದ ಅರಣ್ಯ, ನದಿ-ಕೆರೆ, ಸಮುದ್ರ, ಅಂತರ್ಜಲ, ಪರ್ವತ ಶ್ರೇಣಿ, ವಾಯು ಮಂಡಲ ಹಲವು ಕಾರಣಗಳಿಂದ ಕಲುಷಿತಗೊಳ್ಳುತ್ತಿವೆ. ಇವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ.ಸಿ. ಆನಂದರಾವ್ ಮಾತನಾಡಿ, ಭೂಮಂಡಲದಲ್ಲಿ ಗಿಡ ಮೂಲಿಕೆ, ಕ್ರಿಮಿಕೀಟಗಳು ಸೇರಿದಂತೆ ಕೋಟ್ಯಂತರ ಜೀವಿಗಳು ಇವೆ ಎಂದರು.

ಶಿಕ್ಷಕರಾದ ಜಯಪ್ರಕಾಶ, ಧನರಾಜ್, ವಿಜಯಕುಮಾರ, ಶಿವಕುಮಾರ, ಮಿಸ್ ರೈಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶದ್ರಕ ಸೋನಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT