ಭಾನುವಾರ, ಜೂನ್ 20, 2021
21 °C
ಜಿಲ್ಲಾಧಿಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ರ

ಬ್ರಿಮ್ಸ್‌ನಲ್ಲಿ ಡಿ ಡೈಮರ್ ಪರೀಕ್ಷೆ ನಡೆಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಸಾಂಕ್ರಾಮಿಕ ರೋಗ ಕೋವಿಡ್– 19 ಮಾರಣಾಂತಿಕ ವಾಗಿದ್ದು, ಹೆಚ್ಚಿನ ಜನರು ರಕ್ತ ಹೆಪ್ಪಗಟ್ಟುವಿಕೆ ಮತ್ತು ಶ್ವಾಸಕೋಶದ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯವಾಗಿದೆ. ಈ ಕಾರಣ ಸೋಂಕಿತರು ಆಸ್ಪತ್ರೆಗೆ ದಾಖಲಾದಾಗ ಅವರ ರಕ್ತ ಪರೀಕ್ಷೆಯ ಮತ್ತು ಇತರ ಪರೀಕ್ಷೆಯ ಜೊತೆಗೆ ಡಿ–ಡೈಮರ್ – ಐ.ಎಲ್ 6 ಪರೀಕ್ಷೆ ಕಡ್ಡಾಯ. ಆದರೆ ಬ್ರಿಮ್ಸ್‌ನಲ್ಲಿ ಕಳೆದ ಏಪ್ರಿಲ್ 21ರಿಂದ ಡಿ–ಡೈಮರ್ ಪರೀಕ್ಷೆ ನಡೆಸಲಾಗುತ್ತಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

‘ಕೋವಿಡ್ ಸೋಂಕಿತರಲ್ಲಿ ರಕ್ತದ ಸಾಂದ್ರತೆಯನ್ನು ಡಿ–ಡೈಮರ್ ಪರೀಕ್ಷೆ ಮೂಲಕ ಪತ್ತೆ ಮಾಡಿ ಅದರ ಆಧಾರದ ಮೇಲೆ ಚಿಕಿತ್ಸೆ ಮತ್ತು ಔಷಧಿಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಕಳೆದ ಒಂದು ತಿಂಗಳಿನಿಂದಲೂ ಬ್ರಿಮ್ಸ್‌ನಲ್ಲಿ ಡಿ–ಡೈಮರ್ ಪರೀಕ್ಷೆಯನ್ನೇ ನಡಸುತ್ತಿಲ್ಲ. ಇದರಿಂದ ಎಷ್ಟು ಕೋವಿಡ್ ಸೋಂಕಿತರ ರಕ್ತಚಲನೆಯಲ್ಲಿ ವ್ಯತ್ಯಯವಾಗಿ ಸಾವಿಗೀಡಾಗಿದ್ದಾರೋ ತಿಳಿಯದಾಗಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ‘ಬ್ರಿಮ್ಸ್‌ನಲ್ಲಿ ಡಿ–ಡೈಮರ್ ಪರೀಕ್ಷೆ ನಡೆಸದಿರುವ ಕಾರಣವೇನು? ಮೂಲಸೌಕರ್ಯದ ಕೊರತೆಯೇ? ಪ್ರಯೋಗಾಲಯ ಸಿಬ್ಬಂದಿ ಕೊರತೆಯೇ? ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಅವರಿಗೆ ಅನುಕೂಲ ಮಾಡಿಕೊಡುವ ದುಷ್ಕೃತ್ಯವೇ?’ ಎಂದು ಪ್ರಶ್ನಿಸಿದ್ದಾರೆ.

‘ಬ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ನಿತ್ಯ ದೂರುಗಳು ಬರುತ್ತಿದ್ದು, ಇದರ ಪರಿಶೀಲನೆ ಆಗಿದೆಯೇ? ಇಲ್ಲಿಗೆ ಬರುವ ಆಮ್ಲಜನಕ, ಔಷಧಗಳ ಲೆಕ್ಕಪರಿಶೋಧನೆ ಆಗುತ್ತಿದೆಯೇ?’ ಎಂದು ಪ್ರಶ್ನಿಸಿರುವ ಅವರು, ‘ನಿತ್ಯ ಬ್ರಿಮ್ಸ್‌ನಲ್ಲಿ ಸರಾಸರಿ 15-20 ಜನ ಏಕೆ ಸಾವಿಗೀಡಾಗುತ್ತಿದ್ದಾರೆ? ಯಾವ ಕಾರಣಕ್ಕಾಗಿ ಇಲ್ಲಿ ಡಿ–ಡೈಮರ್ ಪರೀಕ್ಷೆ ನಡೆಸಲಾಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರು ಉತ್ತರ ಬಯಸುತ್ತಿದ್ದಾರೆ. ಉತ್ತರ ಕೊಡಿ’ ಎಂದು ಆಗ್ರಹಿಸಿದ್ದಾರೆ.

‘ಬ್ರಿಮ್ಸ್‌ನಲ್ಲಿನ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದಾಗಲೆಲ್ಲಾ, ಲೋಪ ಸರಿಪಡಿಸುವ ಪ್ರಯತ್ನ ಆಗಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ ವೈದ್ಯಕೀಯ ಇಲಾಖೆಯ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೋವಿಡ್‌ನಿಂದ ಗುಣಮುಖ ಆದವರಿಗೆ ನಂತರದ ಚಿಕಿತ್ಸೆಯ ಸಂದರ್ಭದಲ್ಲಿಯೂ ಡಿ–ಡೈಮರ್ ಪರೀಕ್ಷೆ ಅತಿ ಮುಖ್ಯವಾಗುತ್ತದೆ. ಇಲ್ಲವಾದರೆ ಅವರು ರಕ್ತ ಹೆಪ್ಪುಗಟ್ಟಿ ಸಾವಿಗೀಡಾಗುವ ಸಂಭವವೂ ಇರುತ್ತದೆ. ಹೀಗಾಗಿ ಕೂಡಲೇ ಅವ್ಯವಸ್ಥೆಯ ಆಗರವಾಗಿರುವ ಬ್ರಿಮ್ಸ್ ಆಸ್ಪತ್ರೆಗೆ ಕಾಯಕಲ್ಪ ನೀಡಬೇಕು. ಇಲ್ಲಿನ ವೈದ್ಯಾಧಿಕಾರಿ, ತಾತ್ಕಾಲಿಕ ನಿರ್ದೇಶಕರು, ಪ್ರಾಚಾರ್ಯರಿಗೆ ಸ್ಪಷ್ಟ ನಿರ್ದೇಶನ ನೀಡಿ, ಜಿಲ್ಲಾಸ್ಪತ್ರೆಯ ಪರಿಸ್ಥಿತಿ ಉತ್ತಮ ಪಡಿಸಿ ಬಡ ರೋಗಿಗಳ ಜೀವ ಉಳಿಸಿ’ ಎಂದು ಅವರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು