ಬೀದರ್: ಸತತ ಮೂರನೇ ದಿನವಾದ ಸೋಮವಾರವೂ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಕಳೆದೆರಡು ದಿನಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಸಾಕಷ್ಟು ತಗ್ಗಿದೆ. ಆದರೆ, ಹಾನಿಯ ಪ್ರಮಾಣ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಶನಿವಾರ ಮತ್ತು ಭಾನುವಾರ ಮಳೆಯ ತೀವ್ರತೆ ಹೆಚ್ಚಿತ್ತು. ಹಗಲು–ರಾತ್ರಿಯೆನ್ನದೆ ಸತತವಾಗಿ ಸುರಿದ ವರ್ಷಧಾರೆಗೆ ಜಿಲ್ಲೆಯ ಹಳ್ಳ–ಕೊಳ್ಳ, ಚೆಕ್ ಡ್ಯಾಂ, ಬ್ರಿಜ್ ಕಂ ಬ್ಯಾರೇಜ್‌ಗಳು ತುಂಬಿ ಹರಿಯುತ್ತಿವೆ. ಮಾಂಜ್ರಾ ನದಿ ಮೈದುಂಬಿಕೊಂಡು ಹರಿಯುತ್ತಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಭಾಲ್ಕಿ, ಹುಲಸೂರಿನ ಕೆಲ ಗ್ರಾಮಗಳ ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರ ಚಿಂತೆ ಹೆಚ್ಚಿಸಿದೆ. ಕಾರಂಜಾ ಜಲಾಶಯ ಬಹುತೇಕ ಭರ್ತಿಯಾಗಿದೆ.
ಸೋಮವಾರ ಬಿಟ್ಟು ಬಿಟ್ಟು ದಿನವಿಡೀ ಮಳೆಯಾಗಿದೆ. ಆದರೆ, ಅದು ಜಿಟಿಜಿಟಿಯಾಗಿ ಸುರಿದಿದೆ. ಆದರೂ ಜಿಲ್ಲೆಯಾದ್ಯಂತ 119 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಭಾನುವಾರ 38 ಮನೆಗಳಿಗೆ ಹಾನಿ ಉಂಟಾಗಿತ್ತು. ಸೋಮವಾರ ಕುಸಿದು ಬಿದ್ದಿರುವ ಮನೆಯೊಳಗಿನ ದವಸ ಧಾನ್ಯಗಳು, ಬಟ್ಟೆಗಳೆಲ್ಲ ಮಳೆ ನೀರಿನಲ್ಲಿ ನೆನೆದು ಹಾಳಾಗಿದ್ದು, ಸೂರು ಕಳೆದುಕೊಂಡವರ ಬದುಕು ಅತಂತ್ರಗೊಳಿಸಿದೆ. ತಕ್ಷಣವೇ ಜಿಲ್ಲಾಡಳಿತ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.
ಶ್ರಾವಣ ಮಾಸದ ಕಡೆಯ ಸೋಮವಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಜಿಟಿಜಿಟಿ ಮಳೆ ಅವುಗಳನ್ನೆಲ್ಲ ಅಸ್ತವ್ಯಸ್ತಗೊಳಿಸಿತು. ಜಿಲ್ಲಾಡಳಿತದಿಂದ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಹುತೇಕರು ಮನೆ ಬಿಟ್ಟು ಹೊರಗೆ ಬರಲಿಲ್ಲ. ವ್ಯಾಪಾರ ವಹಿವಾಟು ಕೂಡ ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ. ದೇವಸ್ಥಾನಗಳಲ್ಲೂ ಜನರ ಸಂಖ್ಯೆ ವಿರಳವಾಗಿತ್ತು.
ಮೂರು ದಿನಗಳ ಕಾಲ ಸತತ ಸುರಿದ ಮಳೆಗೆ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳ ರಸ್ತೆಗಳ ಚಹರೆಗಳು ಸಂಪೂರ್ಣ ಬದಲಾಗಿವೆ. ಅವುಗಳ ಗುಣಮಟ್ಟ ಎಂತಹುದು ಎಂಬುದು ಮೂರೇ ದಿನಗಳ ಮಳೆ ಎತ್ತಿ ತೋರಿಸುವ ಕೆಲಸ ಮಾಡಿದೆ.
ನಗರದ ನೌಬಾದ್ ಬಸವೇಶ್ವರ ವೃತ್ತದಿಂದ ಶಿವನಗರ ವರೆಗಿನ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಎಷ್ಟರಮಟ್ಟಿಗೆ ಗುಂಡಿಗಳು ಬಿದ್ದಿವೆ ಅಂದರೆ ಇಲ್ಲಿ ಹಿಂದೆ ರಸ್ತೆಯಿತ್ತೋ ಎಂಬ ಅನುಮಾನ ಕಾಡುತ್ತದೆ. ಅದೇ ರೀತಿ ಚವಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಚಿದ್ರಿ–ಮೈಲೂರ್ ರಿಂಗ್‌ರೋಡ್ ಸಂಪೂರ್ಣ ಹಾಳಾಗಿದೆ. ಇನ್ನು, ಹೈದರಾಬಾದ್ ರಸ್ತೆಯ ಬಿದ್ರಿ ಚೌಕದ ಪರಿಸರದಲ್ಲಿ ಅಪಾರ ನೀರು ನಿಂತಿದ್ದು, ಮಿನಿ ಕೆರೆಯಂತಾಗಿದೆ. ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡದ ಕಾರಣ ಈ ರೀತಿಯಾಗಿದೆ.
ಬೀದರ್ ನಗರದ ನ್ಯೂ ಆದರ್ಶ ಕಾಲೊನಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯಿರದ ಕಾರಣ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಾವು, ಚೇಳುಗಳು ಮನೆಯೊಳಗೆ ಹೋಗುತ್ತಿರುವುದರಿಂದ ಜನರ ನೆಮ್ಮದಿಗೆ ಭಂಗ ಉಂಟಾಗಿದೆ.
‘ಮಳೆಗೆ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಓಡಾಡಲು ಭಯವಾಗುತ್ತಿದೆ. ಮನೆಯೊಳಗೆ ನೆಮ್ಮದಿಯಾಗಿ ಇರೋಣ ಎಂದರೆ ಮಳೆ ನೀರಿನೊಂದಿಗೆ ಹಾವುಗಳು ಮನೆಯೊಳಗೆ ಬರುತ್ತಿವೆ. ಇದಕ್ಕಿಂತ ಅವ್ಯವಸ್ಥೆ ಮತ್ತೊಂದಿಲ್ಲ. ಜಿಲ್ಲೆಯ ಇಬ್ಬರು ಮಂತ್ರಿಗಳಿದ್ದರೂ ಇದರ ಬಗ್ಗೆ ಏನೂ ಮಾಡುತ್ತಿಲ್ಲ. ಕನಿಷ್ಠ ಸೌಕರ್ಯ ಕೊಡದಿದ್ದರೆ ಜನ ಬದುಕುವುದಾದರೂ ಹೇಗೆ’ ಎಂದು ನ್ಯೂ ಆದರ್ಶ ಕಾಲೊನಿಯ ಬಸವರಾಜ ಪ್ರಶ್ನಿಸಿದರು.
ಕಮಲನಗರದಲ್ಲಿ ಅತ್ಯಧಿಕ ಮಳೆ
ಜಿಲ್ಲೆಯಲ್ಲಿ ಕಮಲನಗರ ತಾಲ್ಲೂಕಿನಲ್ಲಿ ಭಾನುವಾರ ಅತ್ಯಧಿಕ ಮಳೆಯಾಗಿರುವುದು ವರದಿಯಾಗಿದೆ. ತಾಲ್ಲೂಕಿನ ದಾಬಕಾ ಹೋಬಳಿಯಲ್ಲಿ 12.1ಸೆಂ.ಮೀ ಕಮಲನಗರದಲ್ಲಿ 11 ಸೆಂ.ಮೀ ಠಾಣಾಕೂಶನೂರಿನಲ್ಲಿ 10.09 ಸೆಂ.ಮೀ ಮಳೆಯಾಗಿದೆ. ಔರಾದ್‌ನಲ್ಲಿ 8 ಸೆಂ.ಮೀ ಬೀದರ್‌ನಲ್ಲಿ 6.3 ಸೆಂ.ಮೀ ಭಾಲ್ಕಿಯಲ್ಲಿ 6.8 ಸೆಂ.ಮೀ ಬಸವಕಲ್ಯಾಣದಲ್ಲಿ 4.5 ಸೆಂ.ಮೀ ಹುಮನಾಬಾದ್‌ನಲ್ಲಿ 5.1 ಸೆಂ.ಮೀ ಚಿಟಗುಪ್ಪದಲ್ಲಿ 5 ಸೆಂ.ಮೀ ಹುಲಸೂರಿನಲ್ಲಿ 6.8 ಸೆಂ.ಮೀ ವರ್ಷಧಾರೆಯಾಗಿದೆ.
ತುಂಬುವ ಹಂತಕ್ಕೆ ಕಾರಂಜಾ
ಸತತ ಮಳೆಗೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಸಮೀಪದ ಕಾರಂಜಾ ಜಲಾಶಯ ಸಂಪೂರ್ಣ ತುಂಬುವ ಹಂತಕ್ಕೆ ಬಂದಿದ್ದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸಲಾಗುವುದು. ‘ಕಾರಂಜಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ತೆಗೆದು ನದಿಗೆ ನೀರು ಬಿಡಲಾಗುವುದು. ಜಲಾಶಯ ಕೆಳಭಾಗದ ಗ್ರಾಮಗಳ ಜನ ನದಿಗೆ ಇಳಿಯಬಾರದು. ಜಾನುವಾರುಗಳನ್ನು ಬಿಡಬಾರದು. ಎಚ್ಚರಿಕೆ ವಹಿಸಬೇಕು’ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ್–ಔರಾದ್ ಸಂಪರ್ಕಿಸುವ ಇಸ್ಲಾಂಪುರ ಸೇತುವೆ ಮಾಂಜ್ರಾ ನದಿ ಹಿನ್ನೀರಿನಲ್ಲಿ ಮುಳುಗಿದ್ದು ಸಂಚಾರ ಕಡಿತಗೊಂಡಿದೆ. ಅನ್ಯಮಾರ್ಗದಿಂದ ಸುತ್ತು ಬಳಸಿ ಜನ ಸಂಚರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.