ಬೀದರ್: ಪ್ರವರ್ಗ 2 ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರ ರದ್ದುಪಡಿಸಿರುವುದನ್ನು ವಿರೋಧಿಸಿ ಜಾತ್ಯತೀತ ಜನತಾ ದಳದ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಗಣೇಶ ಮೈದಾನ ಸಮೀಪದ ಪಕ್ಷದ ಜಿಲ್ಲಾ ಘಟಕದ ಕಚೇರಿಯಿಂದ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವರೆಗೆ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
1995 ರಲ್ಲಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸಿದ್ದರು. ಅದು ಈವರೆಗೂ ಮುಂದುವರಿದಿತ್ತು. ಇದೀಗ ಬಿಜೆಪಿ ಸರ್ಕಾರ ಮೀಸಲಾತಿ ರದ್ದುಪಡಿಸಿದೆ. ಮತ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಬಂಡೆಪ್ಪ ಕಾಶೆಂಪುರ ಆರೋಪಿಸಿದರು.
ಮೀಸಲಾತಿ ರದ್ದುಪಡಿಸಿದ ಸರ್ಕಾರದ ಕ್ರಮ ತೀವ್ರ ಖಂಡನೀಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ರದ್ದತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡರಾದ ಸಜ್ಜದ್ ಸಾಹೇಬ್, ಸಿ.ಎಂ. ಫೈಜ್, ಬಾಬಾ ಬುಕಾರಿ, ಐಲಿನ್ ಜಾನ್ ಮಠಪತಿ, ಎಂ.ಡಿ. ಅಸದೊದ್ದೀನ್, ನಬಿ ಖುರೇಶಿ, ರಾಜು ಕಡ್ಯಾಳ್, ಮಾರುತಿ ಬೌದ್ಧೆ, ಸೈಯದ್ ಸರ್ಫರಾಜ್ ಹಾಷ್ಮಿ, ಅಬ್ದುಲ್ ಸಮದ್, ಇಸ್ಮಾಯಿಲ್ ಅಹಮ್ಮದ್, ಸಂಗಮ್ಮ ಪಾಟೀಲ, ಲಲಿತಾ ಕರಂಜೆ, ವಸೀಮ್, ದೇವೇಂದ್ರ ಸೋನಿ, ಎಂ.ಡಿ. ಸಲೀಂ, ರಾಜಶೇಖರ ಜವಳೆ, ಸೈಖ್, ಸೈಯದ್ ಇಸ್ಮಾಯಿಲ್, ಶಮಿ ಶೇಖ್, ಅಶೋಕ ಕೋಡಗೆ, ಸೈಯದ್ ಬಿಲಾಲ್, ಮಿರಾಜ್ ಫೈಮ್ ಬೇಗ್ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.