ಮಂಗಳವಾರ, ಮಾರ್ಚ್ 21, 2023
20 °C
ಪಾಳು ಬಿದ್ದ ಕಟ್ಟಡಗಳು: ಸರ್ಕಾರದ ಹಣ ಪೋಲು

ಗುರುಭವನಕ್ಕೆ ದೊರೆಯದ ಗುರುಬಲ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಶಿಕ್ಷಕರ ಅನುಕೂಲಕ್ಕಾಗಿಯೇ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುರುಭವನಗಳನ್ನು ನಿರ್ಮಿಸಿದೆ. ಆದರೆ, ಕೆಲವು ಉದ್ಘಾಟನೆಗೊಳ್ಳದೆ ಹಾಳಾಗಿವೆ. ಇನ್ನೂ ಕೆಲವು ಶಿಕ್ಷಕರ ವಾಸವಿಲ್ಲದೆ ಸೊರಗಿವೆ.

ಜಿಲ್ಲಾ ಕೇಂದ್ರ ಬೀದರ್‌ ನಗರದಲ್ಲಿರುವ ಗುರುಭವನ ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಇಡುವ ಗೋದಾಮು ಆಗಿದೆ. ಜಿಲ್ಲಾಡಳಿತ ಮತ ಯಂತ್ರಗಳನ್ನು ಇಡಲು ಬೇರೆ ವ್ಯವಸ್ಥೆ ಮಾಡಿಕೊಂಡಿಲ್ಲ. ಮತ ಯಂತ್ರಗಳನ್ನು ಇಟ್ಟು ಗುರುಭವನಕ್ಕೆ ಬೀಗ ಹಾಕಲಾಗಿದೆ.
ಶಿಕ್ಷಣ ಇಲಾಖೆಗೆ ಅಧಿಕಾರಿಗಳ ಸಭೆ, ಶೈಕ್ಷಣಿಕ ಚಟುವಟಿಕೆಗಳ ತರಬೇತಿ, ಕೌನ್ಸೆಲಿಂಗ್‌ ನಡೆಸಲು ಪ್ರತಿ ವರ್ಷ ತೊಂದರೆಯಾಗುತ್ತಿದೆ. ಆದರೆ, ಜಿಲ್ಲಾಡಳಿತ ಗುರುಭವನವನ್ನು ಶಿಕ್ಷಣ ಇಲಾಖೆಗೆ ಬಿಟ್ಟುಕೊಡಲು ಸಿದ್ಧವಿಲ್ಲ.

2017ರಲ್ಲಿ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರಿಗೆ ಗುರುಭವನದ ನವೀಕರಣಕ್ಕೆ ಮನವಿ ಮಾಡಿದ್ದರು. ಖಂಡ್ರೆ ಅವರು ₹ 10 ಲಕ್ಷ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೂ ಸೂಚಿಸಿದ್ದರು. ಜಿಲ್ಲಾಡಳಿತ ಇದಕ್ಕೆ ಸ್ಪಂದಿಸಲಿಲ್ಲ.

ನಗರದಲ್ಲಿ ಜಾತಿ ಸಮುದಾಯ ಭವನಗಳು ಸರತಿ ಸಾಲಿನಂತೆ ಒಂದರ ಪಕ್ಕದಲ್ಲೊಂದು ನಿರ್ಮಾಣವಾಗುತ್ತಿವೆ. ಎಲ್ಲರಿಗೂ ಅನುಕೂಲವಾಗುವಂತ ಒಂದು ಸುಸಜ್ಜಿತವಾದ ಭವನ ಇಲ್ಲ. ಪ್ರತಿಯೊಂದಕ್ಕೂ ಜಿಲ್ಲಾ ರಂಗ ಮಂದಿರವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.
ತಾಲ್ಲೂಕು ಕೇಂದ್ರಗಳಲ್ಲಿ 10 ವರ್ಷಗಳ ಹಿಂದೆಯೇ ಗುರುಭವನಗಳು ನಿರ್ಮಾಣವಾಗಿವೆ. ಅವು ಉದ್ಘಾಟನೆಗೊಳ್ಳುವ ಮೊದಲೇ ಹಾಳಾಗಿವೆ. ಕಳ್ಳರು ಬಾಗಿಲು, ಕಿಟಕಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕೆಲ ಭವನ ಜೂಜಾಟದ ಅಡ್ಡೆಗಳಾಗಿವೆ. ಸರ್ಕಾರದ ಹಣ ಪೋಲಾದರೂ ಕೇಳುವವರೇ ಇಲ್ಲವಾಗಿದ್ದಾರೆ.

ಔರಾದ್, ಠಾಣಾಕುಶನೂರ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ, ಧನ್ನೂರ, ಹಲಬರ್ಗಾ, ಬಸವಕಲ್ಯಾಣ ತಾಲ್ಲೂಕಿನ ಮಂಠಾಳ, ಮುಡಬಿ, ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ, ಚಿಟಗುಪ್ಪ ತಾಲ್ಲೂಕಿನ ನಿರ್ಣಾದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಹಾಗೂ ಅತಿಥಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಚಿಕ್ಕದಾದ ಭವನಗಳನ್ನು ನಿರ್ಮಿಸಲಾಗಿದೆ.
ಇವುಗಳಲ್ಲಿ ಒಂದೆರಡನ್ನು ಹೊರತುಪಡಿಸಿದರೆ ಉಳಿದವು ಉಪಯೋಗಕ್ಕೆ ಬಂದಿಲ್ಲ.

******

ಕಾಮಗಾರಿ ಅಪೂರ್ಣ: ಭರವಸೆಗೆ ಸೀಮಿತವಾದ ಅನುದಾನ

ಬಸವಕಲ್ಯಾಣ: ನಗರದ ಬಿಇಒ ಕಚೇರಿ ಎದುರಿಗಿರುವ ಗುರು ಭವನ ಕಟ್ಟಡ ಮೂರು ದಶಕಗಳಿಂದ ಹಾಳು ಬಿದ್ದಿದೆ.

ಕೆಲ ಮಟ್ಟಿನ ಕಾಮಗಾರಿ‌ ನಡೆಸಿ ಚಿಕ್ಕ ಸಭಾ ಭವನ ಹಾಗೂ ಅಂಗಡಿಗಳನ್ನು ನಿರ್ಮಿಸಿದ ನಂತರ ಹಿಂದುಗಡೆ ದೊಡ್ಡ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಅದರ ಕೆಲಸ ಅಪೂರ್ಣವಾಗಿದೆ. ಸೆಪ್ಟೆಂಬರ್ 5 ಕ್ಕೆ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು ಕೆಲಸ ಪೂರ್ಣಗೊಳಿಸಲು ಅನುದಾನ ಮಂಜೂರು ಮಾಡುವ ಭರವಸೆ‌ ನೀಡುತ್ತ ಬಂದಿದ್ದಾರಾದರೂ ಸಮಸ್ಯೆ ಬಗೆಹರಿದಿಲ್ಲ. ಕೆಲ ಸಲ ಶಿಕ್ಷಕರಿಂದ ವಂತಿಕೆ ಸಂಗ್ರಹಿಸಲಾಗಿದ್ದರೂ ಈ ಹಣ ಏತಕ್ಕೂ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಕೆಲಸ ಮುಂದುವರಿಸಲಾಗುತ್ತಿಲ್ಲ.

ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋರಿಕೆಯ ಮೇರೆಗೆ ನೂತನ ಶಾಸಕ ಶರಣು ಸಲಗರ ಅವರು ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆಯ ಶಿಥಿಲ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಲು ಅನುದಾನ ಮಂಜೂರು ಮಾಡಿಸಿಕೊಳ್ಳುತ್ತೇನೆ. ಆಕರ್ಷಕವಾದ ಕಟ್ಟಡದ ನೀಲನಕ್ಷೆ ಸಿದ್ಧಪಡಿಸಿ ಕೊಡಬೇಕು ಎಂದು ಅವರು ಸಂಘದವರಿಗೆ ತಿಳಿಸಿದ್ದಾರೆ.
ಶೀಘ್ರದಲ್ಲಿ ಭವನ ನಿರ್ಮಾಣ ಆಗಬಹುದು ಎಂಬ ನಂಬಿಕೆ ಶಿಕ್ಷಕರದ್ದಾಗಿದೆ. ಇದರ ಕಾಮಗಾರಿ ಪೂರ್ಣಗೊಂಡರೆ ಶಿಕ್ಷಕರ ಸಂಘದ ಸಮಾರಂಭಗಳಿಗೆ ಹಾಗೂ ಮನೆ ಕಾರ್ಯಕ್ರಮ ಕಡಿಮೆ ಖರ್ಚಿನಲ್ಲಿ ನಡೆಸಲು ಅನುಕೂಲ ಆಗಲಿದೆ. ಅತಿಥಿಗಳ ವಾಸಕ್ಕೆ ಕೊಠಡಿ, ಸಂಘಕ್ಕೆ ಕಚೇರಿಯೂ ಲಭ್ಯವಾಗಲಿದೆ.
* * *

ಗುರುಭವನ ಪಾಳು: ಲಕ್ಷಾಂತರ ರೂಪಾಯಿ ಪೋಲು

ಭಾಲ್ಕಿ: ತಾಲ್ಲೂಕಿನ ಧನ್ನೂರ, ಭಾತಂಬ್ರಾ ಗ್ರಾಮದಲ್ಲಿ ಸರ್ಕಾರ ಶಿಕ್ಷಕರ ವಾಸಕ್ಕೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ನಿರ್ಮಿಸಿರುವ ಗುರು ಭವನ ಶಿಕ್ಷಕರ ವಾಸವಿಲ್ಲದೆ ಪಾಳು ಬಿದ್ದಿದ್ದು, ಸರ್ಕಾರದ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ.
ನಮ್ಮ ಗ್ರಾಮದಲ್ಲಿ ನಿರ್ಮಿಸಿರುವ ಗುರುಭವನದಲ್ಲಿ ಶಿಕ್ಷಕರೇ ಇರದ ಕಾರಣ ಸುಸಜ್ಜಿತ ಕಟ್ಟಡ ಹಾಳು ಕೊಂಪೆಯಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಭಾತಂಬ್ರಾದ ಪ್ರಮುಖ ಮಹೇಶ ರಾಚೋಟೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶಿಕ್ಷಕರು ಗುರುಭವನದಲ್ಲಿ ಏಕೆ ವಾಸಿಸುತ್ತಿಲ್ಲ ಎಂದು ಮುಖ್ಯಶಿಕ್ಷಕರನ್ನು ಕೇಳಿದರೆ ಕಟ್ಟಡವನ್ನು ಯಾರು ನಿರ್ಮಿಸಿದ್ದಾರೋ ಗೊತ್ತಿಲ್ಲ. ಅವುಗಳನ್ನು ನಮ್ಮ ಸುಪರ್ದಿಗೂ ನೀಡಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಕಟ್ಟಡಗಳ ನೈಜ ಸ್ಥಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ರಿಪೇರಿ ಕಾರ್ಯ ಮುಗಿದ ನಂತರ ಶಿಕ್ಷಕರ ವಾಸಕ್ಕೆ ಕ್ರಮ ವಹಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಪ್ರಜಾವಾಣಿʼಗೆ ತಿಳಿಸಿದರು.
* * * *

ನಿರ್ವಹಣೆ ಇಲ್ಲದೆ ಹಾಳಾದ ಕಟ್ಟಡ

ಔರಾದ್: ಸುಮಾರು ಎರಡು ದಶಕದ ಹಿಂದೆ ನಿರ್ಮಿಸಲಾದ ಇಲ್ಲಿಯ ಗುರುಭವನ ಕಟ್ಟಡ ಹಾಳು ಬಿದ್ದಿದೆ.
ಶಿಕ್ಷಕರ ಸಂಘದ ಕಾರ್ಯಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮೀಣ ಭಾಗದ ಶಿಕ್ಷಕರಿಗಾಗಿಯೇ ವಿಶ್ರಾಂತಿ ಹಾಗೂ ತುರ್ತು ಸಂದರ್ಭದಲ್ಲಿ ರಾತ್ರಿ ವಾಸ್ತವ್ಯದ ಉದ್ದೇಶಕ್ಕಾಗಿ ಇರುವ ಗುರುಭವನ ಕಟ್ಟಡಕ್ಕೆ ಈಗ ಬೀಗ ಬಿದ್ದು, ಸುತ್ತಲೂ ಹಂದಿ, ನಾಯಿಗಳು ಓಡಾಡುತ್ತಿವೆ.

100X100 ನಿವೇಶನದಲ್ಲಿ ಅರ್ಧದಷ್ಟು ಭಾಗ ಕಟ್ಟಡ ಇದೆ. ನಿರ್ವಹಣೆ ಇಲ್ಲದೆ ಹಾಳಾಗಿದೆ. ಮಳೆ ಬಂದರೆ ಛಾವಣಿ ಮೇಲಿಂದ ನೀರು ಸೋರುತ್ತದೆ. ಬಾಗಿಲು, ಕಿಟಕಿ ಗಾಜು ಒಡೆದಿವೆ. ಸುತ್ತಲೂ ಹುಲ್ಲು, ಮುಳ್ಳಿನ ಪೊದೆ ಬೆಳೆದಿವೆ.

‘ಕೆಲ ವರ್ಷ ಗುರುಭವನ ಕಟ್ಟಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಬಳಸಿಕೊಂಡಿದ್ದಾರೆ. ಅವರು ಹೋದ ನಂತರ ಬೀಗ ಹಾಕಲಾಗಿದೆ. ಸದ್ಯ ಈ ಕಟ್ಟಡ ಬಳಸಲು ಯೋಗ್ಯವಾಗಿಲ್ಲ’ ಎಂದು ಹೇಳುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಗಜಾನನ ಮಳ್ಳಾ.

‘ಈ ಗುರುಭವನ ಬಳಸಲು ಯೋಗ ಆಗಬೇಕಾದರೆ ರಿಪೇರಿ ಮಾಡಬೇಕಾಗುತ್ತದೆ. ಇದಕ್ಕಾಗಿ ₹ 10 ಲಕ್ಷ ಅಗತ್ಯ ಎಂದು ಸಂಘದ ಜಿಲ್ಲಾ ಹಾಗೂ ರಾಜ್ಯ ಕಚೇರಿ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎನ್ನುತ್ತಾರೆ.

‘ತಾಲ್ಲೂಕು ಮಟ್ಟದಲ್ಲಿ ಗುರುಭವನ ಬಹಳ ಅಗತ್ಯವಾಗಿದೆ. ನಾವು ಸಾಕಷ್ಟು ಶ್ರಮವಹಿಸಿ ಗುರುಭವನ ಕಟ್ಟಡ ಕಟ್ಟಿದ್ದೇವೆ. ಆದರೆ ನಂತರ ದಿನಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದೆ. ಈಗ ನಮ್ಮ ಕ್ಷೇತ್ರದ ಶಾಸಕ ಪ್ರಭು ಚವಾಣ್ ಸಚಿವರಾಗಿದ್ದಾರೆ. ಅವರನ್ನು ಸಂಪರ್ಕಿಸಿ ಅಗತ್ಯ ಅನುದಾನ ಪಡೆದು ಹೊಸ ಗುರುಭವನ ಕಟ್ಟಡ ಕಟ್ಟಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುನಾಥ ತವಾಡೆ ತಿಳಿಸುತ್ತಾರೆ.

 

ಉತ್ತಮ ಸ್ಥಿತಿಯಲ್ಲಿ ಹುಮನಾಬಾದ್ ಗುರುಭವನ:

ಹುಮನಾಬಾದ್‌ನಲ್ಲಿರುವ ಗುರುಭವನ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿ ಆಗಾಗ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆಯುತ್ತವೆ. 40 ವರ್ಷಗಳ ಹಿಂದಿನ ಗುರುಭವನ ಮರು ನಿರ್ಮಾಣಕ್ಕಾಗಿ ಈಗಾಗಲೇ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಹೇಳುತ್ತಾರೆ.

 

ಪೂರಕ ಮಾಹಿತಿ:
ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ಗುಂಡು ಅತಿವಾಳೆ, ಗಿರಿರಾಜ್‌ ವಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು