ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಟನ್‌ ಕಬ್ಬಿಗೆ ₹ 2,250 ಬೆಲೆ

ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ರೈತರ ಸಭೆಯಲ್ಲಿ ಚವಾಣ್‌ ಘೋಷಣೆ
Last Updated 7 ಡಿಸೆಂಬರ್ 2019, 14:01 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅಧ್ಯಕ್ಷತೆಯಲ್ಲಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಹಾಗೂ ರೈತ ಮುಖಂಡರ ಸಭೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ₹ 2,250 ಬೆಲೆ ಕೊಡಲು ಒಪ್ಪಿಗೆ ಸೂಚಿಸಿವೆ.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ಪ್ರತಿ ಟನ್‌ ಕಬ್ಬಿಗೆ ₹ 1,900 ಬೆಲೆ ಕೊಟ್ಟಿವೆ. ನಾನು ಈ ವರ್ಷ ₹ 2,600 ಬೆಲೆ ಕೊಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮನವಿ ಮಾಡಿದ್ದೇನೆ. ಪ್ರಸ್ತುತ ರೈತರು ₹ 2,500 ಕೇಳುತ್ತಿದ್ದಾರೆ. ಬೇಡಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಆದ್ದರಿಂದ ಪ್ರತಿ ಟನ್‌ ಕಬ್ಬಿಗೆ ₹ 2,250 ಬೆಲೆ ನಿಗದಿಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಳ್ಳಬೇಕು ಎಂದು ಸಚಿವ ಚವಾಣ್‌ ಮನವಿ ಮಾಡಿದರು.

‘ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ₹ 3,200 ಬೆಲೆ ನೀಡಿವೆ. ಕಬ್ಬಿನ ಇಳುವರಿ ಹಾಗೂ ಕಾರ್ಖಾನೆಗಳ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ ಬೆಲೆ ನಿಗದಿ ಮಾಡಬೇಕಾಗುತ್ತದೆ. ರೈತರು ಉಳಿದರೆ ಕಾರ್ಖಾನೆಗಳು ಉಳಿಯುತ್ತವೆ. ಹೀಗಾಗಿ ಕಳೆದ ಬಾರಿಗಿಂತ ₹ 350 ಹೆಚ್ಚು ದರ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

ಸಚಿವರ ಮಾತಿಗೆ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದರು. ರೈತ ಮುಖಂಡರು ಒಪ್ಪಿಗೆ ಸೂಚಿಸಿದರು. ಕೆಲ ರೈತರು ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದರೂ ಸಚಿವರು ಪ್ರತಿ ಟನ್‌ ಕಬ್ಬಿಗೆ ₹ 2,250 ಬೆಲೆ ಘೋಷಿಸಿದರು.

ಇದಕ್ಕೂ ಮೊದಲು ಸಂಸದ ಭಗವಂತ ಖೂಬಾ ಮಾತನಾಡಿ, ‘ಪ್ರತಿ ಟನ್‌ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ₹ 2,700 ಬೆಲೆ ಕೊಡಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಕಾರ್ಖಾನೆಗಳು ರೈತರ ಕಬ್ಬಿಗೆ ಗರಿಷ್ಠ ಬೆಲೆ ಕೊಡಬೇಕು’ ಎಂದು ಮನವಿ ಮಾಡಿದರು.

ಎನ್ಎಸ್‌ಎಸ್‌ಕೆ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ‘ಇಳುವರಿ ಕಡಿಮೆಯಾಗಿರುವ ಕಾರಣ ರಿಕವರಿ ಸಹ ಕಡಿಮೆ ಇದೆ. ಬೆಲೆ ನಿಗದಿಯ ನಿರ್ಧಾರವನ್ನು ಆಯಾ ಕಾರ್ಖಾನೆಗೆ ಬಿಟ್ಟುಕೊಡುವುದು ಒಳಿತು’ ಎಂದರು.

ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ನಸೀಮ್‌ ಪಟೇಲ್‌ ಮಾತನಾಡಿ, ‘ಸರ್ಕಾರ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನೂ ಆಲಿಸಬೇಕು. ಅವುಗಳ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಕಬ್ಬಿನ ಬೆಲೆ ನಿಗದಿಪಡಿಸುವುದು ಸೂಕ್ತ. ಕಾರ್ಖಾನೆಗಳ ಗೋದಾಮುಗಳಲ್ಲಿ ಸಕ್ಕರೆ ದಾಸ್ತಾನು ಇದ್ದರೂ ಬ್ಯಾಂಕಿಗೆ ಬಡ್ಡಿ ಕಟ್ಟಬೇಕಾದ ಸ್ಥಿತಿ ಇದೆ’ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಅಮರ್‌ ಖಂಡ್ರೆ ಮಾತನಾಡಿ,‘ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕಡಿಮೆ ಇದೆ. ಕಾರ್ಖಾನೆಗಳು ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ ಪ್ರತಿ ಟನ್‌ ಕಬ್ಬಿಗೆ ₹ 2,700 ಕೊಡಲಾಗದು’ ಎಂದು ಸ್ಪಷ್ಟಪಡಿಸಿದರು.

ಸಂಸದರು ‘ಕೊಡಲೇ ಬೇಕು’ ಎಂದು ಪಟ್ಟು ಹಿಡಿದಾಗ, ‘ನೀವು ನಮ್ಮ ಮೇಲೆ ಒತ್ತಡ ಹೇರಿದರೆ, ರಾಜೀನಾಮೆ ನೀಡಲು ಸಿದ್ಧ. ನೀವೇ ಕಾರ್ಖಾನೆ ನಡೆಸಿಕೊಳ್ಳಿ. ಬೆಲೆಯನ್ನೂ ನೀವೇ ನಿಗದಿ ಮಾಡಿಕೊಳ್ಳಿ’ ಎಂದು ಖಾರವಾಗಿ ಉತ್ತರಿಸಿದರು.

‘ಕಬ್ಬು ನಿಯಂತ್ರಣ ಮಂಡಳಿಗೆ ಕಬ್ಬಿಗೆ ದರ ನಿಗದಿ ಪಡಿಸುವ ಅಧಿಕಾರ ಇದೆ. ಆ ಮಂಡಳಿಗೆ ನಾನು ಸದಸ್ಯನಾಗಿದ್ದೇನೆ. ಈಗಾಗಲೇ ಮಂಡಳಿ ಸಭೆ ನಡೆಸಿದೆ. ಹೆಚ್ಚು ದರ ಕೊಡುವಂತೆ ಇಲ್ಲಿ ಒತ್ತಡ ಹಾಕಿದರೆ ಪ್ರಯೋಜನ ಇಲ್ಲ’ ಎಂದು ಹೇಳಿದರು.

ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಬೆಲೆ ನಿಗದಿಗಾಗಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಕಾರ್ಖಾನೆಗಳ ಅಧ್ಯಕ್ಷರಿಗೆ ಒಂದಿಷ್ಟು ಸಮಯ ಕೊಡಬೇಕು’ ಎಂದರು.

ಬೀದರ್‌ ಶಾಸಕ ರಹೀಂ ಖಾನ್, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT