ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪರ್–ಆಟೊ ನಡುವೆ ಭೀಕರ ಅಪಘಾತ: 7 ಮಹಿಳೆಯರು ಸಾವು

Last Updated 5 ನವೆಂಬರ್ 2022, 6:54 IST
ಅಕ್ಷರ ಗಾತ್ರ

ಚಿಟಗುಪ್ಪ/ಬೀದರ್‌: ಚಿಟಗುಪ್ಪ ತಾಲ್ಲೂಕಿನ ಬೆಮಳಖೇಡಾ ಗ್ರಾಮದ‌ ಸರ್ಕಾರಿ ಶಾಲೆ ಎದುರು ಶುಕ್ರವಾರ ಸಂಜೆ 6ರ ಸುಮಾರಿಗೆ ಟಿಪ್ಪರ್ ಮತ್ತು ಆಟೊ ನಡುವೆ ಭೀಕರ ಅಪಘಾತ ಸಂಭವಿಸಿ, ಆಟೊದಲ್ಲಿದ್ದ ಏಳು ಮಹಿಳೆಯರು ಮೃತಪಟ್ಟಿದ್ದಾರೆ.

ಚಿಟಗುಪ್ಪ ತಾಲ್ಲೂಕಿನ ಉಡುಬನಳ್ಳಿ ಗ್ರಾಮದ ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಷ್ಮಿತ (40), ಗುಂಡಮ್ಮಾ ನರಸಿಂಗ (60), ಜಗಮ್ಮಾ ಪ್ರಭು (34), ರುಕ್ಮಿಣಿಬಾಯಿ ಅಮೃತ (60), ಈಶ್ವರಮ್ಮ ಬಕ್ಕಪ್ಪ (55) ಮತ್ತುಪಾರ್ವತಿ ಮಾರುತಿ (42) ಮೃತರು. ಎಲ್ಲರೂ ಕೃಷಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಮರಳುತಿದ್ದಾಗ ಈ ಅವಘಡ ಸಂಭವಿಸಿದೆ.

ಆಟೊ ಚಾಲಕ ಉಡಬನಳ್ಳಿಯ ಜಗನ್ನಾಥ ಸಿದ್ದಪ್ಪ ನಾಟೇಕಾರ (39) ಮತ್ತು ಟಿಪ್ಪರ್ ಚಾಲಕ ಅಶೋಕ ರಾಜಪ್ಪ ಸೇರಿ 11 ಮಂದಿಗೆ ಗಾಯಗಳಾಗಿವೆ ಎಂದು ಬೆಮಳಖೇಡಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ನೋಂದಣಿ ಹೊಂದಿದ ಲಾರಿಯು ಮತ್ತು ಆಂಧ್ರಪ್ರದೇಶದ ನೋಂದಣಿ ಹೊಂದಿದ ಆಟೊ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿ ಒಬ್ಬರು ಸಾವನ್ನಪ್ಪಿದರೆ, ತೀವ್ರ ಸ್ವರೂಪದಲ್ಲಿ ಗಾಯಗೊಂಡ 6 ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ‘ಅಪಘಾತ ನಡೆದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಟೊದಲ್ಲಿ ಒಟ್ಟು 17 ಮಂದಿ ಪ್ರಯಾಣಿಕರು ಇದ್ದರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಒಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೂಲಿಗೆ ಹೋದವರು ಬದುಕಿ ಬರಲಿಲ್ಲ..

ಚಿಟಗುಪ್ಪ: ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕೃಷಿ ಕೂಲಿ ಕಾರ್ಮಿಕರು ತಾಲ್ಲೂಕಿನ ಬೇಮಳಖೇಡಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಪಘಾಥದಲ್ಲಿ ಸಾವನ್ನಪ್ಪಿದರು.

ಆಂಧ್ರಪ್ರದೇಶದ ಧನಾಸಿರಿ ಗ್ರಾಮದಲ್ಲಿ ಸೋಯಾ ರಾಶಿ ಮಾಡಲು ಹೋಗಿದ್ದ ತಾಲ್ಲೂಕಿನ ಉಡಬನಳ್ಳಿ ಗ್ರಾಮದ ಐದು ಕುಟುಂಬಗಳ ಸದಸ್ಯರು ಸಂಜೆ ಮನೆಗೆ ಮರಳುವ ತಲುಪುವ ಮುನ್ನವೇ ಪ್ರಾಣ ಕಳೆದುಕೊಂಡರು.

ನಿತ್ಯ ಕೂಲಿ ಮಾಡಿ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಈ ಅಪಘಾತ ಅಘಾತ ಉಂಟು ಮಾಡಿದೆ. ಅವರ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿದೆ.

‘ತುತ್ತು ಅನ್ನಕ್ಕಾಗಿ ಈ ಕೃಷಿಕಾರ್ಮಿಕರು ಊರುಗಳು ಅಲೆಯುತ್ತ ಕೃಷಿ ಕೂಲಿ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಮುಂಜಾನೆ ಮನೆಯಿಂದ ದುಡಿಯಲು ಹೋಗಿ ರಾತ್ರಿ ಮರಳುವಷ್ಟರಲ್ಲಿ ದಣಿದ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇರುತ್ತಿತ್ತು. ಆದರೆ, ಜವರಾಯ ಐದು ಕುಟುಂಬದವರಿಗೆ ಶಾಶ್ವತ ವಿಶ್ರಾಂತಿ ನೀಡಿದ್ದು ತುಂಬಾ ನೋವುಂಟು ಮಾಡಿದೆ’ ಎಂದು ಗ್ರಾಮದ ವಕೀಲ ಶಿವು ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಟುಂಬಗಳ ಮುಖ್ಯಸ್ಥರೇ ಮೃತಪಟ್ಟಿದ್ದಾರೆ. ಹೀಗಾಗಿ ಕುಟುಂಬದ ಸದಸ್ಯರಿಗೆ ಮುಂದೇನು ಎಂಬಂತಾಗಿದೆ. ಬಡತನದ ಚಿಂತೆ ಒಂದೆಡೆಯಿದ್ದರೆ, ಹಿರಿಯರ ಸಾವಿನ ನೋವು ಇನ್ನೊಂದೆಡೆ ಇದೆ.ಮುಂದಿನ ದಾರಿ ಕಾಣದಾಗಿದೆ. ಅವರ ಅಗಲಿಕೆ ಸಂಪೂರ್ಣ ಗ್ರಾಮಕ್ಕೆ ಅಘಾತ ಉಂಟು ಮಾಡಿದೆ’ ಎಂದು ಗ್ರಾಮದ ಸಚಿನ ಪಾಟೀಲ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT