ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದಲೇ ಖಾಸಗಿ ವ್ಯಕ್ತಿಗಳ ಜಮೀನು ಮಾರಾಟ

ಬುಡಾ ನಿವೇಶನ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ: ಸ್ವಾಮಿ
Last Updated 23 ಮಾರ್ಚ್ 2023, 16:02 IST
ಅಕ್ಷರ ಗಾತ್ರ

ಬೀದರ್: ‘ನಗರದ ಗುಲ್ಲರ ಹವೇಲಿ ಸರ್ವೆ ನಂಬರ್ 57 ರಲ್ಲಿನ ನಿವೇಶನ ಸಂಖ್ಯೆ 31ರ ಮಾರಾಟಕ್ಕೆ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಗೆ ಹೈಕೋರ್ಟ್‌ ಕಲಬುರಗಿ ಪೀಠ ತಡೆಯಾಜ್ಞೆ ನೀಡಿದೆ’ ಎಂದು ನಿವೇಶನ ಮಾಲೀಕರಾದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.

‘1973ರ ಅಗಸ್ಟ್ 1ರಂದು ಕೃಷಿಯೇತರ ಜಮೀನಾಗಿ ಪರಿವರ್ತಿಸಲಾಗಿದೆ. ಮೂಲತಃ ಈ ಜಮೀನು ದಿವಗಂತ ಮನೋಹರ್ ಸಿಂಗ್ ಹರನಾಮ್ ಸಿಂಗ್ ಅವರಿಗೆ ಸೇರಿತ್ತು. ಅವರು ಬದುಕಿದ್ದಾಗ ನನಗೆ ಉಯಿಲು ಪತ್ರ ಬರೆದುಕೊಟ್ಟಿದ್ದಾರೆ. ಬುಡಾ ಅಧಿಕಾರಿಗಳು ನನ್ನ ಮಾಲಿಕತ್ವದ ಜಾಗ ಮಾರಾಟ ಮಾಡಲು ಮುಂದಾಗಿರುವುದು ನನಗೆ ಅಚ್ಚರಿ ಉಂಟು ಮಾಡಿದೆ’ ಎಂದು ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಬುಡಾ ಆಯುಕ್ತರಿಗೆ ಜಮೀನು ದಾಖಲೆಗಳನ್ನು ತೋರಿಸಿ ವಿವರಣೆ ಕೇಳಿದರೆ ಈಗಾಗಲೇ ನಿವೇಶನ ಮಾರಾಟಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಯಾವ ಕಾರಣಕ್ಕೂ ರದ್ದು ಪಡಿಸಲು ಹಾಗೂ ಆದೇಶ ಹಿಂದಕ್ಕೆ ಪಡೆಯಲು ಆಗುವುದಿಲ್ಲ. ಆದರೆ, ₹ 5ಲಕ್ಷ ಕೊಟ್ಟರೆ ಬುಡಾ ಅಧ್ಯಕ್ಷರ ಸಹಕಾರದಿಂದ ಎಲ್ಲವನ್ನೂ ಸರಿಪಡಿಸಲಾಗುವುದೆಂದು ನೇರವಾಗಿಯೇ ಹೇಳಿ ನನಗೆ ಆಘಾತ ಉಂಟು ಮಾಡಿದ್ದಾರೆ’ ಎಂದರು.

‘ಗುಲ್ಲರ ಹವೇಲಿ ಸರ್ವೆ ನಂಬರ್ 57 ರಲ್ಲಿನ 31ನೇ ಸಂಖ್ಯೆಯ ನಿವೇಶನ ಬುಡಾಕ್ಕೆ ಸೇರಿಲ್ಲ. ನನ್ನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಸಿಎ ಸೈಟ್‌ ಎಂದು ನಮೂದಿಸಿ ಅಧಿಸೂಚನೆ ಹೊರಡಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಬುಡಾ ಅಧ್ಯಕ್ಷ ಹಾಗೂ ಆಯುಕ್ತ ಸೇರಿಕೊಂಡು ಅಕ್ರಮ ಎಸಗುತ್ತಿದ್ದಾರೆ. ಅಧಿಕಾರದ ದುರುಪಯೋಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ’ ಎಂದರು.

‘ಬುಡಾದಲ್ಲಿ ಇನ್ನೂ ಇಂತಹ 15 ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ನಿವೇಶನಗಳ ಮಾಲೀಕರೇ ನನಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬುಡಾ ಅಧ್ಯಕ್ಷ ಬಾಬು ವಾಲಿ ಹಾಗೂ ಆಯುಕ್ತ ಅಭಯಕುಮಾರ ಅವಧಿಯಲ್ಲಿ ಸಾರ್ವಜನಿಕರಿಗೆ ಅನ್ಯಾಯವಾದ ಮಾಹಿತಿ ಕಲೆ ಹಾಕುತ್ತಿದ್ದೇನೆ. 15 ದಿನಗಳಲ್ಲಿ ವೇದಿಕೆಯೊಂದನ್ನು ರಚಿಸಿ ಸಂಘಟಿತ ಕಾನೂನು ಹೋರಾಟ ಮಾಡುತ್ತೇನೆ’ ಎಂದು ಹೇಳಿದರು.

‘ಬಾಬು ವಾಲಿ ನನ್ನನ್ನು ಬ್ಲ್ಯಾಕ್‌ಮೇಲರ್‌ ಎಂದು ಹೀಯಾಳಿಸಿರುವುದು ಖಂಡನೀಯ. ಬೀದರ್‌ನಲ್ಲಿ ಯಾರು ಎಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ. ನಾನು ವಿವರವಾಗಿ ಹೇಳುವ ಅಗತ್ಯವಿಲ್ಲ. ಬಾಬು ವಾಲಿಯ ಅನೇಕ ವ್ಯವಹಾರಗಳ ಮಾಹಿತಿ ಹಾಗೂ ದಾಖಲೆ ನನ್ನ ಬಳಿ ಇದೆ. 15 ದಿನಗಳ ನಂತರ ಸಮಗ್ರವಾದ ವರದಿ ಸಿದ್ಧ ಪಡಿಸಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸುವೆ’ ಎಂದು ತಿಳಿಸಿದರು.

‘ಬೆಂಗಳೂರಿಗೆ ತೆರಳಿ ಲೋಕಾಯುಕ್ತರು ಹಾಗೂ ಸಂಬಂಧಪಟ್ಟ ಇಲಾಖೆಗೆ ದಾಖಲೆ ಸಮೇತ ದೂರು ಸಲ್ಲಿಸುವೆ. ಅವರ ವಿರುದ್ಧ ಸಾರ್ವಜನಿಕ ಅಭಿಯಾನ ಆರಂಭಿಸುವೆ. ಬಾಬು ವಾಲಿಯಿಂದ ಅನ್ಯಾಯಕ್ಕೆ ಒಳಗಾದವರು ನನ್ನ ಮೊಬೈಲ್‌ 9448120345 ಗೆ ನೇರವಾಗಿ ಕರೆ ಮಾಡಬಹುದು. siddharamayyaswami9999@gmail.comಗೆ ಮೇಲ್‌ ಕಳಿಸಬಹುದಾಗಿದೆ’ ಎಂದು ಹೇಳಿದರು.

‘ಕೆಲವರು ನನ್ನನ್ನು ಸಾರ್ವಜನಿಕವಾಗಿ ಅವಮಾನಿಸಲು ಯತ್ನಿಸುತ್ತಿದ್ದಾರೆ. ಎಂತಹದ್ದೇ ಸವಾಲು ಹಾಕಿದರೂ ಅದನ್ನು ಎದುರಿಸುವ ದಮ್‌ ನನಗೆ ಇದೆ. ಯಾರದೋ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಕಾನೂನು ಸಲಹೆಗಾರ ಸಂಜಯ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT