ಗುರುವಾರ , ಡಿಸೆಂಬರ್ 5, 2019
19 °C
ಬಾಲಕಿ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಕೊಡಲು ಆಗ್ರಹ

ಬಾಲಕಿ ಸಾವು: ಸವಿತಾ ಸಮಾಜದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾಲ್ಕಿಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಸಾಧನಾ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಸಿಬಿಐ ಮೂಲಕ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಸವಿತಾ ಸಮಾಜದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನವೆಂಬರ್ 7 ರಂದು ರಾತ್ರಿ 1 ಗಂಟೆಯಿಂದ ನಿರಂತರವಾಗಿ ವಾಂತಿ ಮಾಡಿಕೊಂಡಿದ್ದಾಳೆ. ವಸತಿ ನಿಲಯದ ಸಿಬ್ಬಂದಿ ಬಾಲಕಿಯ ಆರೋಗ್ಯ ಕಾಳಜಿ ವಹಿಸಲಿಲ್ಲ. ಮರುದಿನ ಬೆಳಿಗ್ಗೆ 7 ಗಂಟೆಗೆ ಬಾಲಕಿಯ ಸಹಪಾಠಿಗಳು ಬಾಲಕಿಯ ತಂದೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇದಕ್ಕೆ ವಸತಿ ನಿಲಯದ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಲಕಿಯ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಕೊಡಬೇಕು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನವಾಡ ರಸ್ತೆಯ ಸವಿತಾ ಸಮಾಜದ ಕಚೇರಿಯಿಂದ ಆರಂಭವಾದ ಮೆರವಣಿಗೆಯು ಡಾ.ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿತು. ಸಮಾಜದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಹಿರಿಯ ಉಪಾಧ್ಯಕ್ಷ ನಾಗರಾಜ ಆರ್ಯ, ಉಪಾಧ್ಯಕ್ಷ ಸಂಜುಕುಮಾರ ಮೋರ್ಗಿಕರ್, ಕೋಶಾಧ್ಯಕ್ಷ ವಸಂತ ತೀರ್ಮಾನಂದರ, ಸಹ ಕಾರ್ಯದರ್ಶಿ ಹರೀಶ ಚಲವಾ, ಅಂಬಾದಾಸ್ ಡೊಂಗರಿಕರ್, ಅಶೋಕರಾವ್‌ ಕರಂಜಿ, ಮಧುಕರ್ ಚಿನಿಮಿಶ್ರೀ, ಪ್ರಕಾಶ ಭೂಪಳಗಡ್, ಪ್ರಕಾಶ ಹೊಕ್ರಾಣ, ರಾಕೇಶ ಚೌಧರಿ, ಸಂಗಪ್ಪ ಗೊಂದೇಗಾಂವಕರ್, ಶ್ರೀನಿವಾಸ ಮುಖೇಡಕರ್, ಶ್ರೀನಿವಾಸ ಯ. ಚಿಲ್ಲರ್ಗಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)