ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ವಲ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ

ಸಾಯಿಜ್ಞಾನ ಪಬ್ಲಿಕ್ ಶಾಲೆ ವಾರ್ಷಿಕೋತ್ಸವದಲ್ಲಿ ರಮೇಶ ಕುಲಕರ್ಣಿ ಅಭಿಮತ
Last Updated 24 ಜನವರಿ 2020, 16:20 IST
ಅಕ್ಷರ ಗಾತ್ರ

ಬೀದರ್: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಗುಣಮಟ್ಟದ ಶಿಕ್ಷಣದ ಅಗತ್ಯ ಇದೆ’ ಎಂದು ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಯಿಜ್ಞಾನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿ ಮಕ್ಕಳಲ್ಲೂ ಒಂದಿಲ್ಲೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸ್ಪರ್ಧಾ ಮನೋಭಾವ ಬೆಳೆಸಿ ಸಾಧನೆಗೆ ಪ್ರೇರೇಪಿಸಬೇಕು’ ಎಂದು ಹೇಳಿದರು.

‘ಶಿಕ್ಷಣದ ಜತೆಗೆ ಮಾನವೀಯತೆ, ನೈತಿಕತೆಗಳನ್ನೂ ಹೇಳಿಕೊಡಬೇಕು. ಈ ಮೂಲಕ ಅವರನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಹಾಗೂ ಸಾಯಿಜ್ಞಾನ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಅದರ ಫಲವಾಗಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಲ್ಲಿ ಪ್ರತಿ ವರ್ಷ ಉತ್ತಮ ಸಾಧನೆ ತೋರುತ್ತಿದ್ದಾರೆ’ ಎಂದು ಹೇಳಿದರು.

‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸ್ಪರ್ಧೆ, ಆಟೋಟದಂತಹ ಪಠ್ಯೇತರ ಚುಟವಟಿಕೆಗಳಿಗೂ ಉತ್ತೇಜನ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಒದಗಿಸಲು ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಬೆಂಗಳೂರಿನ ಹೆಸರಾಂತ ಆಟೊಮಿಕ್ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ’ ಎಂದು ಹೇಳಿದರು.

ಸಾಯಿಜ್ಞಾನ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಸತ್ವಿಂದರ್ ಬೀರ್ ಕೌರ್ ಮಾತನಾಡಿ, ‘ಪಾಲಕರು ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಬೇಕು. ಉತ್ತಮ ಪ್ರಜೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದು ತಿಳಿಸಿದರು.

ಮಾಣಿಕರಾವ್ ಕುಲಕರ್ಣಿ ಹಾಗೂ ಉಲ್ಕಾಬಾಯಿ ಕುಲಕರ್ಣಿ ದಂಪತಿಯನ್ನು ಸನ್ಮಾನಿಸಲಾಯಿತು. ತರಗತಿವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಟೊಮಿಕ್ ಅಕಾಡೆಮಿಯ ನಿರ್ದೇಶಕರಾದ ಶ್ರೀಧರ, ಸತೀಶ್ಚಂದ್ರ, ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯ ಸುರೇಶ ಕುಲಕರ್ಣಿ, ಆರತಿ ಆರ್.ಕುಲಕರ್ಣಿ, ವೈಶಾಲಿ ಎಸ್. ಕುಲಕರ್ಣಿ, ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಆಡಳಿತಾಧಿಕಾರಿ ಲೋಕೇಶ ಉಡಬಾಳೆ ಉಪಸ್ಥಿತರಿದ್ದರು.


ಮಕ್ಕಳಿಂದ ನಡೆದ ಭಾರತೀಯ ಸಂಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT