ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲ್ಲಾಳಿ ಇಟ್ಟುಕೊಂಡು ಕಚೇರಿ ನಡೆಸಿದರೆ ಕ್ರಮ: ಕೃಷ್ಣ ಬೈರೇಗೌಡ ಎಚ್ಚರಿಕೆ

Published 25 ಆಗಸ್ಟ್ 2023, 7:34 IST
Last Updated 25 ಆಗಸ್ಟ್ 2023, 7:34 IST
ಅಕ್ಷರ ಗಾತ್ರ

ಬೀದರ್‌: ‘ದಲ್ಲಾಳಿಗಳನ್ನು ಇಟ್ಟುಕೊಂಡು ಉಪ ನೋಂದಣಾಧಿಕಾರಿ ಕಚೇರಿಗಳನ್ನು ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಬ್‌ ರಜಿಸ್ಟ್ರಾರ್‌ ಕಚೇರಿಗಳಲ್ಲಿ ಆಫ್‌ಲೈನ್‌ನಲ್ಲಿ ತಕ್ಷಣವೇ ಕೆಲಸ ಆಗುತ್ತದೆ. ಆನ್‌ಲೈನ್‌ನಲ್ಲಿ ಏಕೆ ಆಗಲ್ಲ. ಜನರ ಹಿತಾಸಕ್ತಿ ಮೀರಿ ಯಾರೂ ಕೆಲಸ ಮಾಡುವಂತಿಲ್ಲ ಎಂದು ಎಚ್ಚರಿಸಿದರು.

ನಿನ್ನೆ (ಬುಧವಾರ) ಒಂದೇ ದಿನ ರಾಜ್ಯದಲ್ಲಿ 13,965 ಆಸ್ತಿಗಳ ನೋಂದಣಿ ಆಗಿದೆ. ರಾಜ್ಯದಲ್ಲಿ ಎಲ್ಲೂ ಸರ್ವರ್‌ ಸಮಸ್ಯೆ ಇಲ್ಲ. ವಿನಾಕಾರಣ ಜನರಿಗೆ ದಾರಿ ತಪ್ಪಿಸಬೇಡಿ. ಈ ರೀತಿ ಮಾಡಿದರೆ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಾಜ್ಯದಾದ್ಯಂತ ದಿನಕ್ಕೆ ಸರಾಸರಿ 10 ಸಾವಿರಕ್ಕೂ ಅಧಿಕ ನೋಂದಣಿ ಆಗುತ್ತಿದೆ. ಎಲ್ಲೂ ಸರ್ವರ್‌ ಸಮಸ್ಯೆ ಇಲ್ಲ. ಒಂದುವೇಳೆ ನಿಮ್ಮ ಕಚೇರಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದ್ದರೆ ಸರಿಪಡಿಸಿಕೊಳ್ಳಿ ಎಂದು ತಾಕೀತು ಮಾಡಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಇದೆ. ಎಲ್ಲ ಅವರೇ ನಿಯಂತ್ರಿಸುತ್ತಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಜನರ ಮನದಾಳದ ಮಾತುಗಳನ್ನು ಖಂಡ್ರೆಯವರು ಹೇಳಿದ್ದಾರೆ. ಸಬ್‌ ರಜಿಸ್ಟ್ರಾರ್‌ ಕಚೇರಿಗಳ ಮೂಲಕ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಅದನ್ನು ಸರಿಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ಸಬ್‌ ರಜಿಸ್ಟ್ರಾರ್‌ ಕಚೇರಿಗಳಲ್ಲಿ ಕಾವೇರಿ–2 ಸಾಫ್ಟ್‌ವೇರ್‌ ಮೂಲಕ 15 ರಿಂದ 20 ನಿಮಿಷಗಳಲ್ಲಿ ನೋಂದಣಿ ಮಾಡಬಹುದು. ಮನೆಯಲ್ಲೇ ಕುಳಿತು ದಾಖಲೆಗಳನ್ನು ಜನರೇ ಅಪ್‌ಲೋಡ್‌ ಮಾಡಬಹುದು. ಅವುಗಳನ್ನು ಪರಿಶೀಲಿಸಿ, ಆನ್‌ಲೈನ್‌ನಲ್ಲೇ ಕೆಲಸ ಮುಗಿಸಬಹುದು. ಆದರೆ, ಸರ್ವರ್‌ ಸಮಸ್ಯೆ ಹೇಳಿ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದೀರಿ. ಅದು ಆಗಬಾರದು ಎಂದು ಹೇಳಿದರು.

ಡಿಸಿ, ಎಸಿಯವರು ಕೋರ್ಟ್‌ನಲ್ಲಿ ಇತ್ಯರ್ಥಪಡಿಸಿದ ಆದೇಶಗಳು 15 ದಿನಗಳ ಒಳಗೆ ಪೋಸ್ಟ್‌ ಆಗುತ್ತಿಲ್ಲ. ಕೆಲ ಪ್ರಕರಣಗಳಲ್ಲಿ ಮೂರು ತಿಂಗಳ ಹಿಂದೆಯೇ ಕೇಸ್‌ ಇತ್ಯರ್ಥವಾದರೂ ಆದೇಶ ಪೋಸ್ಟ್‌ ಆಗಿಲ್ಲ. ಇನ್ಮೇಲೆ ಇದರ ಮೇಲೆ ನಿಗಾ ವಹಿಸಲಾಗುವುದು. ಏನೇ ಇದ್ದರೂ 15 ದಿನಗಳು ದಾಟಬಾರದು. ಪದೇ ಪದೇ ವಿಳಂಬ ಮಾಡಿದರೆ ನೋಟಿಸ್‌ ನೀಡಲಾಗುವುದು ಎಂದು ಎಚ್ಚರಿಸಿದರು.

ಜೂನ್‌ 1ರಿಂದ ಪೆಂಡಿಂಗ್‌ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಮೂರು ಹಂತದ ಸಭೆ ನಡೆಸಿ ವಿಲೇವಾರಿಗೊಳಿಸಲು ಸೂಚಿಸಲಾಗಿದೆ. ಹಕ್ಕು ಬದಲಾವಣೆಯ ಒಂದು ಪ್ರಕರಣ ಇತ್ಯರ್ಥಕ್ಕೆ ಸರಾಸರಿ 27 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ನಂತರ 9 ದಿನಕ್ಕೆ ಇಳಿದಿದೆ. ಸಾಕಷ್ಟು ಸುಧಾರಣೆ ಆಗಿದೆ. ಕೆಲವೊಂದು ಕಡೆ ಸಮಸ್ಯೆಯಿದ್ದು, ಅಲ್ಲಿ 13 ದಿನಗಳಾಗುತ್ತಿವೆ. ಪಹಣಿ ತಿದ್ದುಪಡಿ, ಎಸಿ ಕೋರ್ಟ್‌ ಪ್ರಕರಣಗಳ ವಿಲೇವಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಬೇಗ ಮಾಡಬೇಕು. ಕಂದಾಯ ಇಲಾಖೆ ಜನಸ್ನೇಹಿಯಾಗಿ ಬದಲಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಕೇಂದ್ರ ಕಚೇರಿಗೆ ಆನ್‌ಲೈನ್‌ ಮೂಲಕವೇ ಎಲ್ಲಾ ಮಾಹಿತಿ ಕಳಿಸಬೇಕು. ಇದರಿಂದ ಬೇಗ ಕೆಲಸಗಳಾಗುತ್ತವೆ. ಕಡತ ಕಳುಹಿಸಿದರೆ ತಿಂಗಳು ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಒಂದು ಗಂಟೆಯೊಳಗೆ ಕೆಲಸವಾಗುತ್ತದೆ. ಅಲ್ಲದೇ ಹೊಣೆಗಾರಿಕೆ ನಿಗದಿಯಾಗುತ್ತದೆ. ತಾಲ್ಲೂಕು ಕಚೇರಿಯಿಂದ ಡಿಸಿ ಕಚೇರಿ ವರೆಗೆ ಎಲ್ಲಾ ಕೆಲಸಗಳನ್ನು ಇ–ಆಫೀಸ್‌ ಮೂಲಕವೇ ಆಗಬೇಕು. ಯಾರು ಎಷ್ಟು ದಿನ ಪೆಂಡಿಂಗ್‌ ಉಳಿಸಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಿದರು.

ಮಶೀನ್‌ ಸೈನ್‌ ಮ್ಯುಟೇಶನ್‌:  ‘ಮಶೀನ್‌ ಸೈನ್‌ ಮ್ಯುಟೇಶನ್‌ ಜಾರಿಗೆ ತರಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಮ್ಯುಟೇಶನ್‌ ಕಡತಗಳು ಬರುತ್ತವೆ. ಅದಕ್ಕೆ ಥಂಬ್‌ ಕೊಟ್ಟು ಸಕಾಲಕ್ಕೆ ವಿಲೇವಾರಿ ಮಾಡುತ್ತಿಲ್ಲ. ಜನರನ್ನು ಸುಮ್ಮನೆ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ ಎಂದು ಹೇಳಿದರು.

ಜನ ಬದಲಾವಣೆ ಬಯಸಿ, ಅನೇಕ ನಿರೀಕ್ಷೆಗಳೊಂದಿಗೆ ಹೊಸ ಸರ್ಕಾರವನ್ನು ತಂದಿದ್ದಾರೆ. ಹಿಂದಿನ ಸರ್ಕಾರದ ಆಡಳಿತದ ಬಗ್ಗೆ ಅವರಿಗೆ ಬೇಸರ ಇತ್ತು. ಅವರನ್ನು ತಿರಸ್ಕರಿಸಿ ಹೊಸ ಸರ್ಕಾರ ಆಯ್ಕೆ ಮಾಡಿದ್ದಾರೆ. ಉತ್ತಮ ಆಡಳಿತ ಕೊಡುವುದು ನಮ್ಮ ಜವಾಬ್ದಾರಿ. ಕಂದಾಯ ಇಲಾಖೆಗೆ ಮಾತೃ ಇಲಾಖೆಯೆಂದು ಕರೆಯಲಾಗುತ್ತದೆ. ಮೊಘಲರು, ಬ್ರಿಟೀಷರ ಕಾಲದಿಂದಲೂ ಈ ಇಲಾಖೆಯೇ ಬೆನ್ನೆಲುಬು. ಪಹಣಿ, ಜಾತಿ–ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ನಮ್ಮ ಇಲಾಖೆಯೇ ನೀಡುತ್ತದೆ. ಪ್ರತಿ ಮನೆಗೆ ಇಲಾಖೆಯ ಸಂಪರ್ಕ ಇದೆ. ಹೆಚ್ಚಿನ ಜನ ಈ ಇಲಾಖೆಯನ್ನು ಅವಲಂಬಿಸಿದ್ದಾರೆ. ಜನರಿಗೆ ವಿನಾಕಾರಣ ಅಲೆದಾಡಿಸಬಾರದು. ಸಕಾಲಕ್ಕೆ ಕೆಲಸ ಮಾಡಿಕೊಡಬೇಕು. ಜನ ಅವರ ಕಸುಬು ಬಿಟ್ಟು ಕಚೇರಿ ಅಲೆದಾಡುವುದೇ ಆಗಬಾರದು. ಒಂದು ‘ಟೀಮ್‌ ವರ್ಕ್‌’ ಆಗಿ ಕೆಲಸ ಮಾಡಿದರೆ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಕಂದಾಯ ವಿಪತ್ತು ನಿರ್ವಹಣೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ, ಕಲಬುರ್ಗಿ ವಿಭಾಗದ ಪ್ರದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ., ಕಂದಾಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಜರಿದ್ದರು.

‘ಜಿಲ್ಲಾ ಆಡಳಿತ ಕಚೇರಿ ಮಾಡುತ್ತೇವೆ’

‘ಬೀದರ್‌ ನಗರದಲ್ಲಿ ಜಿಲ್ಲಾ ಆಡಳಿತ ಕಚೇರಿ ಖಂಡಿತವಾಗಿಯೂ ಮಾಡುತ್ತೇವೆ. ಹೊಸ ತಾಲ್ಲೂಕುಗಳಲ್ಲಿ ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲಾಗುವುದು. ಕಳೆದ ಐದು ವರ್ಷಗಳಲ್ಲಿ ಏನೂ ಕೆಲಸ ಆಗಿಲ್ಲ. ಜನರ ಆಶಯಗಳಿಗೆ ಸ್ಪಂದಿಸುತ್ತೇವೆ. ಈ ಸಂಬಂಧ ಸಚಿವ ಈಶ್ವರ ಬಿ. ಖಂಡ್ರೆಯವರು ಹಲವು ಸಲ ನನ್ನೊಂದಿಗೆ ಚರ್ಚಿಸಿದ್ದಾರೆ’ ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಲು ನಿರ್ಧರಿಸಲಾಗಿದೆ. ನಿಗದಿತ ಗಡುವಿನೊಳಗೆ ಕೆಲಸ ಪೂರ್ಣಗೊಳಿಸಲಾಗುವುದು. ಎಲ್ಲೇ ಒತ್ತುವರಿ ಯಾರೇ ಮಾಡಿದರೂ ತೆರವುಗೊಳಿಸಿ ಸರ್ಕಾರಿ ಜಮೀನು ಉಳಿಸಲಾಗುವುದು. ಬರುವ ದಿನಗಳಲ್ಲಿ ಈ ಸಂಬಂಧ ಆ್ಯಪ್‌ ತಯಾರಿಸಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ಕಾರಿ ಜಮೀನಿನ ವಿವರ ದಾಖಲಿಸಿ ಅದಕ್ಕೆ ಸರ್ಟಿಫೈ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಎಲ್ಲಿ ಸ್ಮಶಾನಕ್ಕೆ ಜಾಗವಿಲ್ಲವೋ ಅಂತಹ ಕಡೆ ಖಾಸಗಿಯವರ ಬಳಿ ಜಮೀನು ಖರೀದಿಸಿ ವ್ಯವಸ್ಥೆ ಮಾಡಬೇಕು. ಅದಕ್ಕೆ ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಚಿವ ಈಶ್ವರ ಖಂಡ್ರೆ ಡಿಸಿ ಕಚೇರಿ ಶಿಥಿಲಗೊಂಡಿದೆ. ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಬರುವಂತೆ ಜಿಲ್ಲಾಡಳಿತ ಕಚೇರಿ ವಿನ್ಯಾಸಗೊಳಿಸಬೇಕು. ಭಾಲ್ಕಿ ತಹಶೀಲ್ದಾರ್‌ ಕಚೇರಿ ಜಮೀನು ಅತಿಕ್ರಮಣವಾಗಿದೆ. ಈಗಿರುವ ಭಾಲ್ಕಿ  ಮಿನಿ ವಿಧಾನಸೌಧ ಕಟ್ಟಡ ಸಾಲುತ್ತಿಲ್ಲ. ಕೆಲ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅದನ್ನು ವಿಸ್ತರಿಸಬೇಕು. ಮೂರು ಹೊಸ ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT