ಶನಿವಾರ, ಜುಲೈ 24, 2021
26 °C
ಎಐಡಿಎಸ್‍ಒದಿಂದ ಮುಖ್ಯಮಂತ್ರಿಗೆ ಮನವಿ ಪತ್ರ

ಪದವಿ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಕೈಯಲ್ಲಿ ಫಲಕ ಹಿಡಿದು, ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಪ್ರಸಕ್ತ ಸೆಮಿಸ್ಟರ್ ಪರೀಕ್ಷೆಯೊಂದಿಗೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸಬಾರದು ಎಂದು ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೋಷಕರು, ಶಿಕ್ಷಕರು, ವೈದ್ಯರು, ಶಿಕ್ಷಣ ಪ್ರೇಮಿಗಳು ಸೇರಿದಂತೆ ಒಂದು ಲಕ್ಷಕ್ಕೂ ಜನ ಅಭಿಯಾನಕ್ಕೆ ದನಿಗೂಡಿಸಿದ್ದಾರೆ. ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳೂ ಬೆಂಬಲ ಸೂಚಿಸಿದ್ದಾರೆ ಎಂದು ಎಐಡಿಎಸ್‍ಒ ಜಿಲ್ಲಾ ಸಂಚಾಲಕ ಹಣಮಂತ ಎಸ್.ಎಚ್ ಹೇಳಿದರು.

ಒಂದು ತಿಂಗಳಿಂದ ವಿದ್ಯಾರ್ಥಿಗಳು ರಾಜ್ಯದಾದ್ಯಂತ ಹಲವು ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವು ಸಚಿವರು, ವಿಧಾನ ಪರಿಷತ್ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಅಥವಾ ವಿಶ್ವವಿದ್ಯಾಲಯಗಳು ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳದೆ ಜಾಣ ಮೌನ ಅನುಸರಿಸುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆತಂಕ ಅರ್ಥ ಮಾಡಿಕೊಳ್ಳುತ್ತಿಲ್ಲ. ಈಗಾಗಲೇ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿವೆ. ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳ ಜೀವಕ್ಕಿಂತ ಪರೀಕ್ಷೆ ನಡೆಸುವುದೇ ಮುಖ್ಯವಾಗಿದೆ ಎಂದು ಬೇಸರ ಹೊರಹಾಕಿದರು.

ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‍ಗಳ ಪರೀಕ್ಷೆಗಳನ್ನು ನಡೆಸಬಾರದು. ಕೂಡಲೇ ಹಿಂದಿನ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಬೇಡಿಕೆ ಮಂಡಿಸಿದರು.

ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯ ಎರಡೂ ಡೋಸ್ ಕೊಟ್ಟ ನಂತರವೇ 2, 4 ಹಾಗೂ 6ನೇ ಸೆಮಿಸ್ಟರ್ ಆಫ್‍ಲೈನ್ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಆರ್ಗನೈಸೇಷನ್ ಜಿಲ್ಲಾ ಘಟಕದ ಸದಸ್ಯ ಲಕ್ಷ್ಮಣ ಪಿ ಮಚ್ಕೂರೆ, ವಿದ್ಯಾರ್ಥಿಗಳಾದ ಶಿವಕುಮಾರ, ಮಾರುತಿ, ಪ್ರದೀಪ್, ಸಚಿನ್, ಸಿದ್ದು, ಅಕ್ಷತಾ, ಶ್ರುತಿ, ಕಾವೇರಿ, ಸುನಿತಾ, ಪ್ರಿಯಾ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು