ಸೋಮವಾರ, ನವೆಂಬರ್ 18, 2019
23 °C

ಕಬ್ಬಿಗೆ ಬೆಲೆ ನಿಗದಿಪಡಿಸಲು ರೈತ ಸಂಘ ಆಗ್ರಹ

Published:
Updated:
Prajavani

ಬೀದರ್: ಕಬ್ಬಿಗೆ ಬೆಲೆ ನಿಗದಿಗೊಳಿಸಿದ ನಂತರವೇ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿವೆ.

ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಅಥವಾ ಕಬ್ಬಿಗೆ ಹೆಚ್ಚಿನ ಬೆಲೆ ಕೊಡುವ ಸಕ್ಕರೆ ಕಾರ್ಖಾನೆಗಳಿಗೆ ಕಳಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ಮನವಿ ಸಲ್ಲಿಸಿದರು.

ರೈತರು ಹೊರರಾಜ್ಯಕ್ಕೆ ಕಬ್ಬು ಸಾಗಿಸಲು ಮುಂದಾದರೆ ಜಿಲ್ಲಾಡಳಿತ ಅದನ್ನು ತಡೆಯಬಾರದು. ಬೆಲೆಯನ್ನೂ ನಿಗದಿಪಡಿಸದೆ, ನೆರೆಯ ರಾಜ್ಯಕ್ಕೆ ಕಬ್ಬನ್ನು ಸಾಗಿಸಲು ಅವಕಾಶ ಕೊಡದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಖಾಸಿಂ ಅಲಿ, ವಿಠ್ಠಲರೆಡ್ಡಿ ಆಣದೂರ, ಶ್ರೀಮಂತ ಬಿರಾದಾರ, ಸಿದ್ರಾಮಪ್ಪ ಬಾಲಕುಂದೆ, ಅಮೃತಪ್ಪ ಎಂ.ಡಿ., ಶೋಭಾದೇವಿ ಕಾರಬಾರಿ, ಬಸವರಾಜ ಅಷ್ಟೂರ, ಶಾಂತಮ್ಮ ಮೂಲಗೆ, ಶಂಕರೆಪ್ಪ ಪಾರಾ ಇದ್ದರು.

ರೈತ ಸಂಘ ಆಕ್ಷೇಪ: ರಾಜ್ಯ ಸರ್ಕಾರ ನೆರೆಯ ರಾಜ್ಯಗಳಿಗೆ ಕಬ್ಬು ಸಾಗಿಸಲು ನಿಷೇಧ ಹೇರಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ
ಖಂಡಿಸಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಯಲ್ಲಿ ಎಲ್ಲ ರೈತರಿಗೆ ಪರಿಹಾರ ದೊರಕಿಲ್ಲ. ಬೆಳೆ ವಿಮೆಯಲ್ಲಿಯೂ ಬಂದಿಲ್ಲ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಬಿಎಸ್‌ಎಸ್‌ಕೆ ಕಾರ್ಖಾನೆ ಪ್ರಾರಂಭಿಸಬೇಕು. ರೈತರು ಸಾಲದ ಮೂಲಕ ಖರೀದಿಸಿದ ಟ್ರ್ಯಾಕ್ಟರ್‌ ಕಂತುಗಳನ್ನು ಪಾವತಿಸಲು ಸಮಯಾವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)