ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರದ ರಾಮಲಿಂಗೇಶ್ವರ ದೇವಸ್ಥಾನ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿದ್ದು ಶ್ರಾವಣ ಮಾಸದಲ್ಲಿನ ಅಪಾರ ಭಕ್ತರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿದೆ.
ದೇವಸ್ಥಾನದ ಎದುರಲ್ಲಿ ಹಳೆಯ ಪುಷ್ಕರಣಿಯೂ ಇದೆ. ಇಲ್ಲಿನ ನೀರು ಸೇವಿಸುವುದು ಹಾಗೂ ಇದರಿಂದ ಸ್ನಾನ ಮಾಡುವುದು ಪುಣ್ಯದ ಕಾರ್ಯ ಎನ್ನಲಾಗುತ್ತದೆ. ಆದ್ದರಿಂದ ಇದನ್ನು ಅಮೃತಕುಂಡ ಎನ್ನಲಾಗುತ್ತದೆ. ಭೀಕರ ಬರಗಾಲದ ಪರಿಸ್ಥಿತಿಯಲ್ಲೂ ಇಲ್ಲಿನ ನೀರು ಬತ್ತಿರಲಿಲ್ಲ ಎಂದು ಗ್ರಾಮದ ಹಿರಿಯರು ನೆನಪಿಸುತ್ತಾರೆ.
ಪುಷ್ಕರಣಿ ಹಾಗೂ ದೇವಸ್ಥಾನದ ಗರ್ಭಗೃಹ ಕೆತ್ತನೆಯ ಕಲ್ಲುಗಳಿಂದ ಕಟ್ಟಲಾಗಿದೆ. ಒಳಗಡೆ ಶಿವಲಿಂಗವಿದೆ. ಗೋಡೆಗಳಲ್ಲಿ ಅಲ್ಲಲ್ಲಿ ಶಿಲ್ಪಕಲಾಕೃತಿಗಳು ಇವೆ. ಈ ದೇವಸ್ಥಾನ ಚಾಲುಕ್ಯರ ಕಾಲದ್ದಾಗಿದ್ದು ಮೊದಲಿನಿಂದಲೂ ಎಲ್ಲ ಸಮುದಾಯದ ಭಕ್ತರನ್ನು ಸೆಳೆಯುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ತಗ್ಗಿನಲ್ಲಿ ದೇವಸ್ಥಾನವಿದ್ದು ಸುತ್ತಲಿನಲ್ಲಿ ಗಿಡಮರಗಳು, ಎದುರಲ್ಲಿ ನಾಲೆ ಹರಿಯುವುದರಿಂದ ಹಸಿರು ಕಂಗೊಳಿಸುತ್ತದೆ. ಈ ಸ್ಥಳ ನಿಸರ್ಗ ರಮಣೀಯವೂ ಆಗಿರುವುದರಿಂದ ಶಾಲಾ ಮಕ್ಕಳು ವನಭೋಜನಕ್ಕೂ ಬರುತ್ತಾರೆ. ಆದರೆ, ಶ್ರಾವಣ ಮಾಸದಲ್ಲಿ ಇಲ್ಲಿಗೆ ದರ್ಶನಕ್ಕೆ ಬರುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ತಿಂಗಳಲ್ಲಿನ ಪ್ರತಿ ಸೋಮವಾರ ಅಷ್ಟೇ ಅಲ್ಲ, ಇತರೆ ದಿನಗಳಲ್ಲಿಯೂ ಭಕ್ತರು ಪೂಜೆ ಸಲ್ಲಿಸುತ್ತಾರೆ.
`ಈ ಸ್ಥಳಕ್ಕೆ ರಾಮಸೀತೆಯರು ಬಂದು ಹೋಗಿದ್ದಾರೆ ಎಂಬ ಪ್ರತೀತಿ ಇರುವುದರಿಂದ ಮೊದಲಿನಿಂದಲೂ ಶ್ರೀರಾಮನ ಕ್ಷೇತ್ರವಾಗಿ ಈ ದೇವಸ್ಥಾನ ಪ್ರಸಿದ್ಧವಾಗಿದೆ. ಶ್ರಾವಣ ತಿಂಗಳ ಕೊನೆಯಲ್ಲಿ ಇಲ್ಲಿ ಜಾತ್ರೆಯೂ ನಡೆಯುತ್ತದೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಜಾಧವ ತಿಳಿಸಿದ್ದಾರೆ.
Quote - ರಾಮಲಿಂಗೇಶ್ವರ ದೇವಸ್ಥಾನ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿದ್ದು ರಾಜ್ಯದ ಹಾಗೂ ತೆಲಂಗಾಣ ಮಹಾರಾಷ್ಟ್ರದ ಅಪಾರ ಭಕ್ತರು ಬರುತ್ತಾರೆ ಸುಧಾಕರ ಜಾಧವ ಗ್ರಾ.ಪಂ.ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.