ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ನಾಮಕರಣವೇ ಅಭಿವೃದ್ಧಿಯಲ್ಲ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕೆ
Last Updated 19 ಅಕ್ಟೋಬರ್ 2020, 13:47 IST
ಅಕ್ಷರ ಗಾತ್ರ

ಬೀದರ್‌: ‘ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿರುವುದೇ ಅಭಿವೃದ್ಧಿಯಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

ನಗರದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಪ್ರಚಾರ, ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಾಗೂ ಇದಕ್ಕೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ₹1,500 ಕೋಟಿ ಮೀಸಲಿಟ್ಟಿತ್ತು. ಬಿಜೆಪಿ ಸರ್ಕಾರ ಹೊಸ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರ ಉಪನ್ಯಾಸಕರ ನೇಮಕಾತಿಗೆ ತಡೆಯಾಜ್ಞೆ ನೀಡಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನದಿಗಳಿಗೆ ಪ್ರವಾಹ ಬಂದರೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪ ಮಾಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಉಪ ಚುನಾವಣೆ ಬಂದ ಕಾರಣ ಬಸವಕಲ್ಯಾಣದ ನೆನಪಾಗಿದೆ. ಜನರ ದಾರಿ ತಪ್ಪಿಸಲು ಇಲ್ಲಿಗೆ ಬಂದಿದ್ದಾರೆ. ಅವರು ಎಷ್ಟೇ ನಾಟಕ ಮಾಡಿದರೂ ಇಲ್ಲಿ ಯಶ ಕಾಣಲು ಸಾಧ್ಯವಿಲ್ಲ’ ಎಂದರು.‌

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿಯಾದಾಗ ಕಾಂಗ್ರೆಸ್‌ ಮುಖಂಡರು ಕೊಡಗು ಜಿಲ್ಲೆಗೂ ಭೇಟಿ ಕೊಟ್ಟಿದ್ದರು. ನಳಿನ್‌ಕುಮಾರ್‌ ಕಟೀಲ್‌ ಅವರು ಒಮ್ಮೆ ಹಿಂದಿನ ಪತ್ರಿಕೆಗಳನ್ನು ತೆಗೆದು ನೋಡಲಿ’ ಎಂದು ಹೇಳಿದರು.

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರು ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಅತ್ಯಧಿಕ ಮತಗಳನ್ನು ಪಡೆಯಲು ಸಾಧ್ಯವಾಗುವಂತೆ ಕಾರ್ಯಕರ್ತರು ಇನ್ನಷ್ಟು ಪರಿಶ್ರಮ ಪಡಬೇಕು’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿದರೆ ಹೊಟ್ಟೆ ತುಂಬುವುದಿಲ್ಲ. ರಾಜ್ಯ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸಂತ್ರಸ್ತರ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಬೆಳೆ ನಷ್ಟವಾದರೂ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಒಬ್ಬರೇ ಒಂದೆರಡು ಕಡೆ ಭೇಟಿ ನೀಡಿದ್ದಾರೆ. ಶಾಸಕರಿಗೆ ತಿಳಿಸಿದ್ದರೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತಿತ್ತು. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ, ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಮಾಜಿ ಸಂಸದ ನರಸಿಂಗ್‌ರಾವ್‌ ಸೂರ್ಯವಂಶಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ಇರ್ಷಾದ್‌ ಪೈಲ್ವಾನ್, ಡಿ.ಕೆ.ಸಂಜುಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT