ಬುಧವಾರ, ಅಕ್ಟೋಬರ್ 28, 2020
18 °C
ಗುಂಡಿ, ಜಲ್ಲಿ ಕಲ್ಲುಗಳಿಂದ ಸಮಸ್ಯೆ: 15 ವರ್ಷಗಳ ಹಿಂದೆ ಡಾಂಬರು ಕಂಡಿದ್ದ ರಸ್ತೆ

ಚಿಟಗುಪ್ಪ: ಹಾಳಾದ ರಸ್ತೆಯಿಂದಾಗಿ ‘ಸಂಚಾರ’ಕ್ಕೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ನಾಗನಕೇರಾದಿಂದ ಮಂಗಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಸುಮಾರು ಹದಿನೈದು ವರ್ಷಗಳ ಹಿಂದೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ನಂತರ ಅದರ ನಿರ್ವಹಣೆ ಮಾಡಿಲ್ಲ. ಕಿತ್ತು ಹೋಗಿದೆ. ದೊಡ್ಡ ಗುಂಡಿಗಳು ಬಿದ್ದು, ಜಲ್ಲಿ ಕಲ್ಲುಗಳು ಹೊರ ಬಂದಿವೆ. ವಾಹನ ಸವಾರರು ಈ ರಸ್ತೆಯಲ್ಲಿ ಸಾಗುವುದಕ್ಕೆ ಆತಂಕ ಪಡುವಂತಾಗಿದೆ.

ಮಹಿಳೆಯರು, ವೃದ್ಧರು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ವಾಹನ ಗುಂಡಿಯೊಳಗೆ ಇಳಿದು, ಅಪಘಾತ ಸಂಭವಿಸುವುದು ನಿಶ್ಚಿತ ಎನ್ನುವ ಸ್ಥಿತಿ ಇಲ್ಲಿದೆ.

ರಾಷ್ಟ್ರೀಯ ಹೆದ್ದಾರಿ 65ರ ಮೇಲಿರುವ ಮಂಗಲಗಿ ಟೋಲ್ ಪ್ಲಾಜಾ ತಪ್ಪಿಸಲು ಭಾರಿ ವಾಹನಗಳು ನಾಗನಕೇರಾ ರಸ್ತೆ ಮಾರ್ಗದಿಂದ ಸಂಚರಿಸುವುದ ಹೆಚ್ಚಾಗಿದೆ. ಹೀಗಾಗಿ ರಸ್ತೆ ಹದಗೆಟ್ಟಿದೆ.

‘ಎರಡು ಕಿ.ಮೀ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿವೆ. ರಸ್ತೆ ದುರಸ್ತಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಇದುವರೆಗೆ ಯಾರೊಬ್ಬರೂ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ ಎಂದು ನಾಗನಕೇರಾ ಗ್ರಾಮದ ಜಗದೀಶ್ ದೂರಿದರು.

ಮುಖ್ಯವಾಗಿ ನಾಗನಕೇರಾ ಗ್ರಾಮದಿಂದ ನಿತ್ಯ ಶಾಲಾ ಮಕ್ಕಳು ಬೈಸಿಕಲ್ ಮೇಲೆ ಮಂಗಲಗಿ ಗ್ರಾಮದ ಪ್ರೌಢ ಶಾಲೆಗೆ ಹೋಗುತ್ತಾರೆ. ಹಲವು ಬಾರಿ ರಸ್ತೆಯ ಕೆಸರು ಮೈ ಮೇಲೆ ಚೆಲ್ಲಿ ಬಟ್ಟೆ ಕೊಳೆಯಾಗಿವೆ. ಕೆಲವು ಮಕ್ಕಳು ತಗ್ಗು ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ತಕ್ಷಣ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಾಗರಿಕರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು