ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಆರಂಭ; ಹಣ್ಣುಗಳಿಗೆ ಬೇಡಿಕೆ

ಬೀದಿ ಬದಿ ಆರಂಭಗೊಂಡ ಹಣ್ಣುಗಳ ಮಾರಾಟ; ಬಿಸಿಲು ಹೆಚ್ಚಿದಂತೆ ಗ್ರಾಹಕರ ಹೆಚ್ಚಳ
Last Updated 5 ಮಾರ್ಚ್ 2018, 4:23 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆ ಆರಂಭಗೊಂಡಿದೆ. ನಗರದ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ದಾಖಲಾಗುತ್ತಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಿದಂತೆ, ಬಾಯಾರಿಕೆಯೂ ಅಧಿಕಗೊಳ್ಳುತ್ತಿದೆ. ಬಿಸಿಲ ಬೇಗೆಗೆ ಬಸವಳಿಯುವುದು ಶುರುವಾಗಿದೆ.

ಬದುಕಿಗಾಗಿ ಬಿಸಿಲಲ್ಲೇ ದುಡಿಯುವ ಕಾರ್ಮಿಕರು ಮುಂಜಾನೆಯಿಂದಲೇ ಮನೆಯಿಂದ ಹೊರ ಬೀಳುವಾಗಲೇ ಪ್ಲಾಸ್ಟಿಕ್‌ ಬಾಟಲಿಗೆ ಅರಿವೆ ಸುತ್ತಿಕೊಂಡು ತಂಪನೆಯ ನೀರು, ಬುತ್ತಿ ಹೊತ್ತು ಕೆಲಸದ ಸ್ಥಳಕ್ಕೆ ಬಂದರೆ; ಉಳಿದವರು ಹಣ್ಣುಗಳಿಗೆ ಮೊರೆ ಹೋಗುವ ದೃಶ್ಯಾವಳಿ ಗೋಚರಿಸುತ್ತಿವೆ.

ನಗರದ ವಿವಿಧೆಡೆ ಅಲ್ಲಲ್ಲೇ ಕುಡಿಯುವ ನೀರಿನ ಅರವಟ್ಟಿಗೆ ಆರಂಭಗೊಂಡಿವೆ. ದೇಹದ ತಾಪಮಾನ ತಗ್ಗಿಸಿಕೊಳ್ಳಲು ಬಹುತೇಕರು ತಂಪು ಪಾನೀಯ, ಜ್ಯೂಸ್‌ ಮೊರೆ ಹೋಗುವ ಜತೆಗೆ ಹಣ್ಣು ತಿನ್ನಲು ಮುಗಿ ಬೀಳುತ್ತಿದ್ದಾರೆ.

ಮಾರ್ಚ್‌ ಆರಂಭಕ್ಕೂ ಮುನ್ನವೇ ನಗರದ ವಿವಿಧೆಡೆ ತಾತ್ಕಾಲಿಕ ಹಣ್ಣಿನ ಅಂಗಡಿ ತಲೆ ಎತ್ತಿವೆ. ರಸ್ತೆ ಬದಿಯೇ ಕಲ್ಲಂಗಡಿ, ಕರಬೂಜ, ಪೈನಾಪಲ್‌, ಹಸಿ ದ್ರಾಕ್ಷಿ ಮಾರಾಟದ ವಹಿವಾಟು ಆರಂಭಗೊಂಡಿದೆ. ಆಶ್ರಮ ರಸ್ತೆ, ಅಥಣಿ ರಸ್ತೆ, ಸ್ಟೇಷನ್‌ ರಸ್ತೆ ಬದಿ ಹಣ್ಣಿನ ವಹಿವಾಟು ನಡೆದಿದೆ.

‘ಎರಡು ದಶಕಗಳಿಂದ ಬೇಸಿಗೆಯಲ್ಲಿ ಹಣ್ಣಿನ ಮಾರಾಟ ಮಾಡುತ್ತಿರುವೆ. ಮಾರ್ಚ್‌ನಿಂದ ಜೂನ್‌ ಆರಂಭದವರೆಗೂ ಭರ್ಜರಿ ಬೇಡಿಕೆ. ಕಲ್ಲಂಗಡಿ ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌.

ವಿಜಯಪುರ, ಕೊಲ್ಹಾರ ಸುತ್ತಮುತ್ತಲ ಹಳ್ಳಿಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ ಇದು ಸ್ಥಳೀಯರ ಬೇಡಿಕೆ ಪೂರೈಸಲು ಸಾಕಾಗಲ್ಲ. ಅನಿವಾರ್ಯವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶದ ವಿವಿಧೆಡೆಯಿಂದ ಲಾರಿಗಳಲ್ಲಿ ಹಣ್ಣನ್ನು ತರಿಸಿಕೊಂಡು ಮಾರಾಟ ಮಾಡುತ್ತೇವೆ’ ಎಂದು ಆಶ್ರಮ ರಸ್ತೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುವ ಮಲ್ಲಿಕಾರ್ಜುನ ಬಜಂತ್ರಿ ತಿಳಿಸಿದರು.

‘ಪ್ರಸ್ತುತ ಕಲ್ಲಂಗಡಿ ಒಂದಕ್ಕೆ ₹ 20ರಿಂದ 40ರ ದರದಲ್ಲಿ ಮಾರಾಟವಾಗುತ್ತಿದೆ. ಕರಬೂಜ ₹ 15ರಿಂದ 20ರ ಧಾರಣೆಯಿದೆ. ಹಸಿ ದ್ರಾಕ್ಷಿ ಒಂದು ಕೆ.ಜಿ.ಗೆ ₹ 40ರಿಂದ 50ರ ಬೆಲೆಯಲ್ಲಿ ಬಿಕರಿಯಾಗುತ್ತಿದ್ದು, ಮೂರು ಹಣ್ಣಿಗೆ ಭಾರಿ ಬೇಡಿಕೆಯಿದೆ.

ದ್ರಾಕ್ಷಿ ನಮ್ಮಲ್ಲೇ ಸಾಕಷ್ಟು ಸಿಗುತ್ತಿದೆ. 15 ದಿನದ ಹಿಂದೆ ವಹಿವಾಟು ಆರಂಭಿಸಿದೆ. ಶುರುವಿನಲ್ಲಿ ಸಾಕಷ್ಟು ಡಲ್‌ ಇತ್ತು. ಇದೀಗ ಚಲೋ ನಡೆದಿದೆ. ನಿತ್ಯ ₹ 1000ಕ್ಕೂ ಹೆಚ್ಚು ವರಮಾನ ಸಿಗುತ್ತಿದೆ. ಬಿಸಿಲ ಝಳ ಹೆಚ್ಚಾದಂತೆ ಹಣ್ಣಿಗೂ ಬೇಡಿಕೆ ಹೆಚ್ಚಲಿದೆ’ ಎಂದು ಬಜಂತ್ರಿ ಹೇಳಿದರು.

‘ಬೇಸಿಗೆಗೆ ಪೂರಕವಾಗಿ ಕಲ್ಲಂಗಡಿ ಮಾರುಕಟ್ಟೆಗೆ ಬರಲಿದೆ. ಆರೋಗ್ಯಕ್ಕೆ ಅತ್ಯುತ್ತಮ. ನೀರಿನಂಶ ಹೆಚ್ಚಿರುತ್ತದೆ. ಒಮ್ಮೆ ತಿಂದರೆ ಬಾಯಾರಿಕೆ ನೀಗುತ್ತದೆ. ಅಬಾಲವೃದ್ಧರಿಗೂ ಉತ್ತಮವಾದ ಹಣ್ಣು. ಮೂರು ತಿಂಗಳು ತಪ್ಪದೇ ಹಣ್ಣನ್ನು ಮನೆಗೊಯ್ದು ಮಧ್ಯಾಹ್ನದ ವೇಳೆ ತಿನ್ನುತ್ತೇವೆ’ ಎಂದು ಪ್ರಶಾಂತ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿದರು.

‘ಬಿಸಿಲು ಶುರುವಾಗಿದೆ. ಆರಂಭದಲ್ಲೇ ಝಳವೂ ಹೆಚ್ಚಿದೆ. ದೇಹದ ಉಷ್ಣತೆ ತಗ್ಗಿಸಿಕೊಳ್ಳಲು ಅನಿವಾರ್ಯವಾಗಿ ಹಣ್ಣನ್ನು ತಿನ್ನಬೇಕಿದೆ. ಎಷ್ಟು ನೀರು ಕುಡಿದರೂ ಪ್ರಯೋಜನವಾಗದು. ಹಣ್ಣು ತಿನ್ನುವುದರಿಂದ ಜೀರ್ಣ ಕ್ರಿಯೆಗೂ ಅನುಕೂಲವಾಗಲಿದೆ’ ಎಂದು ಜಿತೇಶ ಭಜಂತ್ರಿ ತಿಳಿಸಿದರು.

**

ಹಣ್ಣಿನ ದರ ಭಾಳ ತುಟ್ಟಿಯಿಲ್ಲ. ಎಲ್ಲರಿಗೂ ಕೈಗೆಟುಕುವ ಧಾರಣೆಯಿದೆ. ನಿತ್ಯ ಸವಿಯಲಾಗದಿದ್ದರೂ, ವಾರಕ್ಕೆ ಎರಡ್ಮೂರು ಬಾರಿ ತಿನ್ನಬಹುದು.

-ಆಸೀಫ್‌ ಬಾಗವಾನ, ಜಯಪುರ ನಿವಾಸಿ

*

ಬಿಸಿಲು ಹೆಚ್ಚಿದಂತೆ ವಹಿವಾಟು ಹೆಚ್ಚಲಿದೆ. ಬೇಡಿಕೆ ಸಾಕಷ್ಟಾಗಲಿದೆ. ಹಣ್ಣುಗಳು ಕೆಡದಂತೆ ಕಾಪಿಟ್ಟುಕೊಳ್ಳುವುದು ವ್ಯಾಪಾರಿಗಳಿಗೆ ಹರಸಾಹಸವಾಗಲಿದೆ.

-ಮುತ್ತು ಭಜಂತ್ರಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT