ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಮದ್ಯದ ಅಂಗಡಿ ಮುಚ್ಚಲು ಮನವಿ

ಹುಮನಾಬಾದ್‌: ವೀರಭದ್ರೇಶ್ವರ ಜಾತ್ರೆ ನಾಳೆ
Last Updated 24 ಜನವರಿ 2021, 17:05 IST
ಅಕ್ಷರ ಗಾತ್ರ

ಬೀದರ್‌: ‘ಹುಮನಾಬಾದ್‌ ವೀರಭದ್ರೇಶ್ವರ ಜಾತ್ರೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಒಂದು ದಿನ ಮುಂಚಿತವಾಗಿಯೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ರಾತ್ರಿ ಮದ್ಯದ ಅಂಗಡಿಗಳನ್ನು ತೆರೆದುಕೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ವೀರಭದ್ರೇಶ್ವರ ಭಕ್ತರು ಮನವಿ ಮಾಡಿದ್ದಾರೆ.

‘ಪ್ರತಿ ವರ್ಷ ಜಿಲ್ಲಾಡಳಿತ ಆದೇಶ ಹೊರಡಿಸಿದರೂ ಕೆಲವು ಮದ್ಯದ ಅಂಗಡಿಗಳ ಮಾಲೀಕರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಮುಂಬದಿಯ ಬಾಗಿಲುಗಳನ್ನು ಮುಚ್ಚಿ ಹಿಂಬದಿಯಿಂದ ವ್ಯವಹಾರ ನಡೆಸುತ್ತಾರೆ. ರಾತ್ರಿ ಅನೇಕ ಜನ ಕುಡಿದು ಬೀದಿ–ಬೀದಿ ಅಲೆದಾಡುವುದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಈ ವರ್ಷವಾದರೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಅಬಕಾರಿ ಗುತ್ತಿಗೆದಾರರು ಹಾಗೂ ಮದ್ಯದ ಅಂಗಡಿ ಮಾಲೀಕರ ಲಾಬಿ ದೊಡ್ಡ ಪ್ರಮಾಣದಲ್ಲಿ ಇದೆ. ಸಾರ್ವಜನಿಕರು ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸುವ ಸ್ಥಿತಿಯಲ್ಲಿ ಇಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅಬಕಾರಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

‘ಕೋವಿಡ್‌ ಕಾರಣ ಜಿಲ್ಲಾಡಳಿತ ಜಾತ್ರೆಗಳನ್ನು ರದ್ದುಪಡಿಸಿದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಮುಗಿ ಬೀಳುತ್ತಿರುವುದು ಬೇರೆ ಬೇರೆ ಊರುಗಳಲ್ಲಿ ಕಂಡು ಬರುತ್ತಿದೆ. ವೀರಭದ್ರೇಶ್ವರ ಜಾತ್ರೆಯಲ್ಲಿ ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಹೀಗಾಗಿ ಅಬಕಾರಿ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಅಂಕುಶ ಗೋಖಲೆ ಒತ್ತಾಯಿಸಿದ್ದಾರೆ.

ಮದ್ಯದ ಅಂಗಡಿ ಮಾಲೀಕರಿಗೆ ತಿಳಿವಳಿಕೆ ಪತ್ರ: ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿರುವ ಕಾರಣ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಅಕ್ರಮ ತಡೆಗೆ ಅಬಕಾರಿ ಇಲಾಖೆ ಕ್ರಮಕೈಗೊಂಡಿದೆ. ಜಾತ್ರೆಯ ಸಂದರ್ಭದಲ್ಲಿ ನಿಯಮಾನುಸಾರವೇ ವಹಿವಾಟು ನಡೆಸುವಂತೆ ಸನ್ನದುದಾರರಿಗೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ. ಎಲ್ಲ ಸನ್ನದುದಾರರಿಗೆ ತಿಳಿವಳಿಕೆ ಪತ್ರವನ್ನೂ ಕೊಟ್ಟಿದೆ.

‘ಜ 24ರಂದು ಸನ್ನದುದಾರರ ಸಭೆ ನಡೆಸಿ ಪೂಜಾ ಮಹೋತ್ಸವವು ಶಾಂತಿಯುತವಾಗಿ ನೆರವೇರಲು ಸಾಧ್ಯವಾಗುವಂತೆ ಅಬಕಾರಿ ನಿಯಮಗಳ ಪ್ರಕಾರ ವಹಿವಾಟು ನಡೆಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಎನ್‌ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ್ದಾರೆ.

‘ಹುಮನಾಬಾದ್‌ ಪಟ್ಟಣದಲ್ಲಿ ಯಾವುದೇ ರೀತಿಯಾದಂತಹ ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟ ಆಗದಂತೆ ನೋಡಿಕೊಳ್ಳಲು ಅಬಕಾರಿ ಇಲಾಖೆಯು ಒಟ್ಟು 7 ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳು ದಿನದ 24 ಗಂಟೆಗಳು ಸರದಿಯಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ಕೋವಿಡ್‌ ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿಯಮಾವಗಳಿಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT