ಬುಧವಾರ, ಆಗಸ್ಟ್ 17, 2022
25 °C
ನೌಕರರ ನವೀಕೃತ ಭವನ ಉದ್ಘಾಟನಾ ಸಮಾರಂಭದಲ್ಲಿ ಸಿ.ಎಸ್. ಷಡಕ್ಷರಿ ಹೇಳಿಕೆ

ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಯೋಜನೆ ಶೀಘ್ರ ಜಾರಿಗೊಳ್ಳಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ಇಲ್ಲಿಯ ಪ್ರತಾಪನಗರದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ₹ 50 ಕೋಟಿ ಮೀಸಲಿರಿಸಿದೆ’ ಎಂದು ತಿಳಿಸಿದರು.

ರಾಜೇಂದ್ರಕುಮಾರ ಗಂದಗೆ ಅವರ ಮನವಿಗೆ ಸ್ಪಂದಿಸಿ, ‘2022 ರ ವೇಳೆಗೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸರಿ ಸಮನಾದ ವೇತನ ಕೊಡಿಸಲು ಹಾಗೂ ಎನ್‍ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ನೌಕರರ ಭವನದ ಅಭಿವೃದ್ಧಿ ಕಾರ್ಯಗಳ ₹ 3 ಕೋಟಿಯ ಪ್ರಸ್ತಾವಕ್ಕೆ ಮಂಜೂರಾತಿ ಕೊಡಿಸುವುದು, ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯಲ್ಲಿನ ಬಡ್ತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆ ಮೊದಲಾದ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ಬೀದರ್‌ನ ಭವನ ಉತ್ತರ ಕರ್ನಾಟಕದಲ್ಲೇ ನೌಕರರ ವಿಶಾಲ ಹಾಗೂ ಸುಂದರ ಭವನವಾಗಿದೆ. ಗಂದಗೆ ನವೀಕರಣ ಸೇರಿ ಭವನಕ್ಕೆ ವಿವಿಧ ಸೌಕರ್ಯ ಕಲ್ಪಿಸಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನೌಕರರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

‘ನೌಕರರ ಹಿತ ರಕ್ಷಣೆಯೇ ಸಂಘದ ಆದ್ಯತೆಯಾಗಿದೆ. ಎರಡು ಅವಧಿಯಲ್ಲಿ ನೌಕರರ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ ಸಂತೃಪ್ತಿ ಇದೆ. ₹ 3 ಕೋಟಿಯ ಪ್ರಸ್ತಾವಕ್ಕೆ ಮಂಜೂರಾತಿ ದೊರೆತರೆ ಭವನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ’ ಎಂದು ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನುಡಿದರು.

ಕೊರೊನಾ ವಾರಿಯರ್ಸ್‍ಗಳು, ಉತ್ತಮ ಶಿಕ್ಷಕರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಲಾವಿದ ಶಿವಕುಮಾರ ಪಾಂಚಾಳ ವಚನ ಸಂಗೀತ ನಡೆಸಿಕೊಟ್ಟರು. ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ಹಾಗೂ ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ವಚನ ನೃತ್ಯ ಪ್ರದರ್ಶಿಸಿದರು.

ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಗೌರವಾಧ್ಯಕ್ಷ ವಿ.ವಿ. ಶಿವರುದ್ರಯ್ಯ, ಸಂಘಟನಾ ಕಾರ್ಯದರ್ಶಿ ಸತೀಶ ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ರಾಜಕುಮಾರ ಹೊಸದೊಡ್ಡೆ, ಮನೋಹರ ಕಾಶಿ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ರೆಡ್ಡಿ, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ನೌಕರರ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ರಾಜು ಲಿಂಗಟಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಸುರೇಶ ಷಡಸ್ಯಾಳ್, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಮೋಹನಕುಮಾರ, ಬೀದರ್ ಜಿಲ್ಲಾ ಕಾರ್ಯಾಧ್ಯಕ್ಷ ರಾಜಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಖಜಾಂಚಿ ಅಶೋಕ ರೆಡ್ಡಿ, ತಾಲ್ಲೂಕು ಅಧ್ಯಕ್ಷ ರಾಜಪ್ಪ ಪಾಟೀಲ, ಶಿವಾನಂದ ಮೇತ್ರೆ, ಶಿವಕುಮಾರ ಘಾಟೆ, ನಾಗಶೆಟ್ಟಿ ಡುಮಣೆ, ರಾಜಕುಮಾರ ಬೇಲೂರೆ, ಲಿಂಗಾನಂದ ಮಹಾಜನ್ ಇದ್ದರು.

ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಬಸವರಾಜ ಜಕ್ಕಾ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು