ಗುರುವಾರ , ಅಕ್ಟೋಬರ್ 17, 2019
28 °C

ಕನ್ನಡ ಭವನಕ್ಕೆ ಅನುದಾನ ಒದಗಿಸಿ

Published:
Updated:
Prajavani

ಬೀದರ್: ಜಿಲ್ಲಾ ಕೇಂದ್ರ ಬೀದರ್‌ನಲ್ಲಿ ಕನ್ನಡ ಭವನ ನಿರ್ಮಿಸಲು ₹ 6 ಕೋಟಿ ಅನುದಾನ ಒದಗಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.

ಬೀದರ್ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿದೆ. ವಿವಿಧ ಭಾಷೆಗಳ ಪ್ರಭಾವಗಳ ನಡುವೆಯೂ ಇಲ್ಲಿ ಕನ್ನಡ ಗಟ್ಟಿಯಾಗಿ ನಿಲೆಯೂರಿ ನಿಂತಿದೆ. ಜಿಲ್ಲೆ ಸಾಹಿತ್ಯಿಕ ಶ್ರೀಮಂತಿಕೆ ಹೊಂದಿದೆ. ಗಡಿ ಭಾಗದಲ್ಲಿ ಕನ್ನಡ ಭಾಷೆ ಬೆಳವಣಿಗೆ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸುಸಜ್ಜಿತ ಕನ್ನಡ ಭವನ ನಿರ್ಮಾಣ ತೀರಾ ಅಗತ್ಯವಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ನಗರದ ಚಿಕ್ಕಪೇಟೆ ಹತ್ತಿರ ಜಿಲ್ಲಾಡಳಿತವು ಕನ್ನಡ ಭವನಕ್ಕೆ 1 ಎಕರೆ ಜಮೀನು ಮಂಜೂರು ಮಾಡಿದೆ. ಜಮೀನು ಒದಗಿಸಿ ಈಗ ಒಂದು ವರ್ಷ ಸಹ ಕಳೆದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿ ಕನ್ನಡ ಭವನ ಕಟ್ಟಿ ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಿ, ಗಡಿಭಾಗದಲ್ಲಿ ಸದಾ ಕನ್ನಡದ ಕಲರವ ಮೂಡಿಸುವ ಧ್ಯೇಯ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭವನ ನಿರ್ಮಾಣ ಸಂಬಂಧ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಹಣ ಮಂಜೂರು ಮಾಡಿದರೆ ಕೆಲಸ ಪ್ರಾರಂಭಿಸಬಹುದು. ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸಲು ಪೂರಕವಾಗಿರುವ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವರು ತಮ್ಮ ಮನವಿಗೆ ಸ್ಪಂದಿಸಿದ್ದು, ಕನ್ನಡ ಭವನಕ್ಕೆ ಅನುದಾನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸೂರ್ಯಕಾಂತ ತಿಳಿಸಿದ್ದಾರೆ.

Post Comments (+)