ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ‘ಸಂಚಾರಿ ಯೋಗ ಗುರು’ ನಿರಂಜನ ಸ್ವಾಮೀಜಿ

ಜನ ಸಾಮಾನ್ಯರ ಆರೋಗ್ಯ ಕಾಪಾಡಲು ಅವಿರತ ಶ್ರಮ; ಋಷಿಕೇಶದಲ್ಲಿ ಹಿಮಾಲಯನ್‌ ಯೋಗ ಕಲಿಕೆ
Last Updated 20 ಜೂನ್ 2021, 2:33 IST
ಅಕ್ಷರ ಗಾತ್ರ

ಭಾಲ್ಕಿ: ಜನಸಾಮಾನ್ಯರು ಉತ್ತಮ ಆರೋಗ್ಯದಿಂದ ಬಾಳಬೇಕು ಎಂದು ವಿವಿಧ ಜಿಲ್ಲೆ, ಹಳ್ಳಿಗಳಿಗೆ ಸ್ವತಃ ತೆರಳಿ ಸುಮಾರು 11 ವರ್ಷಗಳಿಂದ ಉಚಿತವಾಗಿ ಯೋಗ ಹೇಳಿಕೊಡುತ್ತಿರುವವರು ಗದಗನ ನಿರಂಜನ ಸ್ವಾಮೀಜಿ. ಇವರು ‘ಸಂಚಾರಿ ಯೋಗ ಗುರು’ ಎಂದೇ ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

2003ರಿಂದ 6 ವರ್ಷಗಳ ಕಾಲ ಋಷಿಕೇಶದ ಹಿಮಾಲಯನ್‌ ಧ್ಯಾನ ಯೋಗ ಸ್ವಾಮಿರಾಮ ಆಶ್ರಮದಲ್ಲಿ ಯೋಗ ಕಲಿತಿದ್ದಾರೆ. ನಂತರ ಅಲ್ಲಿಯೇ ಮೂರು ವರ್ಷಗಳ ಕಾಲ ವಿದೇಶಿಗರಿಗೆ ಯೋಗ ಕಲಿಸಿದ್ದಾರೆ. ತದನಂತರ ದೆಹಲಿ ಸೇರಿದಂತೆ ರಾಜ್ಯದ ಗದಗ, ಕಲಬುರ್ಗಿ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನರಿಗೆ ಉಚಿತವಾಗಿ ಯೋಗ ಹೇಳಿಕೊಟ್ಟಿದ್ದಾರೆ.

‘ಜಿಲ್ಲೆಯ ಭಾಲ್ಕಿ, ಔರಾದ್‌, ಬಸವಕಲ್ಯಾಣ, ತೊಗಲೂರ, ಮುಚಳಂಬ, ತಳವಾಡ, ಕದಲಾಬಾದ್‌, ಆನಂದವಾಡಿ, ಧೂಪತಮಹಾಗಾಂವ, ನಿಡೇಬನ್‌ ಒಳಗೊಂಡಂತೆ ಸುಮಾರು 40 ಗ್ರಾಮಗಳಲ್ಲಿ ಸ್ವತಃ ತಮ್ಮದೇ ಖರ್ಚಿನಲ್ಲಿ ಚಾಪೆ, ಧ್ವನಿವರ್ಧಕ, ಸಂಗೀತ ಸಾಮಗ್ರಿಗಳು ತೆಗೆದುಕೊಂಡು ಹೋಗಿ ಕನಿಷ್ಠ ಹದಿನೈದು ದಿನಗಳ ಕಾಲ ಗ್ರಾಮದಲ್ಲಿಯೇ ಬಿಡಾರ ಹೂಡಿದ್ದಾರೆ. ನಸುಕಿನ ಜಾವ 5ರಿಂದ 6 ಗಂಟೆವರೆಗೆ ಸಂಗೀತದೊಂದಿಗೆ ಯೋಗ ಕಲಿಸಿದ್ದಾರೆ. ನಂತರ ಆಧ್ಯಾತ್ಮಿಕ ಪ್ರವಚನ ನೀಡಿ ಗ್ರಾಮಸ್ಥರಲ್ಲಿ ಆರೋಗ್ಯಪೂರ್ಣ ದೇಹದೊಂದಿಗೆ ಪ್ರಫುಲ್ಲ ಮನಸ್ಸನ್ನು ನಿರ್ಮಾಣ ಮಾಡಿದ್ದಾರೆ’ ಎಂದು ನಿರಂಜನ ಗುರುಗಳನ್ನು ಸಮೀಪದಿಂದ ಬಲ್ಲ ಮಹಾಲಿಂಗ ಸ್ವಾಮೀಜಿ ತಿಳಿಸುತ್ತಾರೆ.

‘ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದೇ ಯೋಗದ ಉದ್ದೇಶ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ. ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಜನರು ಪ್ರತಿದಿನ ತಪ್ಪದೇ ಪ್ರಾಣಾಯಾಮ, ಸೂರ್ಯ ನಮಸ್ಕಾರ, ವಜ್ರಾಸನ, ಕಪಾಲಭಾತಿ, ಅನುಲೋಮ, ವಿಲೋಮ ಸೇರಿದಂತೆ ವಿವಿಧ ಆಸನಗಳನ್ನು ಮಾಡಲೇಬೇಕು’ ಎಂದು ನಿರಂಜನ ಸ್ವಾಮೀಜಿ ಹೇಳುತ್ತಾರೆ.

ನಿರಂಜನ ಸ್ವಾಮೀಜಿ ಯಾರಿಂದಲೂ ಹಣ ಪಡೆಯುವವರಲ್ಲ. ಹದಿನೈದು ಅಥವಾ ತಿಂಗಳಿಗೊಮ್ಮೆ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಲುತ್ತಲೇ ಎಲ್ಲ ಜನರಿಗೆ ಯೋಗ, ಸಂಗೀತ, ಅಧ್ಯಾತ್ಮದ ಮಹತ್ವ ಸಾರುತ್ತಿದ್ದಾರೆ.

‘ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿರುವ ಇವರನ್ನು ರಾಜ್ಯದ ಅನೇಕ ಪ್ರಸಿದ್ಧ ಮಠಾಧೀಶರು ಅವರ ಮಠಗಳಲ್ಲಿ ಸ್ವಾಮೀಜಿ ಆಗಿ ಉಳಿದುಕೊಳ್ಳಿ, ಇಲ್ಲವೇ ಶಾಖಾ ಮಠಗಳಿಗೆ ಪೀಠಾಧಿಪತಿ ಆಗಿರಿ ಎಂದು ಕೇಳಿಕೊಂಡರೂ ಶ್ರೀಗಳು ಅದಕ್ಕೆ ಒಪ್ಪಿಲ್ಲ. ನಾನು ಕಲಿತ ವಿದ್ಯೆ ಜಗತ್ತಿನ ಜನರಿಗೆ ತಲುಪಿಸಬೇಕು ಎಂಬ ಮಹತ್ವಾಕಾಂಕ್ಷೆ ಗುರುಗಳದ್ದಾಗಿದೆ. ಗದಗನ ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಯ ಪ್ರೀತಿಗೆ ಪಾತ್ರರಾಗಿದ್ದ ಇವರು ಸದ್ಯ ಭಾಲ್ಕಿಯ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರ ಬಳಿ ಇದ್ದಾರೆ. ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಯೋಗ ಶಿಬಿರ ನಡೆಸುವ ಚಿಂತನೆ ಹೊಂದಿದ್ದಾರೆ’ ಎಂದು ಬಸವಲಿಂಗ ಸ್ವಾಮೀಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT