ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ತಾಣದ ಮಧ್ಯೆ ರಾಮಲಿಂಗೇಶ್ವರ

ಚಂಡಕಾಪುರ: ಕೆರೆ ನಿರ್ಮಾಣ, ಬೃಹತ್ ಶಿವ ಪ್ರತಿಮೆ ಸ್ಥಾಪನೆಗೆ ಸಕಲ ಸಿದ್ಧತೆ
Last Updated 4 ಜುಲೈ 2021, 6:37 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರದ ರಾಮಲಿಂಗೇಶ್ವರ ದೇವಸ್ಥಾನ ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿನ ಅಮೃತಕುಂಡಜನಾಕರ್ಷಣೆಯ ಕೇಂದ್ರವಾಗಿದೆ. ತಾಲ್ಲೂಕು ಆಡಳಿತದಿಂದ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರಿಂದ ಜನರ ಗಮನ ಸೆಳೆಯುತ್ತಿದೆ.

ಈ ಭಾಗದ ಪುರಾತನ ದೇವಸ್ಥಾನಗಳಲ್ಲಿ ಇದೂ ಒಂದಾಗಿದೆ. 11ನೇ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಾಣಗೊಂಡಿದೆ. ಕೆತ್ತನೆಯ ಕಲ್ಲಿನ ಕಂಬಗಳ ಹಾಗೂ ಸುಂದರ ಶಿಲ್ಪಗಳನ್ನು ಅಳವಡಿಸಿರುವ ಗರ್ಭಗೃಹವಿದೆ. ಎತ್ತರದ ಗೋಪುರ ಇರುವ ಜತೆಗೆ ಎದುರಲ್ಲಿ ಸದಾಕಾಲ ತುಂಬಿಕೊಂಡಿರುವ ಸಿಹಿ ನೀರಿನ ಪುಷ್ಕರಣಿ ಹಾಗೂ ಸುತ್ತಲಿನಲ್ಲಿ ಗಿಡಮರಗಳಿಂದ ಹಸಿರು ಹಾಗೂ ತಂಪು ವಾತಾವರಣ ಇರುವುದರಿಂದ ಭಕ್ತರನ್ನು ಆಕರ್ಷಿಸುತ್ತದೆ.

ಹೈದರಾಬಾದ್- ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ತಗ್ಗು ಪ್ರದೇಶದಲ್ಲಿನ ಈ ಸ್ಥಳಕ್ಕೆ ಹೋಗುವುದಕ್ಕೆ ಉತ್ತಮ ರಸ್ತೆ, ಪ್ರವೇಶ ಸ್ಥಳದಲ್ಲಿ ಸ್ವಾಗತ ಕಮಾನು ಇದೆ. ಗುಡ್ಡದಿಂದ ಕೆಳಗೆ ಇಳಿಯುವುದಕ್ಕೆ ಇದ್ದ ಕಿರಿದಾದ ರಸ್ತೆ ಅಗಲಗೊಳಿಸಲಾಗಿದೆ. ದೇವಸ್ಥಾನದ ಸುತ್ತಲಿನ ಗುಡ್ಡ ಅಗೆದಿದ್ದರಿಂದ ಇಕ್ಕಟ್ಟಾಗಿದ್ದ ಜಾಗ ಈಗ ವಿಶಾಲವಾಗಿ ಕಾಣುತ್ತಿದೆ. ವಾಹನಗಳನ್ನೂ ತೆಗೆದುಕೊಂಡು ಹೋಗಿ ನಿಲ್ಲಿಸುವಷ್ಟು ಸ್ಥಳಾವಕಾಶವಿದೆ.

‘ಹಬ್ಬಹರಿದಿನಗಳಲ್ಲಿ ಅಲ್ಲದೆ ಶ್ರಾವಣ ಮಾಸದಲ್ಲಿ ಇಲ್ಲಿಗೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಇದೇ ತಿಂಗಳ ಕೊನೆಯಲ್ಲಿ ಜಾತ್ರೆಯೂ ನಡೆಯುತ್ತದೆ. ಬರುವ ಭಕ್ತರೆಲ್ಲರೂ ಅಮೃತಕುಂಡ ಎಂದೇ ಕರೆಯುವ ಪುಷ್ಕರಣಿಯಲ್ಲಿ ಮಿಂದು ದೇವಸ್ಥಾನದಲ್ಲಿ ಪೂಜೆಗೈಯುವ ಮತ್ತು ದರ್ಶನ ಪಡೆಯುವ ಪರಿಪಾಠವಿದೆ. ಹೀಗಾಗಿ ಈ ನೀರು ಕಲ್ಮಷಗೊಳ್ಳುತ್ತಿತ್ತು. ಈ ಕಾರಣ ಆವರಣದ ಹೊರಗಡೆ ಹೊಂಡ ನಿರ್ಮಿಸಿ ಇಲ್ಲಿನ ನೀರು ಅಲ್ಲಿಗೆ ಸಾಗಿಸಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅರ್ಚಕ ಶಂಕರಯ್ಯ ಸ್ವಾಮಿ ತಿಳಿಸಿದರು.

‘ದೇವಸ್ಥಾನಕ್ಕೆ ಬರುವ ದೇಣಿಗೆಯ ಹಣದಿಂದ ಎದುರಿಗೆ ಸಭಾ ಮಂಟಪ, ಕಲ್ಯಾಣ ಮಂಟಪ ಕಟ್ಟಲಾಗುತ್ತಿದೆ. ಗುಡ್ಡದಿಂದ ಇಳಿಯುವ ದಾರಿ ಪಕ್ಕ ಉದ್ಯಾನ ನಿರ್ಮಿಸಲಾಗಿದೆ. ಅಮಾವಾಸ್ಯೆ- ಹುಣ್ಣಿಮೆಗೆ ಭಕ್ತರ ಸಂಖ್ಯೆ ಹೆಚ್ಚುವ ಕಾರಣ ದರ್ಶನ ಪಡೆಯುವುದಕ್ಕೆ ನೂಕುನುಗ್ಗಲಾಗುತ್ತಿತ್ತು. ಆದ್ದರಿಂದ ಶಾಸಕ ಶರಣು ಸಲಗರ ಅವರು ಸ್ವಂತ ಖರ್ಚಿನಿಂದ ಗರ್ಭಗೃಹದವರೆಗೆ ಭಕ್ತರು ಸಾಲಿನಲ್ಲಿ ಹೋಗುವುದಕ್ಕೆ ಕಬ್ಬಿಣದ ಸಲಾಕೆ ಅಳವಡಿಸಿದ್ದಾರೆ. ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಸಲಗರ ಕೂಡ ಆಗಾಗ ಇಲ್ಲಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತಾರೆ’ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಶರಣು ಪವಾಡಶೆಟ್ಟಿ ಮಾಹಿತಿ ನೀಡಿದರು.

‘ಗುಡ್ಡದಿಂದ ಕೆಳಗಿಳಿಯುವ ಸ್ಥಳದಲ್ಲಿ ಶಿವನ ವಿಗ್ರಹ ಪ್ರತಿಷ್ಠಾಪಿಸುವ ಕೆಲಸವೂ ಪ್ರಗತಿಯಲ್ಲಿದ್ದು, ಇದಕ್ಕಾಗಿ ಎತ್ತರದ ಪೀಠ ಸಿದ್ಧಪಡಿಸಲಾಗುತ್ತಿದೆ. ಸುತ್ತಲಿನ ಗುಡ್ಡ ಅಗೆದಾಗ ದೊರೆತ ಮಣ್ಣು ಇಲ್ಲಿನ ನಾಲೆಗೆ ಅಡ್ಡಲಾಗಿ ಹಾಕಲಾಗಿದ್ದು ಇದಕ್ಕೆ ಕೆರೆಯ ರೂಪ ಕೊಡುವ ಯೋಜನೆಯೂ ಇದೆ. ಗೋಪುರ ಒಳಗೊಂಡು ಹಳೆಯ ಹಾಗೂ ಹೊಸ ಕಟ್ಟಡಕ್ಕೆ ಶೀಘ್ರದಲ್ಲಿ ಬಣ್ಣ ಹಚ್ಚುವ ಕಾರ್ಯವೂ ನಡೆಯಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT