ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹರಿಸಿ ಉತ್ಸವ ನಡೆಸಿ

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಕೆ
Last Updated 24 ನವೆಂಬರ್ 2022, 4:54 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದ ನಂತರವೇ ಬೀದರ್ ಉತ್ಸವ ನಡೆಸಬೇಕು’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಸಮಸ್ಯೆಗಳನ್ನು ಬಗೆಹರಿಸದೆ, ಬೀದರ್ ಉತ್ಸವ ಆಯೋಜನೆ ನಿರ್ಣಯ ಕೈಗೊಂಡಿರುವುದನ್ನು ಖಂಡಿಸಲಾಗುತ್ತದೆ ಎಂದು ಹೇಳಿದರು.

ಬೀದರ್ ಉತ್ಸವ ನಡೆಸಲು ನಮ್ಮ ವಿರೋಧ ಇಲ್ಲ. ಆದರೆ, ಜಿಲ್ಲೆಯಲ್ಲಿ ಇರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ಉತ್ಸವ ನಡೆಸುತ್ತಿರುವುದರ ಔಚಿತ್ಯವೇನು, ಯಾರಿಗೆ ಲಾಭ ಮಾಡಲು, ಯಾರನ್ನು ಖುಷಿಪಡಿಸಲು ಬೀದರ್ ಉತ್ಸವ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಸಮಿತಿ ನೇತೃತ್ವದಲ್ಲಿ 146 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಸಂತ್ರಸ್ತರ ಗೋಳು ಕೇಳಿಲ್ಲ. ಪಶು ಸಂಗೋಪನೆ ಸಚಿವರು ಕಣ್ಣೆತ್ತಿಯೂ ನೋಡಿಲ್ಲ. ಜಿಲ್ಲಾಧಿಕಾರಿ ಧರಣಿ ಸ್ಥಳದ ಮುಂಭಾಗದಿಂದಲೇ ಸಂಚರಿಸಿದರೂ ರೈತರ ಕಡೆಗೆ ಲಕ್ಷ್ಯ ವಹಿಸಿಲ್ಲ ಎಂದು ದೂರಿದರು.

ಕಾರಂಜಾ ಜಲಾಶಯದಿಂದ 28 ಗ್ರಾಮಗಳ 50 ಸಾವಿರ ಜನ ಸಂತ್ರಸ್ತರಾಗಿದ್ದಾರೆ. ಯೋಜನೆಯಲ್ಲಿ ಭೂಮಿ, ಮನೆ ಕಳೆದುಕೊಂಡವರಿಗೆ ವೈಜ್ಞಾನಿಕ ಪರಿಹಾರ ಕೊಡುವಂತೆ ಒತ್ತಾಯಿಸಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅವರು ಸಕರಾತ್ಮಕ ಹೇಳಿಕೆ ನೀಡಿದರೂ, ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಟನ್‍ಗೆ ₹2,500 ಬೆಲೆ ಘೋಷಿಸಿದರೂ, ₹2,200 ಮಾತ್ರ ಕೊಡಲಾಗಿದೆ. ಸಕ್ಕರೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬು ಬೆಲೆ ನಿಗದಿಪಡಿಸಿಲ್ಲ ಎಂದು ಆರೋಪಿಸಿದರು.

ನಗರದಲ್ಲಿ ರಸ್ತೆಗಳು ಹಾಳಾದರೂ ದುರಸ್ತಿಪಡಿಸಿಲ್ಲ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೆ ಹಣಕಾಸು ನೆರವು ನೀಡಿಲ್ಲ ಎಂದು ಆಪಾದಿಸಿದರು. ಕಾರಂಜಾ ಯೋಜನೆ ಮುಳುಗಡೆ ಹಳ್ಳಿಗಳಾದ ಔರಾದ್(ಎಸ್) ಅಥವಾ ಖೇಣಿರಂಜೋಳ್‍ನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚಕನಳ್ಳಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ ರೇಕುಳಗಿ, ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಭೀಮರೆಡ್ಡಿ, ಮಹೇಶ, ಶಾಮಣ್ಣ ಬಾವಗಿ, ಕಲ್ಯಾಣರಾವ್ ಚನಶೆಟ್ಟಿ, ಮಾದಪ್ಪ ಖೌದೆ, ಬಾಬುರಾವ್ ಹಜ್ಜರ್ಗಿ ಹಾಗೂ ಶಂಕರರಾವ್ ಮನ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT