ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಪರೀಕ್ಷಿಸಿ ವಸ್ತು ಖರೀದಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ

ರಾಷ್ಟ್ರೀಯ ಗ್ರಾಹಕರ ದಿನ:
Last Updated 25 ಡಿಸೆಂಬರ್ 2019, 12:46 IST
ಅಕ್ಷರ ಗಾತ್ರ

ಬೀದರ್‌: ‘ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದರ ತೂಕ, ಬೆಲೆ ಹಾಗೂ ಗುಣಮಟ್ಟವನ್ನು ಪರೀಕ್ಷಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾರುಕಟ್ಟೆಯಲಿ ಗ್ರಾಹಕರಿಗೆ ಮೋಸ, ವಂಚನೆಗಳನ್ನು ತಪ್ಪಿಸಲು ಗ್ರಾಹಕರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ವೇಣುಗೋಪಾಲ್ ಮಾತನಾಡಿ,‘ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಒಂದಿಲ್ಲೊಂದು ರೀತಿಯ ಘರ್ಷಣೆಗಳು ನಡೆಯುತ್ತಿರುತ್ತವೆ. ಗ್ರಾಹಕರು ಹಣ ನೀಡಿ ಖರೀದಿಸಿದ ವಸ್ತುವಿನಲ್ಲಿ ಲೋಪಗಳು ಕಂಡುಬಂದರೆ ಗ್ರಾಹಕರ ರಕ್ಷಣಾ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಗ್ರಾಹಕರ ರಕ್ಷಣೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಗ್ರಾಹಕರ ರಕ್ಷಣೆಗೆ ಇದು ದೊಡ್ಡ ವೇದಿಕೆಯಾಗಿದ್ದು, ಗ್ರಾಹಕರು ಮೋಸ ಅನುಭವಿಸಿದ್ದಲ್ಲಿ ಈ ಸಮಿತಿಯಿಂದಲೂ ಪರಿಹಾರ ಕಂಡುಕೊಳ್ಳಬಹುದು’ ಎಂದರು.

‘ದೊಡ್ಡ ಕಂಪನಿಯವರು ಆಕರ್ಷಕ ಜಾಹೀರಾತುಗಳ ಮೂಲಕ ಜನರನ್ನು ಶೋಷಣೆ ಮಾಡುತ್ತಿರುತ್ತಾರೆ. ಜಾಹೀರಾತುಗಳಲ್ಲಿ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಷರತ್ತುಗಳ ಬಗ್ಗೆ ಗಮನಿಸಬೇಕು’ ಎಂದು ಸಲಹೆ ನೀಡಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಾಜು ಸೂರ್ಯನ್ ಮಾತನಾಡಿ,‘ಆಭರಣ ಅಂಗಡಿಗಳು, ತಿಂಡಿ ತಿನಿಸುಗಳ ಮಾರಾಟ ಅಂಗಡಿಗಳು ಸೇರಿದಂತೆ ಹಲವೆಡೆ ಎಲೆಕ್ಟ್ರಾನಿಕ್ ತೂಕದ ಯಂತ್ರಗಳಿಂದಲೂ ಜನರನ್ನು ವಂಚಿಸಲಾಗುತ್ತದೆ’ ಎಂದು ತಿಳಿಸಿದರು.

‘ಚಿನ್ನಾಭರಣ ಅಂಗಡಿಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರದಿಂದ ತೂಕ ಮಾಡುವ ವೇಳೆ ಫ್ಯಾನಿನ ಗಾಳಿ ಬಾರದಂತೆ ನೋಡಿಕೊಳ್ಳಬೇಕು. ದಿನಸಿ ಅಂಗಡಿಗಳಲ್ಲಿ ಪ್ಯಾಕೆಟ್ ಉತ್ಪನ್ನಗಳನ್ನು ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ಬೆಲೆಯನ್ನು ಮಾತ್ರ ನೀಡುವ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು’ ಎಂದು ಹೇಳಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಬಾಬುರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಆಹಾರ ನಿಗಮದ ಉಪ ವ್ಯವಸ್ಥಾಪಕ ಗುರುರಾಯ ಇದ್ದರು.

ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಬಸವರಾಜ ಪವಾರ್ ನಿರೂಪಿಸಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಯೋಗಾನಂದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT