ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಪರೀಕ್ಷೆ ಬರೆಸಿದರೆ ಹೇಗೆ?

ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳ ಸಂಘದ ಪ್ರಶ್ನೆ
Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಆಯೋಗವು ನೀಡಿದ್ದ ತರಬೇತಿಯಲ್ಲಿ ಭಾಗವಹಿಸಲು ಅನೇಕ ಅಧಿಕಾರಿಗಳಿಗೆ ಕಾರ್ಯದೊತ್ತಡದ ಕಾರಣದಿಂದ ಸಾಧ್ಯವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ಪರೀಕ್ಷೆ ನಡೆಸಿದರೆ ಉತ್ತೀರ್ಣರಾಗುವುದಾದರೂ ಹೇಗೆ?

ಆಯೋಗವು ನಡೆಸಿದ ಪರೀಕ್ಷೆಯಲ್ಲಿ ಕೆಎಎಸ್‌ ಶ್ರೇಣಿಯ ಅಧಿಕಾರಿಗಳೇ ತೇರ್ಗಡೆಯಾಗದ ಬಗ್ಗೆ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳ ಸಂಘದ ಪ್ರತಿಕ್ರಿಯೆ ಇದು.

‘ಚುನಾವಣಾಧಿಕಾರಿಗಳನ್ನಾಗಿ ನಿಯೋಜಿಸುವವರಿಗೆ ಆಯೋಗವು ಇದೇ ಮೊದಲ ಬಾರಿ ಪರೀಕ್ಷೆ ಆಯೋಜಿಸಿತ್ತು. ಇದಕ್ಕೆ ಮುನ್ನ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮೂರು ದಿನಗಳ ತರಬೇತಿ ನೀಡಿತ್ತು. ಚುನಾವಣಾ ಪ್ರಕ್ರಿಯೆ ಕುರಿತ ಸಾವಿರಾರು ಪುಟಗಳ ಪುಸ್ತಕವನ್ನು ನೀಡಿ ಏಕಾಏಕಿ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿತ್ತು. ಇದು ಸರಿಯೇ’ ಎಂದು ಸಂಘದ ಅಧ್ಯಕ್ಷ (ಪ್ರಭಾರ) ಜಯವಿಭವಸ್ವಾಮಿ ಪ್ರಶ್ನಿಸಿದರು.

‘ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಯಾವ ಮಾನದಂಡ ಅನುಸರಿಸಿದ್ದಾರೋ ಗೊತ್ತಿಲ್ಲ. ತಳಮಟ್ಟದಲ್ಲಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ನಡೆಸುವ ಜವಾಬ್ದಾರಿ ಕೆಎಎಸ್‌ ಶ್ರೇಣಿಯ ಅಧಿಕಾರಿಗಳ ಮೇಲಿರುತ್ತದೆ. ಅವರು ಎಂದಿನ ಕಾರ್ಯಭಾರದ ನಡುವೆ ಚುನಾವಣಾ ಕಾರ್ಯವನ್ನೂ ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಏಕಾಏಕಿ ಪರೀಕ್ಷೆ ಹಮ್ಮಿಕೊಂಡು, ನೀವು ಉತ್ತೀರ್ಣರಾಗಿಲ್ಲ ಎಂದು ಬಿಂಬಿಸಿ ಅವರ ನೈತಿಕ ಸ್ಥೈರ್ಯ ಕಸಿದುಕೊಳ್ಳುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಪರೀಕ್ಷೆ ನಡೆಸುವುದಕ್ಕೆ ನಮ್ಮ ವಿರೋಧ ಇಲ್ಲ. ಈ ಕ್ರಮ ಒಳ್ಳೆಯದೇ. ಈ ಬಾರಿ ಚುನಾವಣಾಧಿಕಾರಿಗಳನ್ನಾಗಿ ಆಯ್ಕೆ ಮಾಡಿದವರ ಪೈಕಿ ಬಹುತೇಕರು ಮೊದಲ ಬಾರಿ ಈ ಹೊಣೆ ನಿಭಾಯಿಸುತ್ತಿದ್ದಾರೆ. ಅವರಿಗೆ ಪರೀಕ್ಷೆ ನಡೆಸುವುದೇ ಆದರೆ, ಆಯೋಗವು ಆರು ತಿಂಗಳ ಮೊದಲೇ ಸುವ್ಯವಸ್ಥಿತ ತರಬೇತಿ ನೀಡಬೇಕಿತ್ತು’ ಎಂದರು.

‘ದಿನವಿಡೀ ನಡೆಯುವ ವಿಡಿಯೊ ಕಾನ್ಫರೆನ್ಸ್‌ಗೆ  ಅಧಿಕಾರಿಗಳು ಹಾಜರಾಗಬೇಕು, ಇನ್ನೊಂದೆಡೆ ಕ್ಷೇತ್ರದಲ್ಲಿ ಆಗುವ ಚಟುವಟಿಕೆ ಮೇಲೂ ನಿಗಾ ಇಡಬೇಕು. ಅದರ ನಡುವೆ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಈಗಲೂ ಆಯೋಗವು ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಿ. ಅದಕ್ಕೆ ಸಿದ್ಧಗೊಳ್ಳುವುದಕ್ಕೆ ಕಾಲಾವಕಾಶ ನೀಡಲಿ. ಆಗ ಎಲ್ಲ ಅಧಿಕಾರಿಗಳೂ ಉತ್ತೀರ್ಣರಾಗುತ್ತಾರೆ ಎಂದರು.

ಮತದಾರರ ಪಟ್ಟಿ ತಯಾರಿಸುವುದು, ಮತಗಟ್ಟೆಗಳನ್ನು ಗುರುತಿಸುವುದು, ಸಿಬ್ಬಂದಿ ನಿಯೋಜನೆ, ಮತ ಎಣಿಕೆ ಸೇರಿದಂತೆ ಚುನಾವಣೆಯ ಎಲ್ಲ ಹಂತಗಳಲ್ಲೂ ಚುನಾವಣಾಧಿಕಾರಿಗಳೇ ನಿಭಾಯಿಸುತ್ತಾರೆ. ಚುನಾವಣಾ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಇವರಿಗೆ ಖಾಸಗಿ ಬದುಕು ಎಂಬುದೇ ಇಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅವರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಆಗಬೇಕು ಎಂದು ಅವರು ಒತ್ತಾಯಿಸಿದರು.

**

‘ಮಾಹಿತಿ ಕನ್ನಡದಲ್ಲಿಲ್ಲ’

ತಹಶೀಲ್ದಾರ್ ಶ್ರೇಣಿಗೆ ಬಡ್ತಿ ಪಡೆದ ಅಧಿಕಾರಿಗಳನ್ನೇ ಹೆಚ್ಚಿನ ಕಡೆ ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅವರಿಗೆ ಇಂಗ್ಲಿಷ್‌ ಪರಿಜ್ಞಾನ ಅಷ್ಟಾಗಿ ಇಲ್ಲ. ಚುನಾವಣಾ ಕರ್ತವ್ಯ ಕುರಿತ ಮಾಹಿತಿಯನ್ನು ಇಂಗ್ಲಿಷ್‌ನಲ್ಲೇ ನೀಡಲಾಗುತ್ತಿದೆ. ಕನ್ನಡದಲ್ಲೇ ಮಾಹಿತಿ ನೀಡಲು ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಜಯವಿಭವಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT