ಸೋಮವಾರ, ಸೆಪ್ಟೆಂಬರ್ 27, 2021
28 °C
ಸೋಯಾ ಬೆಳೆಯಲ್ಲಿ ಹಸಿರು ಜಿಗಿ ಹುಳಗಳು; ಇಳುವರಿ ಕುಂಠಿತಗೊಳ್ಳುವ ಭೀತಿ

ಮಳೆ ಅಭಾವ: ಆತಂಕದಲ್ಲಿ ರೈತರು

ಗಿರಿರಾಜ ಎಸ್ ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಹೋಬಳಿಯಾದ್ಯಂತ ಕಳೆದೆರಡು ವಾರಗಳಿಂದ ಮಳೆ ಬಾರದಿರುವುದರಿಂದ ಇಳುವರಿ ಕುಂಠಿತಗೊಳ್ಳಬಹುದು ಎಂಬ ಆತಂಕದಲ್ಲಿ ರೈತರಿದ್ದಾರೆ. ಹೀಗಾಗಿ ಮಳೆಯ ನಿರೀಕ್ಷೆಯಲ್ಲಿ ರೈತರು ಮುಗಿಲು ನೋಡುವಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸರಿಯಾಗಿ ಸುರಿದಿದೆ. ಹೋಬಳಿಯ ಎಲ್ಲೆಡೆ ಬೆಳೆದ ಹೆಸರು, ಸೋಯಾ ಸೇರಿದಂತೆ ಇನ್ನಿತರ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಹೂ, ಕಾಯಿಯಿಂದ ಕಣ್ಮನ ಸೆಳೆಯುತ್ತಿವೆ. ಆದರೆ ಸದ್ಯ ಕಾಯಿ ಗಟ್ಟಿಯಾಗುವ ಸಮಯವಿದೆ. ಆದ್ದರಿಂದ ಮಳೆಯ ಅವಶ್ಯವಿದೆ ಎಂದು ಹಳ್ಳಿಖೇಡ ಗ್ರಾಮದ ರೈತ ನಾಗೇಶ ಹೇಳುತ್ತಾರೆ.

ಪ್ರತಿ ದಿನ ಮೋಡ ಕವಿಯುತ್ತಿದೆ. ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೋಡ ಚೆದುರಿ ಬಿಸಿಲು ಬೀಳುತ್ತಿದೆ. ಮೋಡವು ಮಳೆ ಹನಿಗಳನ್ನು ಭೂಮಿಗೆ ಸುರಿಸದೆ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರೈತರು ಹೇಳಿದರು.

ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಹೋಬಳಿಯ ದಾಡಗಿ, ಚಳಕಾಪುರ, ನೆಲವಾಡ ಸೇರಿದಂತೆ ಇತರೆ ಗ್ರಾಮಗಳ ರೈತರ ಹೊಲಗಳಲ್ಲಿ ಬಿತ್ತನೆ ಮಾಡಿರುವ ಉದ್ದು, ಹೆಸರು, ಸೋಯಾ ಬೆಳೆಯಲ್ಲಿ ಹಸಿರು ಜಿಗಿ ಹುಳಗಳು ಕಂಡುಬಂದಿದ್ದು, ಎಲೆಯನ್ನು ತಿನ್ನುವ ಮೂಲಕ ಬೆಳೆಗೆ ಹಾನಿಯನ್ನುಂಟು ಮಾಡುತ್ತಿರುವುದರಿಂದ ರೈತರು ಆತಂಕಪಡುವಂತಾಗಿದೆ.

ಬೆಳೆಗೆ ಜಿಗಿ ಹುಳು ಕಂಡುಬಂದರೆ ರೈತರು ಕೀಟನಾಶಕಗಳಾದ ಅಸಿಫೆಟ್ 75 ಎಸ್‌.ಪಿ 1 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ 0.5 ಮಿ.ಲೀ ಅಥವಾ ಥಯೊ ಮಿಥಾಕ್ಸಾಮ್ 20 ಡಬ್ಲ್ಯೂ.ಜಿ 0.2 ಗ್ರಾಂ ಅಥವಾ ಡೈಮಿಥೊಯಟ್ 1.7 ಮಿ.ಲೀ ಅಥವಾ ಮೊನೊಕ್ರೊಟೊಫಾಸ್ 36 ಎಸ್.ಎಲ್ 1.5 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ಅಧಿಕಾರಿ ಬಸವ ಪ್ರಭು ತಿಳಿಸುತ್ತಾರೆ.

ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದೆ. ಆದ್ದರಿಂದ ರೈತರು ದುಬಾರಿ ಬೆಲೆಯಲ್ಲಿ ಬೀಜಗಳನ್ನು ಹಾಗೂ ರಸಗೊಬ್ಬರ ಬಳಸಿ ಬಿತ್ತನೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಬೆಳೆಯು ಸಮೃದ್ಧವಾಗಿ ಬೆಳೆದಿದೆ. ಆದರೆ ಮೋಡ ಕವಿಯುತ್ತಿರುವುದರಿಂದ ಬೆಳೆಗಳಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಇಳುವರಿ ಕುಂಠಿತಗೊಳ್ಳುತ್ತದೆ ಎಂದು ರೈತ ಶಿವಲಿಂಗ ಬೂದೆ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.