ಆಸ್ಪತ್ರೆ ನಡೆಸಲಾಗದಿದ್ದರೆ ಬೀಗ ಹಾಕಿ

7
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಕ್ರೋಶ

ಆಸ್ಪತ್ರೆ ನಡೆಸಲಾಗದಿದ್ದರೆ ಬೀಗ ಹಾಕಿ

Published:
Updated:
Deccan Herald

ಬೀದರ್: ‘ಬಡವರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆಸ್ಪತ್ರೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಅವುಗಳಿಗೆ ಬೀಗ ಹಾಕಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಇಲ್ಲಿನ ಬ್ರಿಮ್ಸ್‌ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಇಂತಹ ಆಸ್ಪತ್ರೆ ನಾನು ಎಲ್ಲಿಯೂ ನೋಡಿಲ್ಲ. ಆಸ್ಪತ್ರೆಯಲ್ಲಿ ಒಂದು ಕ್ಷಣವೂ ನಿಲ್ಲಲು ಸಾಧ್ಯವಾಗದೆ ಹೊರಗೆ ಬಂದಿದ್ದೇನೆ’ ಎಂದರು.

‘ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಸೇರಿದಂತೆ 10 ಜನರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಫ್ಐಆರ್ ದಾಖಲಾಗಿದೆ. ಪೀಠೋಪಕರಣ, ಔಷಧಿ ಖರೀದಿ ಹಾಗೂ ‘ಡಿ’ ಗ್ರೂಪ್ ನೌಕರರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದರೂ ಸರ್ಕಾರ ಎಲ್ಲವನ್ನೂ ಸಹಿಸಿಕೊಂಡು ಆರೋಪಿಗಳ ಬೆನ್ನಿಗೆ ನಿಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡಿದರೂ ವೈದ್ಯರ ಅಸಡ್ಡೆತನ ಮುಂದುವರಿದಿದೆ. ವೈದ್ಯಕೀಯ ಸೇವೆಗಳ ಅನಾನುಕೂಲತೆ ಇಲ್ಲಿನ ದುರಾವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿನ ಭ್ರಷ್ಟಾಚಾರ ಬಯಲಾದರೂ ಸರ್ಕಾರ ಮೌನವಾಗಿದೆ’ ಎಂದು ಆರೋಪಿಸಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬ್ರಿಮ್ಸ್‌ನಲ್ಲಿ ನಡೆದಿರುವ ಹಗರಣದ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೆ ಬುದ್ಧಿ ಮಾತು ಹೇಳಬೇಕು. ಇದರಿಂದ ಅವರು ಬೀದರ್‌ಗೆ ಬಂದು ಹೋಗಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಎಲ್ಲಿ ಆಗಿದೆ ಸಾಲ ಮನ್ನಾ: ‘ಸಾಲ ಮನ್ನಾ ಮಾಡುವುದಾಗಿ ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಸಹಕಾರ ಬ್ಯಾಂಕ್‌ಗಳ ಸಾಲದ ಬಗ್ಗೆ ಸ್ಪಷ್ಟತೆ ಇಲ್ಲ. ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಯಡಿಯೂರಪ್ಪ ಒತ್ತಾಯಿಸಿದರು.

‘ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಂದು ರೀತಿಯಲ್ಲಿ ಹಗಲು ದರೋಡೆ ನಡೆದಿದೆ. ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸಲು ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ವಿಶೇಷ ಪೂಜೆ: ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿ ಬಿ.ಎಸ್‌.ಯಡಿಯೂರಪ್ಪ ಅವರು ನಗರದ ಪಾಪನಾಶ ದೇಗುಲದ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಸ್ಲಂ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬು ವಾಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !