ಶುಕ್ರವಾರ, ಅಕ್ಟೋಬರ್ 29, 2021
20 °C

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ- ಜನಪರ ಹೋರಾಟಗಾರರ ಒಕ್ಕೂಟದಿಂದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಕೃಷಿ ಕಾಯ್ದೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜನಪರ ಹೋರಾಟಗಾರರ ಒಕ್ಕೂಟದಿಂದ ಸೋಮವಾರ ತಹಸೀಲ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ರಮೇಶ ಪೇದ್ದೆ ಅವರಿಗೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಹೋರಾಟಗಾರ ಜನಾರ್ಧನ ಸಾವರ್ಗೆಕರ್, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿ ಹಾಗೂ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಮಸೂದೆಯನ್ನು ವಾಪಸ್‌ ಪಡೆಯಬೇಕು. ಈಗಾಗಲೇ ರೈತರು ತಮ್ಮ ಹೊಲದಲ್ಲಿ ಬೆಳೆಸಿದ ಬೆಳೆ ಅತಿವೃಷ್ಟಿಯಿಂದ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ರೈತರ ಬೆಳೆಗಳ ಬೆಲೆ ಏಕಾಏಕಿ ಇಳಿಕೆಯಾಗಿರುವುರಿಂದ ರೈತರ ಮೈಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ರೈತರ ನೇರವಿಗೆ ನಿಂತು ಸರ್ಕಾರದಿಂದ ಸೀಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೆ ದೊರಕಿಸಿಕೊಡಬೇಕು. ರೈತರ ಬೆಳೆಯನ್ನು ಬೆಂಬಲ ಬೆಲೆಯೊಳಗೆ ಖರೀದಿ ಮಾಡಬೇಕು ಎಂದರು.

ಕಲ್ಯಾಣರಾವ ಬಿರಾದಾರ ಮಾತನಾಡಿ, ತೈಲ ಬೆಲೆ ಏರಿಕೆಯಿಂದ ದಿನಸಿ ಪದಾರ್ಥಗಳ ಬೆಲೆಯ ಮೇಲೂ ಪರಿಣಾಮ ಬೀರಿದೆ. ಪ್ರತಿ ಕುಟುಂಬ ಅಗತ್ಯ ಪದಾರ್ಥಗಳಿಗಾಗಿ ಮಾಡುವ ವೆಚ್ಚ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸತತವಾಗಿ ಪೇಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರುತ್ತಲೆ ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಜನಸಾಮಾನ್ಯರು ಕೆಲಸದ ಅಭದ್ರತೆ ನಡುವೆ ತೈಲ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕ ಮಾಜಿ ಅಧ್ಯಕ್ಷ ಪ್ರವೀಣ ಕುಲಕರ್ಣಿ, ದಲಿತ ಸಂಘರ್ಷ ಸಮೀತಿ ಅಧ್ಯಕ್ಷ ಗೋವಿಂದ ತಾಂದಳೆ, ಶಿವರಾಜ ಬಿರಾದಾರ, ಸಚೀನಕುಮಾರ ಆಗಾವೆ, ವಿಷ್ಣುದಾಸ ಗಾಯಕವಾಡ, ಉತ್ತಮರಾವ ಮಾನೆ, ಬಾಲಾಜಿ ಪುಂಡೆ, ಮನೋಹರ ಬಿರಾದಾರ, ವೈಜಿನಾಥ ವಡ್ಡೆ, ಭೀಮರಾವ ಕಣಜೆ, ಅಶೋಕ ಪಾಟೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.