ಶನಿವಾರ, ಸೆಪ್ಟೆಂಬರ್ 21, 2019
21 °C
ಗೋಕುಳದ ಯುವ ಕೃಷಿಕ ದಿಲೀಪಗಿರಿಯಿಂದ ಹೊಸ ಪ್ರಯೋಗ

ಕೈಹಿಡಿದ ಶ್ರೀಗಂಧದಲ್ಲಿನ ಮಿಶ್ರ ಬೆಳೆ

Published:
Updated:
Prajavani

ಬಸವಕಲ್ಯಾಣ: ತಾಲ್ಲೂಕಿನ ಗೋಕುಳದ ಯುವ ಕೃಷಿಕ ದಿಲೀಪಗಿರಿ ಗೋಸಾಯಿ 5 ಸಾವಿರ ಶ್ರೀಗಂಧದ ಗಿಡಗಳನ್ನು ಬೆಳೆಸಿದ್ದಾರಲ್ಲದೆ ಮಿಶ್ರ ಬೇಸಾಯ ಕೈಗೊಂಡು ಒಂದೇ ವರ್ಷದಲ್ಲಿ ಸಾಕಷ್ಟು ಲಾಭ ಪಡೆದುಕೊಂಡಿದ್ದಾರೆ. ಶ್ರೀಗಂಧದ ಸಸಿಗಳನ್ನು ನೆಡಲು ಆಗಿರುವ ಅರ್ಧದಷ್ಟು ಖರ್ಚು ಆಗಲೇ ಇವರ ಕೈಸೇರಿದೆ.

ಇವರ ಜಮೀನು ಅಷ್ಟೇನು ಫಲವತ್ತಾಗಿಲ್ಲ. ಮರಳು ಮಿಶ್ರಿತ ಕೆಂಪು ಮಣ್ಣು ಇದೆ. ಆದ್ದರಿಂದ ಯಾವುದೇ ಬೆಳೆ ಸರಿಯಾಗಿ ಬರುವುದಿಲ್ಲ. ಹೀಗಾಗಿ 3 ಎಕರೆ ಜಮೀನಿನಲ್ಲಿ ಮಾವು ಬೆಳೆದು ವರ್ಷಕ್ಕೆ ₹ 3 ಲಕ್ಷದ ಉತ್ಪನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದ 6 ಎಕರೆಯಲ್ಲಿಯೂ 14 ತಿಂಗಳ ಹಿಂದೆ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. ಹಾಗೆ ನೋಡಿದರೆ ಶ್ರೀಗಂಧ ತಕ್ಷಣಕ್ಕೆ ಲಾಭ ತಂದುಕೊಡುವುದಲ್ಲ. ಇದಕ್ಕಾಗಿ ಹತ್ತಾರು ವರ್ಷ ಕಾಯಬೇಕು. ಆದರೂ, ಈ ಗಿಡಗಳ ಮಧ್ಯೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಹೂಗಿಡಗಳನ್ನು ಹಾಗೂ ತರಕಾರಿ, ಧಾನ್ಯಗಳನ್ನು ಬೆಳೆದಿದ್ದಾರೆ.

ನೆರಳೆಯ 400 ಸಸಿಗಳನ್ನು ಹಾಗೂ ಮಾವಿನ 1500, ಪೇರಲ್ 800, ಹೆಬ್ಬೇವು 1400, ಲಿಂಬೆ 500, ತೆಂಗು 200, ನೆಲ್ಲಿಯ 50, ಬಾರೆಹಣ್ಣಿನ 50, ಬೇವು 80, ಸಿಲ್ವರ್ ಓಕ್ 200, ಕರಿಬೇವು 700, ರಕ್ತ ಚಂದನ 100, ಗುಲಾಬಿ ಹೂವು 50, ಝೇಂಡುಹೂವು 1500 ಸಸಿಗಳನ್ನು ನೆಟ್ಟಿದ್ದಾರೆ. ಇದಲ್ಲದೆ ನುಗ್ಗೆ, ಟೊಮೆಟೊ, ಪುದಿನಾ, ತೊಗರಿ, ಸಜ್ಜೆ ಕೂಡ ಬೆಳೆಸಿದ್ದಾರೆ.

`ತೊಗರಿ, ಸಜ್ಜೆ, ಕರಿಬೇವು ಹಾಗೂ ಹೂವಿನಿಂದ ಒಂದೇ ವರ್ಷದಲ್ಲಿ ಉತ್ಪನ್ನ ದೊರೆತಿದೆ. ಶ್ರೀಗಂಧದ ಸಸಿಗಳೊಂದಿಗೆ ಇತರೆ ಬೆಳೆಯ ಆರೈಕೆ ಸರಿಯಾಗಿ ಆಗಿದೆ. ಸಮಯಕ್ಕೆ ನೀರು ದೊರೆತಿದೆ. ತಿಪ್ಪೆ ಗೊಬ್ಬರ ಸಿಂಪಡಣೆ ಮಾಡಲಾಗಿತ್ತು. ಹೀಗಾಗಿ ಇವುಗಳ ಉತ್ಪನ್ನ ದೊರೆಯಿತು. ಮುಂದಿನ ವರ್ಷ ಮಾವು ಕೂಡ ಹಣ್ಣು ಕೊಡಲಿದೆ. ಪಾರಂಪರಿಕ ಕೃಷಿಗಿಂತ ಈ ಪದ್ಧತಿಯಿಂದ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು' ಎಂದು ರೈತ ದಿಲೀಪಗಿರಿ ಗೋಸಾಯಿ ತಿಳಿಸಿದ್ದಾರೆ.

`ಶ್ರೀಗಂಧ ಹತ್ತಾರು ವರ್ಷಗಳ ನಂತರ ಹೆಚ್ಚಿನ ಉತ್ಪನ್ನ ನೀಡುತ್ತದಾದರೂ ಅದರ ಚಿಕ್ಕ ಚಿಕ್ಕ ಟೊಂಗೆಗಳು, ಎಲೆ ಕೂಡ ಈಗಲೇ ಉಪಯೋಗಕ್ಕೆ ಬರುತ್ತಿವೆ. ಅವುಗಳನ್ನು ಹೋಮ, ಹವನಕ್ಕಾಗಿ ಹಾಗೂ ಇತರೆ ರಾಸಾಯನಿಕ ಉಪಯೋಗಕ್ಕಾಗಿ ಖರೀದಿಸಲಾಗುತ್ತಿದೆ. ಇನ್ನುಳಿದಂತೆ ಲಿಂಬೆ, ನುಗ್ಗೆ, ನೆಲ್ಲಿ, ಪೇರಲ್, ಬಾರೆಹಣ್ಣು ಇವು ಕೂಡ ಈ ವರ್ಷ ಉತ್ಪನ್ನ ನೀಡಲಿವೆ' ಎಂದಿದ್ದಾರೆ.

`ತಾಲ್ಲೂಕಿನಲ್ಲಿ ದಿಲೀಪಗಿರಿ ಅವರನ್ನು ಹೊರತುಪಡಿಸಿ ಯಾರೂ ಶ್ರೀಗಂಧ ಬೆಳೆದಿಲ್ಲ. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಕಚೇರಿಗೆ ಬಂದಾಗ ಅವರನ್ನು ಇವರ ತೋಟ ವೀಕ್ಷಿಸಲು ಕಳುಹಿಸುತ್ತಿದ್ದೇವೆ. ಹೀಗಾಗಿ ಅವರ ಹೊಲ ಮಾದರಿ ನರ್ಸರಿಯಾಗಿ ಪಾರ್ಪಟ್ಟಿದೆ. ನಾನು ಕೂಡ ಕೆಲ ಸಲ ಅಲ್ಲಿಗೆ ಹೋಗಿದ್ದು ಎಲ್ಲವನ್ನೂ ಪರಿಶೀಲಿಸಿದ್ದೇನೆ. ಹೊಸದನ್ನು ಸಾಧಿಸುವ ಸಲುವಾಗಿ ಅವರು ಸತತವಾಗಿ ಪರಿಶ್ರಮಪಟ್ಟು ದುಡಿಯುತ್ತಿದ್ದಾರೆ' ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸಂಗಮನಾಥ ಘಾಳೆ ಹೇಳಿದ್ದಾರೆ.

**
ಒಂದು ವರ್ಷದಲ್ಲಿ ಬರೀ ಹೂವು ಹಾಗೂ ತರಕಾರಿ ಮಾರಾಟದಿಂದ ರೂ. 80 ಸಾವಿರ ಆದಾಯ ಬಂದಿದೆ. ನಾಲ್ಕು ಕ್ವಿಂಟಲ್ ತೊಗರಿ ಉತ್ಪನ್ನ ದೊರೆತಿದೆ.
-ದಿಲೀಪಗಿರಿ ಗೋಸಾಯಿ, ರೈತ

Post Comments (+)