ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂಪುರ ವಾರ್ಡ್‌ನಲ್ಲಿ ನೀರಿಗೆ ಪರದಾಟ

ಚರಂಡಿಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್‌, ಕಾಯಿಲೆ ಭೀತಿ
Last Updated 28 ಏಪ್ರಿಲ್ 2018, 14:06 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಮೊದಲ ವಾರ್ಡ್‌ ಮುಸ್ಲಿಂಪುರದ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ದಾಹ ನೀಗಿಸಿಕೊಳ್ಳಲು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ.

ಬಳಕೆಗೆ ಮತ್ತು ಕುಡಿಯಲು ಉಳ್ಳವರು ಖಾಸಗಿ ಶುದ್ಧೀಕರಣ ಘಟಕಗಳನ್ನು ಅವಲಂಬಿಸಿದ್ದಾರೆ. ಆದರೆ, ಬಡ ಜನರು ಮಾತ್ರ ನೀರಿನ ಅಭಾವದಿಂದ ಸಂಕಷ್ಟಪಡುವಂತಾಗಿದೆ. ಮುಸ್ಲಿಂಪುರವನ್ನು ಸಂಪೂರ್ಣ ಸುತ್ತುಹಾಕಿದರೆ ಎಲ್ಲೂ ಸಮರ್ಪಕ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ ಕಂಡುಬರುವುದಿಲ್ಲ. ಅಲ್ಲೊಂದು, ಇಲ್ಲೊಂದು ಚರಂಡಿಗಳಲ್ಲಿ ಪೈಪ್‌ಲೈನ್‌ ಅಳವಡಿಸಿರುವುದು ಕಂಡುಬರುತ್ತದೆ.

ಚರಂಡಿಗಳ ಸಾಲಿನಲ್ಲಿ ಅಳವಡಿಸಿರುವ ಕಾರಣ ಅವು ಸುರಕ್ಷಿತವಾಗಿಲ್ಲ. ನಳಗಳನ್ನು ಮುಚ್ಚುವ ವ್ಯವಸ್ಥೆ ಕೂಡ ಇಲ್ಲ. ತೆರೆದ ನಳಗಳಲ್ಲಿ ಚರಂಡಿ ನೀರು ಸೇರಿ ಎಷ್ಟೋ ಬಾರಿ ಜನರು ವಾಂತಿ, ಭೇದಿಯಿಂದ ನರಳಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿ ಜಾಕೀರ್ ಅಲಿ.

ಮುಸ್ಲಿಂಪುರಕ್ಕೆ ಒಡೆದ ಪೈಪುಗಳಲ್ಲಿ ದಿನಬಿಟ್ಟು ದಿನ ನೀರು ಪೂರೈಕೆಯಾಗುತ್ತದೆ. ಆದರೆ, ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಿಲ್ಲ ಎಂಬುದಾಗಿ ಇಲ್ಲಿನ ನಿವಾಸಿಗಳ ದೂರುತ್ತಾರೆ. ಹಿರೇಅಗಸಿಯಿಂದ ಉತ್ತರಾಭಿಮುಖ ವಾಗಿ ಮುಸ್ಲಿಂಪುರವನ್ನು ಪ್ರವೇಶಿಸಿದರೆ ಗೋಶಾಲೆ ಎದುರುಗೊಳ್ಳುತ್ತದೆ. ಅಲ್ಲಿಂದ 50 ಮೀಟರ್ ದೂರಕ್ಕೆ ಹೆಜ್ಜೆ ಹಾಕಿದರೆ ಸಿಗುವ ಸರ್ಕಾರಿ ಉರ್ದು ಶಾಲೆಯ ಸುತ್ತಲೂ ಇರುವ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುವುದು ಕಂಡುಬರುತ್ತದೆ.

ಕೆಟ್ಟುನಿಂತ ಕೈಪಂಪ್: ಇಲ್ಲಿರುವ ಉರ್ದು ಶಾಲೆ ಕಾಂಪೌಂಡಿಗೆ ಹೊಂದಿಕೊಂಡಿರುವ ಕೈಪಂಪ್‌ ಕೆಟ್ಟು ಆರು ತಿಂಗಳು ಕಳೆದಿದೆ. ಅದು ಹಾಳಾದ ಮೇಲೆ ಕುಡಿಯುವ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂಬುದಾಗಿ ಇಲ್ಲಿನ ನಿವಾಸಿ ಶೌಕತ್‌ ಅಲಿ ಹೇಳುತ್ತಾರೆ.

‘ನಗರಸಭೆ ಪೂರೈಕೆ ಮಾಡುವ ಅಶುದ್ಧ ನೀರನ್ನು ಬಳಕೆಗೆ ಇಟ್ಟುಕೊಂಡು ಕೈಪಂಪ್‌ ನೀರು ಕುಡಿಯುಲು ಉಪಯೋಗಿಸುತ್ತಾ ಬಂದಿದ್ದೇವೆ. ಚರಂಡಿಗೆ ಅಂಟಿಕೊಂಡಿರುವುದರಿಂದ ಕೈಪಂಪ್‌ ನೀರು ಸಹ ದುರ್ವಾಸನೆಯಿಂದ ಕೂಡಿರುತ್ತದೆ. ಆದರೆ, ಅನಿವಾರ್ಯವಾಗಿ ಇದೇ ನೀರನ್ನು ಇಲ್ಲಿನ ಜನರು ಬಳಸುತ್ತಾ ಬಂದಿದ್ದಾರೆ ಎಂದು ಹೇಳುವ ಅವರು, ಈ ನೀರು ಕುಡಿದು ಜನರು ಆನಾರೋಗ್ಯದಿಂದ ನರಳುತ್ತಿದ್ದಾರೆ’ ಎಂಬುದಾಗಿ ನೋವು ತೋಡಿಕೊಂಡರು.

ನೀರಿಗಾಗಿ ಬಿಡಿಗಾಸು ಖರ್ಚಿಲ್ಲ: ಮುಸ್ಲಿಂಪುರದಲ್ಲಿ ಮಧ್ಯಮ ವರ್ಗ ಹಾಗೂ ಮರಗೆಲಸ ಮಾಡುವ ದಿನಗೂಲಿ ಜನರೇ ಹೆಚ್ಚಾಗಿದ್ದಾರೆ. ಬಹುತೇಕ ಅನಕ್ಷರಸ್ಥರು ಇದ್ದಾರೆ.

ಶುದ್ಧ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ಈ ಜನರು ಜನಪ್ರತಿನಿಧಿಗಳಿಗೆ ಹಲವು ಬರಿ ಮನವಿ ಮಾಡಿದ್ದಾರೆ. ಜನರ ಧ್ವನಿಗೆ ನಗರಸಭೆ ಜಾಣ ಕಿವುಡು ಪ್ರದರ್ಶಿಸುತ್ತಾ ಬಂದಿದೆ. ನಗರಸಭೆಯ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಇಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಪ್ರಸಕ್ತ ಬೇಸಿಗೆಯಲ್ಲಿ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತುರ್ತು ದುರಸ್ತಿಗೆ ಹಣ ನೀಡದ ನಗರಸಭೆ

ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ದುರಸ್ತಿ ಕಾಮಗಾರಿಗೆ ನಗರಸಭೆ ಹಣ ಮೀಸಲಿಟ್ಟಿಲ್ಲ. ಅಷ್ಟೇ ಅಲ್ಲ, ದುರಸ್ತಿಗೆ ಬೇಕಾಗುವ ಉಪಕರಣ, ಸಾಮಗ್ರಿಗಳು ಕೂಡ ನಗರಸಭೆಯಲ್ಲಿ ಇಲ್ಲ. ಪೌರಾಯುಕ್ತರಿಗೆ ದೂರು ನೀಡಿ ನಮಗೂ ಸಾಕಾಗಿದೆ. ಈ ಮಧ್ಯೆ ಸಾಧ್ಯವಾದಷ್ಟು ಮಟ್ಟಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗಿದೆ ಎಂದು ಮುಸ್ಲಿಂಪುರ ವಾರ್ಡ್‌ ಸದಸ್ಯ ಜಕೀಯುದ್ದೀನ್ ಹೇಳುತ್ತಾರೆ.

₹15 ಕೋಟಿ ವೆಚ್ಚದಲ್ಲಿ ಹೊಸ ಜಾಕ್‌ವೆಲ್

ಭೀಮಾನದಿ ಸೇತುವೆ ಬಳಿ ಜಾಕ್‌ವೆಲ್‌ ಇದ್ದು, ನೀರಿನ ಹರಿವು ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ₹15 ಕೋಟಿ ವೆಚ್ಚದಲ್ಲಿ ಗುರಸಣಗಿ ಬ್ಯಾರೇಜ್‌ ಬಳಿ ಜಾಕ್‌ವಲ್‌ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ತಿಳಿಸಿದರು.

**
ನಗರಸಭೆಗೆ ಹೊಂದಿರುಕೊಂಡಿರುವ ವಾರ್ಡ್‌ ಮುಸ್ಲಿಂಪುರದಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ದೂರು ನೀಡಿ ನಾವೇ ಬೇಸತ್ತಿದ್ದೇವೆ 
– ಕೌಸರ್ ಜಾನ್,ಮುಸ್ಲಿಂಪುರ ನಿವಾಸಿ

**
ಗುರಸಣಗಿ ಬ್ಯಾರೇಜ್‌ನಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದ್ದರೂ, ನಗರದ ನಿವಾಸಿಗಳು ನೀರಿನ ಅಭಾವ ಎದುರಿಸುವಂತಾಗಿರುವುದು ದುರಂತ
– ಶೌಕತ್‌ ಅಲಿ, ಹಿರಿಯ ನಾಗರಿಕ, ಮುಸ್ಲಿಂಪುರ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT