ಮಂಗಳವಾರ, ಜುಲೈ 5, 2022
27 °C
ಉಕ್ರೇನ್‌ನಿಂದ ಮರಳಿದ ಶಶಾಂಕ ದೊಡ್ಡಗಾಣಿಗೇರ್‌ ಮನದಾಳದ ಮಾತು

ಭಾರತದ ಧ್ವಜ ನೋಡಿ ಮುಂದೆ ಹೋಗಲು ಬಿಟ್ಟರು: ಉಕ್ರೇನ್‌ನಿಂದ ಮರಳಿದವರ ಮನದಾಳದ ಮಾತು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವೈದ್ಯಕೀಯ ಶಿಕ್ಷಣ ಪಡೆಯಲು ಮೂರು ತಿಂಗಳ ಹಿಂದೆಯಷ್ಟೇ ಉಕ್ರೇನ್‌ಗೆ ಹೋಗಿದ್ದೆ. ಎರಡು ತಿಂಗಳು ಎಲ್ಲವೂ ಚೆನ್ನಾಗಿ ನಡೆಯಿತು. ಆಸಕ್ತಿಯಿಂದ ನಿತ್ಯ ಪಾಠ ಕೇಳುತ್ತಿದ್ದೇವು. ಫೆಬ್ರುವರಿ ಅಂತ್ಯದಲ್ಲಿ ಕರಾಳ ಛಾಯೆ ಆವರಿಸತೊಡಗಿತು. ಒಂದೆರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥಗೊಳ್ಳಬಹುದು ಎನ್ನುವ ವಿಶ್ವಾಸದಲ್ಲಿ ಇದ್ದೆ. ಆದರೆ, ಎರಡು ವಾರಗಳಲ್ಲಿ ಎಲ್ಲವೂ ಮುಗಿದು ಹೋಯಿತು...

ಹೀಗೆ ಯುದ್ಧ ಪೀಡಿತ ಉಕ್ರೇನ್‌ನಿಂದ ಬೀದರ್‌ಗೆ ಮರಳಿದ ಶಶಾಂಕ ವಿಜಯಕುಮಾರ ದೊಡ್ಡಗಾಣಿಗೇರ್‌ ಅವರು ಉಕ್ರೇನ್‌ನಲ್ಲಿ ಕಳೆದ ಆತಂಕದ ದಿನಗಳ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಸಿಗದ ಕಾರಣ ಡಿಸೆಂಬರ್‌ ಎರಡನೇ ವಾರದಲ್ಲಿ ಅನೇಕರು ಉಕ್ರೇನ್‌ಗೆ ಹೋಗಿದ್ದೇವು. ಡಿಸೆಂಬರ್ 16ರಂದು ತರಗತಿಗಳು ಆರಂಭವಾಗಿದ್ದವು. ಎರಡು ತಿಂಗಳು ತರಗತಿಗಳೂ ಚೆನ್ನಾಗಿ ನಡೆದವು. ಹಾಸ್ಟೆಲ್‌ನಲ್ಲಿ ಉಳಿಸಿಕೊಂಡಿದ್ದ ನಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯುದ್ಧ ಆರಂಭವಾದ ಮೇಲೆ ಅಲ್ಲಿ ಪರಿಸ್ಥಿತಿ ಬಿಗಡಾಯಿಸಿತು ಎಂದು ತಿಳಿಸಿದರು.

ಬಾಂಬ್‌ ದಾಳಿ, ಮಿಸೈಲ್‌ ಹಾಗೂ ಸೆಲ್‌ ದಾಳಿಯಿಂದ ಕಟ್ಟಡಗಳು ನೆಲಕ್ಕುರುಳಲು ಶುರುವಾದವು. ಜನ ಜೀವ ಉಳಿಸಿಕೊಳ್ಳಲು ಪರದಾಡತೊಡಗಿದರು. ಗೆಳೆಯರೊಂದಿಗೆ ನಾನು ಬ್ಯಾಗ್‌ ತುಂಬಿಕೊಂಡು ಹಾಸ್ಟೆಲ್‌ನಿಂದ ಹೊರ ಬಂದು ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಾಯಿತು ಎಂದು ಹೇಳಿದರು.

ಬಂಕರ್‌ಗಳಲ್ಲಿ ವಾಸವಾಗಿದ್ದ ನಮಗೆ ಉಕ್ರೇನ್‌ ನಾಗರಿಕರು ಆಹಾರ ಕೊಡುತ್ತಿದ್ದರು. ಉಕ್ರೇನ್‌ ಹಾಗೂ ರಷ್ಯನ್‌ ನಾಗರಿಕರಿಂದ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಆದರೆ, ಹಾರ್ಕಿವ್ ತೊರೆಯುವಂತೆ ಸರ್ಕಾರ ಸೂಚನೆ ನೀಡಿದ ನಂತರ ರೈಲು ನಿಲ್ದಾಣದಲ್ಲಿ ಕಾಲ ಕಳೆಯಬೇಕಾಯಿತು. ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ಅಲ್ಲಿ ಉಳಿಯುವಂತಿರಲಿಲ್ಲ. ಅಲ್ಲಿಂದ ಬರಲು ವಿಮಾನಗಳೂ ಇರಲಿಲ್ಲ. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವು. ಒಟ್ಟಾರೆ ಭಯದ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿಸಿದರು.

ಹಾರ್ಕಿವ್ ರೈಲು ನಿಲ್ದಾಣದಲ್ಲಿ ಜನಜಂಗುಳಿ ಇತ್ತು. ಸುರಕ್ಷಿತ ಸ್ಥಳಗಳಿಗೆ ತೆರಳಲು ಉಕ್ರೇನ್‌ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಯಿತು. ನಂತರ ಭಾರತ ಮೂಲದ ವಿದ್ಯಾರ್ಥಿನಿಯರನ್ನು ರೈಲಿನಲ್ಲಿ ಕಳಿಸಿಕೊಡಲಾಯಿತು. ನಾವು ಮರುದಿನ ರೈಲು ಬರುವವರೆಗೆ ಮತ್ತೆ ಬಂಕರ್‌ನಲ್ಲೇ ಕಾಲ ಕಳೆಯಬೇಕಾಯಿತು ಎಂದು ಹೇಳಿದರು.

ಉಕ್ರೇನ್‌ನ ಒಲಗಿಸ್ಕಾದಲ್ಲಿನ ಹಾಸ್ಟೆಲ್‌ನಿಂದ ಹಾರ್ಕಿವ್‌ ರೈಲು ನಿಲ್ದಾಣದ ವರೆಗೆ 9 ಕಿ.ಮೀ ನಡೆದುಕೊಂಡು ಬಂದೇವು. ರೈಲು ನಿಲ್ದಾಣದಲ್ಲಿ ಮೂರು ಬಾರಿ ಸೆಲ್‌ ದಾಳಿ ಮಾಡಲಾಯಿತು. ಭಾರತದ ಧ್ವಜ ಹಿಡಿದು ಹೊರ ಬಂದ ನಂತರ ದಾಳಿ ನಿಲ್ಲಿಸಲಾಯಿತು.

ರೈಲು ನಿಲ್ದಾಣದಿಂದ ಪಿಸೊಚಿಯನ್‌ ವರೆಗೆ 15 ಕಿ.ಮೀ ನಡೆದು ಬಂದು ಅಲ್ಲಿ ವಾಸ್ತವ್ಯ ಮಾಡಿದೇವು. ಮೂರನೇ ದಿನ ಬಸ್‌ ವ್ಯವಸ್ಥೆ ಮಾಡಲಾಯಿತು. ಅಲ್ಲಿಂದ 1,100 ಕಿ.ಮೀ ಬಸ್‌ನಲ್ಲಿ 32 ತಾಸು ಕ್ರಮಿಸಿ ರೋಮೆನಿಯಾ ಗಡಿ ತಲುಪಿದೇವು. ಗಡಿ ದಾಟಲು ಎರಡು ತಾಸು ಬೇಕಾಯಿತು. ರೋಮೆನಿಯಾದಲ್ಲಿ ಒಂದು ದಿನ ಉಳಿದಿದ್ದೇವು ಎಂದರು.

ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ಮಾರ್ಚ್‌ 7ರಂದು ರೋಮಾನಿಯಾದಿಂದ ದೆಹಲಿ ತಲುಪಿದೇವು. ತೀವ್ರ ಬಳಲಿದ್ದ ಕಾರಣ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ನಂತರ ಮಾ.8ರಂದು ದೆಹಲಿಯಿಂದ ವಿಮಾನದ ಮೂಲಕ ರಾತ್ರಿ ಹೈದರಾಬಾದ್‌ಗೆ ಬಂದೇವು. ವಿಮಾನ ನಿಲ್ದಾಣದಲ್ಲಿ ಬಂದು ನಿಂತಿದ್ದ ತಂದೆ, ತಾಯಿ, ತಂಗಿ ಹೂಗುಚ್ಛ ನೀಡಿ ಅಪ್ಪಿಕೊಂಡು ಮನೆಗೆ ಕರೆ ತಂದರು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು