ಸೋಮವಾರ, ಸೆಪ್ಟೆಂಬರ್ 20, 2021
21 °C

ಬೀದರ್: ಅತಿವೃಷ್ಟಿಗೆ ಹಾಳಾದ ರಸ್ತೆಗಳು, ಸಂಚಾರ ದುಸ್ತರ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ವಾರದ ಹಿಂದೆ ಸತತವಾಗಿ ಸುರಿದ ಮಳೆಗೆ ನೆಲ ಮಟ್ಟದ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ರಸ್ತೆಗಳಲ್ಲಿನ ಡಾಂಬರ್ ಕಿತ್ತು ಹೋಗಿ ಅಲ್ಲಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಹೀಗಾಗಿ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿದೆ. ಹಲವು ಸಮಸ್ಯೆಗಳಿಗೂ ಕಾರಣವಾಗಿದೆ.

ನಗರದಲ್ಲಿ ಬೊಮ್ಮಗೊಂಡೇಶ್ವರ ವೃತ್ತದಿಂದ ಗುಂಪಾ ರಸ್ತೆ, ಮೈಲೂರ್‌ ರಸ್ತೆ ಹಾಗೂ ಚಿದ್ರಿ ರಸ್ತೆ ಮಳೆಗೆ ಹಾಳಾಗಿವೆ. ಒಳ ಚರಂಡಿ ನಿರ್ಮಾಣಕ್ಕೆ ನಗರದಲ್ಲಿ ಅನೇಕ ಕಡೆ ರಸ್ತೆಗಳನ್ನು ಅಗೆದಿರುವ ಕಾರಣ ರಸ್ತೆಗಳು ಕೆಸರು ಮಯವಾಗಿವೆ. ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆಯಾಗುತ್ತಲೇ ನೀರು ರಸ್ತೆ ಮೇಲೆ ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಹಾರೂರಗೇರಿ ಕ್ರಾಸ್‌ನಿಂದ ಗಾಂಧಿ ಗಂಜ್‌ ಕಡೆಗೆ ಹೋಗುವ ರಸ್ತೆಯಲ್ಲಿ ಗಟಾರಗಳೇ ಇಲ್ಲ. ಮಳೆ ಬಂದಾಗ ನೀರು ಹರಿದು ಹೋಗದೆ ರಸ್ತೆ ಮಧ್ಯೆಯೇ ಸಂಗ್ರಹವಾಗುತ್ತಿದೆ. ನಗರದ ಜನತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಬೇಸತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ.

ಮಳೆಯಿಂದಾಗಿ ಔರಾದ್, ಕಮಲನಗರ ಹಾಗೂ ಬೀದರ್‌ ತಾಲ್ಲೂಕುಗಳಲ್ಲೇ ಹೆಚ್ಚು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ.
ಹುಲಸೂರು ತಾಲ್ಲೂಕಿನ ತೋಗಲೂರ ಗ್ರಾಮದ ಒಳರಸ್ತೆ ಮಳೆಯ ಅಬ್ಬರಕ್ಕೆ ಹಾಳಾಗಿದೆ. ಹಣಮಂತವಾಡಿ ಸಮೀಪ ಹಳ್ಳದ ಸೇತುವೆಯ ತಡೆ ಗೋಡೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.
ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸೇತುವೆ ಮೇಲೆ ನೀರು ಬಂದಾಗ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಸಂದೇಶ ಕಳಿಸಿದರೂ ಪ್ರತಿಕ್ರಿಯಿಸಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಗ್ರಾಮೀಣ ಭಾಗದ ಜನ ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಎದುರಿಸಬೇಕಾಗುತ್ತಿದೆ ಎಂದು ಬೋರಗಿ ಗ್ರಾಮಸ್ಥರು ದೂರುತ್ತಾರೆ.

ರಸ್ತೆಯಲ್ಲಿ ತಗ್ಗು: ಹೆಚ್ಚುತ್ತಿರುವ ಅಪಘಾತ
ಜನವಾಡ: ವಾರದ ಹಿಂದೆ ಸುರಿದ ಸತತ ಮಳೆಯಿಂದಾಗಿ ಬೀದರ್ ತಾಲ್ಲೂಕಿನ ಅನೇಕ ರಸ್ತೆಗಳು ಹಾಳಾಗಿವೆ.
ರಸ್ತೆ ಮಧ್ಯೆ ಅಲ್ಲಲ್ಲಿ ತಗ್ಗು ದಿನ್ನೆಗಳು ಸೃಷ್ಟಿಯಾಗಿರುವ ಕಾರಣ ವಾಹನ ಸಂಚಾರ ಪ್ರಯಾಸದಾಯಕವಾಗಿ ಪರಿಣಮಿಸಿದೆ.
ಗಾದಗಿ-ಚಿಮಕೋಡ್ ಮಾರ್ಗದಲ್ಲಿ ಇರುವ ಸೇತುವೆ ಮೇಲಿನ ಹಾಗೂ ಸಮೀಪದ ರಸ್ತೆ ಕಿತ್ತುಕೊಂಡು ಹೋಗಿದೆ.
ಗಾದಗಿ-ಚಿಮಕೋಡ್, ಚಿಲ್ಲರ್ಗಿ ಸೇತುವೆಯಿಂದ ಗ್ರಾಮದ ಬೊಮ್ಮಗೊಂಡೇಶ್ವರ ಸೇತುವೆ ವರೆಗಿನ ರಸ್ತೆ, ಮಾಳೆಗಾಂವ್-ಗುಮ್ಮಾ, ಅಷ್ಟೂರ-ಅಲ್ಮಾಸಪುರ ಕ್ರಾಸ್, ಹಮಿಲಾಪುರ- ಗಾದಗಿ, ಸಿರ್ಸಿ(ಎ)-ಬಾವಗಿ, ಲಾಲ್‍ಬಾಗ್-ನೌಬಾದ್, ಚಿಕ್ಕಪೇಟೆ- ಮರಕಲ್, ಮರಕಲ್-ಜನವಾಡ ಮೊದಲಾದ ರಸ್ತೆಗಳು ಹಾಳಾಗಿವೆ.

ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ಮಧ್ಯೆ ಬಿದ್ದಿರುವ ತಗ್ಗುಗಳು ಅಪಘಾತಗಳಿಗೂ ಕಾರಣವಾಗುತ್ತಿವೆ ಎಂದು ಹೇಳುತ್ತಾರೆ ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ.

ಸರ್ಕಾರ ಕೂಡಲೇ ಹಾಳಾದ ರಸ್ತೆಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಮೂರು ಸೇತುವೆ ಭಾಗಶಃ ಕುಸಿತ
ಔರಾದ್:
ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಸಂಗಮ-ಸಂತಪುರ ನಡುವೆ ಸಂಪರ್ಕ ಕಲ್ಪಿಸುವ ನಾಗೂರ ಬಳಿಯ ಹಳೆ ಸೇತುವೆ ಶಿಥಿಲಗೊಂಡಿದೆ. ಈ ಸೇತುವೆ ಬಳಿ ನಿರ್ಮಿಸಿದ ಬದಲಿ ರಸ್ತೆಯೂ ಮಳೆಗೆ ಕಿತ್ತುಹೋಗಿದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರು ಪರದಾಡಬೇಕಿದೆ.

ಔರಾದ್‌ದಿಂದ ಹೆಡಗಾಪುರ, ಠಾಣಾಕುಶನೂರಗೆ ಸಂಪರ್ಕ ಕಲ್ಲಿಸುವ ಬೆಳಕುಣಿ ಸೇತುವೆ ಭಾಗಶಃ ಕುಸಿದಿದೆ. ಸಂತಪುರ– ವಡಗಾಂವ್ ನಡುವಿನ ರಸ್ತೆಯಲ್ಲಿರುವ ಬೋರ್ಗಿ ಬಳಿಯ ಸೇತುವೆ ಒಂದು ಭಾಗ ಬಿದ್ದು ಹೋಗಿದೆ. ಇದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಔರಾದ್ ಪಟ್ಟಣದ ಪ್ರಮುಖ ರಸ್ತೆ ಹಾಳಾಗಿದೆ. ಬೀದರ್ –ಔರಾದ್ ನಡುವಿನ ರಸ್ತೆ ದಯನೀಯ ಸ್ಥಿತಿಗೆ ತಲುಪಿದೆ. ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಇದರಿಂದಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣಿಕರು ಶಾಪ ಹಾಕುತ್ತಿದ್ದಾರೆ.
ಸಂತಪುರ--ಜಮಗಿ,‌ ವಡಗಾಂವ್-ಕಂದಗೂಳ,‌ ವಡಗಾಂವ್-ಚಿಂತಾಕಿ ರಸ್ತೆಗಳು ಹಾಳಾಗಿ ಗಡಿಭಾಗ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಸಭೆ ನಡೆಸಿ ಕೆಟ್ಟು ಹೋಗಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಗುಡಪಳ್ಳಿಯ ಬಸವರಾಜ ಗುಡಪಳ್ಳಿ ಮನವಿ ಮಾಡುತ್ತಾರೆ.

ಭಾಲ್ಕಿ: ಎರಡು ಸೇತುವೆ ಹಾಳು
ಭಾಲ್ಕಿ: ತಾಲ್ಲೂಕಿನಲ್ಲಿ ಎರಡು ಸೇತುವೆ ಹಾಗೂ ಸೇತುವೆ ಮೇಲಿನ ರಸ್ತೆ ಕಿತ್ತುಕೊಂಡು ಹೋಗಿದೆ.
ತಾಲ್ಲೂಕಿನ ಕುಂಟೆಗಾಂವ-ಲಾಧಾ ಮಾರ್ಗ ಮಧ್ಯದ, ಸೊಂಪೂರ-ಅತನೂರ ರಸ್ತೆಯಲ್ಲಿರುವ ಕಿರಿದಾದ ಸೇತುವೆಗಳ ಮೇಲಿನ ಮತ್ತು ಪಕ್ಕದ ರಸ್ತೆ ಹಾಳಾಗಿದೆ. ಪಟ್ಟಣದ ಕೋರ್ಟ್‌ ಸಮೀಪದ 100 ಮೀಟರ್‌, ಹುಮನಾಬಾದ್‌ ರಸ್ತೆಯ 200 ಮೀಟರ್‌ ರಸ್ತೆ ಹಾಳಾಗಿದೆ.
‘ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆ, ಸೇತುವೆ ದುರಸ್ತಿ ಕಾರ್ಯಕ್ಕೆ ಅಂದಾಜು ₹ 10 ಲಕ್ಷ ಬೇಕಾಗಲಿದೆ. ಹಿರಿಯ ಅಧಿಕಾರಿಗಳಿಗೆ ವರದಿ ಕಳಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವಶಂಕರ ಕಾಮಶೆಟ್ಟಿ ಹೇಳುತ್ತಾರೆ.
ಭಾಲ್ಕಿಯ ಹಳೆಯ ಪಟ್ಟಣ ಸೇರಿದಂತೆ ವಿವಿಧೆಡೆಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಗ್ಗುಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿವಕುಮಾರ ಪಾಟೀಲ ಒತ್ತಾಯಿಸುತ್ತಾರೆ.

ಆತಂಕದಲ್ಲಿ ವಾಹನ ಸವಾರರು
ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕಿನ ನೆಲವಾಡದಿಂದ ಮಾಸಿಮಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ವಾರ ಸುರಿದ ಮಳೆಯಿಂದ ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ನೆಲವಾಡ– ಮಾಸಿಮಾಡ ರಸ್ತೆಯಲ್ಲಿ ಕೆಂಪು ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಮಳೆಯಾದರೆ ರಸ್ತೆ ಕೆಸರು ಮಯವಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

‘ಮೊದಲೇ ದುರಸ್ತಿಗೆ ಕಾದಿರುವ ರಸ್ತೆಯಲ್ಲಿ ನಿರಂತರವಾಗಿ ಸುರಿದ ಮಳೆ ತಗ್ಗುಗಳನ್ನ ಸೃಷ್ಟಿಸಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು.

‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಗ್ಗು ಬಿದ್ದ ರಸ್ತೆ ಡಾಂಬರೀಕರಣ ಮಾಡದೆ ನಿರ್ಲಕ್ಷ ಮಾಡುತ್ತಿದ್ದಾರೆ. ಈಚೆಗೆ ಹಾಕಿದ ಮಣ್ಣು ಮಳೆಗೆ ಕೊಚ್ಚಿ ಹೋಗಿದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ರಸ್ತೆಗಳಲ್ಲಿ ತಗ್ಗು ಗುಂಡಿಗಳು
ಬಸವಕಲ್ಯಾಣ: ಈಚೆಗೆ ಸತತವಾಗಿ‌ ಸುರಿದ ಮಳೆಗೆ ತಾಲ್ಲೂಕಿನಲ್ಲಿನ ಕೆಲ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ತಾಲ್ಲೂಕಿನ ಪ್ರತಾಪುರ, ಮಂಠಾಳ, ಇಲ್ಲಾಳ ಗ್ರಾಮಗಳ ರಸ್ತೆಗಳಲ್ಲಿ ಅಲ್ಲಲ್ಲಿ ತಗ್ಗುಗಳು ಆಗಿವೆ.
ಇಲ್ಲಾಳ ರಸ್ತೆಯಲ್ಲಿ ಹಳ್ಳದ ನೀರು‌ ಸೇತುವೆಯ ಮೇಲಿನಿಂದ ಹೋಗಿ ರಸ್ತೆ ಹದಗೆಟ್ಟಿದೆ. ನಗರದಿಂದ ಪ್ರತಾಪುರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಮಂಠಾಳಕ್ಕೆ ಹೋಗುವ ರಸ್ತೆಯಲ್ಲಿಯೂ ತಗ್ಗುಗುಂಡಿಗಳು ಉಂಟಾಗಿ ಮಳೆ‌ ನೀರು ಸಂಗ್ರಹಗೊಳ್ಳುತ್ತಿದೆ. ರಸ್ತೆ ಮಧ್ಯೆ ಬಿದ್ದಿರುವ ತಗ್ಗು ತುಂಬುವ ಕಾರ್ಯ ಕೈಗೊಳ್ಳಬೇಕು ಎಂದು ಇಲ್ಲಾಳದ ಅನಿಲ‌ ಮರ್ಪಳ್ಳೆ ಹಾಗೂ ಪ್ರತಾಪುರದ ಪಿಂಟು ಕಾಂಬಳೆ‌ ಒತ್ತಾಯಿಸಿದ್ದಾರೆ.

ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಿಂದ ಮಹಾತ್ಮಾ ಗಾಂಧಿ ವೃತ್ತಕ್ಕೆ‌ ಹೋಗುವ ರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ತಗ್ಗು ಗುಂಡಿ‌ ಬಿದ್ದಿವೆ. ತಕ್ಷಣ ದುರಸ್ತಿ ಮಾಡಿ ಎಂದು ನಗರಸಭೆ ಸದಸ್ಯ ರವೀಂದ್ರ ಗಾಯಕವಾಡ‌ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದಾರೆ. ಆದರೂ ಕೆಲಸ‌ ಆರಂಭವಾಗಿಲ್ಲ.

ರಸ್ತೆ ದುರಸ್ತಿಪಡಿಸಿದ ಅಧಿಕಾರಿಗಳು
ಹುಮನಾಬಾದ್: ಕಳೆದ ಒಂದು ವಾರದ ಹಿಂದೆ ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನ ಹುಡಗಿ ಮತ್ತು ಬೋತಗಿ ಗ್ರಾಮಗಳ ಸೇತುವೆಗಳಿಗೆ ಹಾನಿಯಾಗಿದ್ದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋವಿಂದ್ ಅವರು ಸಹ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ಹುಡಗಿ ಮತ್ತು ಬೋತಗಿ ಗ್ರಾಮಗಳ ಸೇತುವೆಗಳಿಗೆ ಹಾನಿಯಾಗಿದೆ. ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದೆ ಎಂದು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿ ಶಶಿಧರ್ ಪಾಟೀಲ ತಿಳಿಸಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ಬಾದ್ಲಾಪುರ– ಮದರಗಿ ಸಂಪರ್ಕ ಸೇತುವೆ ಮಳೆಗೆ ಹಾಳಾಗಿತ್ತು. ತಹಶೀಲ್ದಾರ್ ಜಿಯಾವುಲ್ಲ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಕೆಳಗಡೆ ಸಿಲುಕಿದ್ದ ಗಿಡಗಂಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಪೂರಕ ಮಾಹಿತಿ: ಮನ್ಮಥಸ್ವಾಮಿ, ಬಸವರಾಜ ಪ್ರಭಾ, ಮಾಣಿಕ ಭುರೆ, ನಾಗೇಶ ಪ್ರಭಾ, ಗಿರಿರಾಜ ವಾಲೆ, ಗುಂಡು ಅತಿವಾಳ, ವೀರೇಶ ಮಠಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು