ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ತತ್ವದ ಬೆಳಕಲ್ಲಿ ಆಂದೋಲನ’

ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂದರ್ಶನ
Last Updated 30 ಜುಲೈ 2019, 19:45 IST
ಅಕ್ಷರ ಗಾತ್ರ

ಸಹಮತ ವೇದಿಕೆ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಚಳವಳಿ ಆರಂಭವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆ.1ರಂದು ಇದಕ್ಕೆ ಚಾಲನೆ ಸಿಗಲಿದೆ. ಒಂದು ತಿಂಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಆಂದೋಲನ ನಡೆಯಲಿದೆ. ಬಸವಾದಿ ಶರಣರ ಆಶಯ ಸಾಕಾರಗೊಳಿಸಲು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಆಂದೋಲನದ ಸಾರಥ್ಯ ವಹಿಸಿದ್ದಾರೆ. ಸ್ವಾಮೀಜಿಯೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.

* ‘ಮತ್ತೆ ಕಲ್ಯಾಣ’ ಆಂದೋಲನದ ಸ್ವರೂಪ ಪಡೆದುಕೊಳ್ಳುತ್ತಿದೆ. ಇದನ್ನು ಸಾಣೇಹಳ್ಳಿ ಮಠ ಕೈಗೆತ್ತಿಕೊಂಡಿದ್ದು ಏಕೆ?
ಮಠ ಹಿಂದಿನಿಂದಲೂ ಇಂಥ ಆಂದೋಲನ ಹುಟ್ಟುಹಾಕಿದೆ. ಸರ್ವಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ, ತರಳಬಾಳು ಹುಣ್ಣಿಮೆ, ವಚನ ಪರೀಕ್ಷೆಗಳು ‘ಮತ್ತೆ ಕಲ್ಯಾಣ’ಕ್ಕೆ ಪೂರಕವಾಗಿ ನಡೆದಿವೆ. ನಾಟಕೋತ್ಸವನ್ನು ಇದೇ ಆಶಯದೊಂದಿಗೆ ಆಯೋಜಿಸಲಾಗಿತ್ತು. ಆದರೆ, ಇವುಗಳಿಗೆ ಸೀಮಿತವಾದ ಎಲ್ಲೆ ಇತ್ತು. ಎಲ್ಲ ವರ್ಗದ ಪ್ರತಿನಿಧಿಗಳನ್ನು ಸೇರಿಸಿ ‘ಸಹಮತ ವೇದಿಕೆ’ ಮೂಲಕ ಈ ಆಂದೋಲನ ಆರಂಭವಾಗಿದೆ. ಇದು ಹೂ ಎತ್ತಿದಷ್ಟು ಸುಲಭದ ಕಾರ್ಯವಲ್ಲ ಎಂಬುದು ಗೊತ್ತಿದೆ.

* ‘ಮತ್ತೆ ಕಲ್ಯಾಣ’ ಮೂರ್ತರೂಪ ಪಡೆದಿದ್ದು ಹೇಗೆ?
ಆರು ತಿಂಗಳ ಹಿಂದೆ ಬೀದರ್‌ ಜಿಲ್ಲೆಗೆ ಭೇಟಿ ನೀಡಿದ್ದೆವು. ಭಾಲ್ಕಿಯ ಬಸವಲಿಂಗಪಟ್ಟದ ದೇವರು ಮಹಾರಾಷ್ಟ್ರದಲ್ಲಿ ತತ್ವ ಪ್ರಚಾರ ಮಾಡುತ್ತಿದ್ದರು. ನಮ್ಮ ರಾಜ್ಯದ ಜನರಿಗೆ ಶರಣರ ವಿಚಾರ ಮುಟ್ಟಿಸುವ ಪ್ರಯತ್ನ ಏಕೆ ಮಾಡಬಾರದು ಎಂಬ ಆಲೋಚನೆ ಮೊಳೆಯಿತು. ಸಮಾನಮನಸ್ಕರೊಂದಿಗೆ ಚರ್ಚಿಸಿದ ಪರಿಣಾಮವಾಗಿ ‘ಸಹಮತ ವೇದಿಕೆ’ ಹಾಗೂ ‘ಮತ್ತೆ ಕಲ್ಯಾಣ’ ಹುಟ್ಟಿಕೊಂಡವು.

* 12ನೇ ಶತಮಾನದ ವಚನ ಚಳವಳಿಯ ಆಶಯ ಇಟ್ಟುಕೊಂಡು ರೂಪಿಸಿದ ಆಂದೋಲನ ಇಂದಿನ ಕಾಲಘಟ್ಟಕ್ಕೆ ಹೇಗೆ ಪ್ರಸ್ತುತವಾಗುತ್ತದೆ?
ಸಮಾಜದಲ್ಲಿ ಇಂದಿಗೂ ಹಲವು ರೀತಿಯ ಅನಿಷ್ಟಗಳಿವೆ. ಜಾತಿಯ ವಿಕಾರ ರೂಪ ಎಲ್ಲೆಡೆ ವಿಸ್ತರಿಸಿಕೊಂಡಿದೆ. ಅನೀತಿ ಅತಿಯಾಗಿದೆ. ಸಮಾಜಕ್ಕೆ ದಿಕ್ಕು ತೋರಿಸಬೇಕಾದ ಮಠ–ಪೀಠಗಳೇ ದಿಕ್ಕುತಪ್ಪಿವೆ. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕಿದೆ.

ಲಿಂಗ ತಾರತಮ್ಯ ಇನ್ನೂ ಜೀವಂತವಾಗಿದೆ. ಬಾಹ್ಯ ರೂಪದ ಆಧಾರದ ಮೇಲೆ ಗಂಡು–ಹೆಣ್ಣು ಗುರುತಿಸಬಹುದು. ಆದರೆ, ಅವರೊಳಗಿನ ಚೈತನ್ಯಕ್ಕೆ ಲಿಂಗವಿಲ್ಲ. ಸಮಾನತೆ ನೆಲೆಗೊಳ್ಳುವ ಪ್ರಯತ್ನ ಶರಣರ ಬೆಳಕಿನಲ್ಲಿ ನಡೆಯಬೇಕಿದೆ.

* ಜಾತಿ ವ್ಯವಸ್ಥೆ ನಿರ್ಮೂಲನೆ, ಅಸಮಾನತೆ ತೊಡೆದು ಹಾಕುವುದು ‘ಮತ್ತೆ ಕಲ್ಯಾಣ’ಕ್ಕೆ ಸಾಧ್ಯವಾಗುತ್ತದೆಯೇ?
ಒಳ್ಳೆಯ ಬೀಜ ಬಿತ್ತುತ್ತಿದ್ದೇವೆ. ಇದಕ್ಕೆ ಬೇಕಾದ ನೆಲ, ಜಲ, ವಾತಾವರಣ ಸಿಕ್ಕಾಗ ಬೀಜ ಮೊಳಕೆಯೊಡೆಯುತ್ತದೆ. ಪ್ರಪಂಚ ಬದಲಾಗಿಬಿಡುತ್ತದೆ ಎಂಬ ಭ್ರಮೆಯೂ ನಮಗೆ ಇಲ್ಲ. ಒಳ್ಳೆಯ ಕೆಲಸವನ್ನು ಮಾಡುತ್ತಾ ಹೋದರೆ ಕೆಲವರಾದರೂ ಬದಲಾಗುತ್ತಾರೆ.

* ಆಂದೋಲನದ ಸ್ವರೂಪ ಹೇಗಿರುತ್ತದೆ. ಎಡಪಂಥೀಯರೆ ಹೆಚ್ಚಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ?
ಆಹ್ವಾನ ಪತ್ರಿಕೆ ನೋಡಿದ ತಕ್ಷಣ ‘ಎಡಪಂಥೀಯರೆ ತುಂಬಿದ್ದಾರಲ್ಲಾ’ ಎಂಬ ಪ್ರಶ್ನೆಯನ್ನು ಅನೇಕರು ನಮ್ಮ ಮುಂದಿಟ್ಟಿದ್ದಾರೆ. ಅವರು ಎಡಪಂಥೀಯರಾಗಿ ಅಥವಾ ಬಲಪಂಥೀಯರಾಗಿ ನಮಗೆ ಕಂಡಿಲ್ಲ. ಮಾನವೀಯ ಅಂತಃಕರಣ ಇಟ್ಟುಕೊಂಡಿರುವವರು.

‘ಮತ್ತೆ ಕಲ್ಯಾಣ’ ಪ್ರಯೋಗ ಮಾತ್ರ. ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇರೆಗೆ ಚಳವಳಿ ಆಗುವುದು, ಬಿಡುವುದು ಅವಲಂಬಿತವಾಗಿದೆ. 30 ಜಿಲ್ಲೆಗಳಿಗೂ ಭೇಟಿ ನೀಡಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ ಸಂವಾದ, ಉಪನ್ಯಾಸ, ಸಾಮರಸ್ಯ ನಡಿಗೆ ಹಾಗೂ ನಾಟಕ ಪ್ರದರ್ಶನ ಇರುತ್ತದೆ.

* ‘ಮತ್ತೆ ಕಲ್ಯಾಣ’ ಶ್ರಾವಣ ಮಾಸಕ್ಕೆ ಮಾತ್ರ ಸೀಮಿತವಾಗುತ್ತದೆಯೇ? ಈ ಆಂದೋಲನ ಎಷ್ಟು ಕಾಲ ನಡೆಯಲಿದೆ?
‘ಮತ್ತೆ ಕಲ್ಯಾಣ’ಕ್ಕೆ ಶ್ರಾವಣ ಸಂಜೆ ಎಂಬ ಮಠದ ಕಾರ್ಯಕ್ರಮವೇ ಸ್ಫೂರ್ತಿ. ಆದರೆ, ಇದನ್ನು ಶ್ರಾವಣದಲ್ಲೇ ಮಾಡಬೇಕು ಎಂದೇನೂ ಇಲ್ಲ. ಶರಣತತ್ವ ಹಾಗೂ ಸಮಾಜಮುಖಿ ಚಿಂತನೆಯಲ್ಲಿ ಆಸಕ್ತಿ ಇರುವ ಯುವ ಸಮೂಹಕ್ಕೆ ಕಾರ್ಯಾಗಾರ ನಡೆಸುತ್ತೇವೆ. ಪರಿಸರ ಪ್ರಜ್ಞೆ, ವ್ಯಕ್ತಿಗತ ಬದುಕಿನ ಮಹತ್ವ, ಕೃಷಿ ಸುಧಾರಣೆ, ಕಾಯಕ ಶ್ರದ್ಧೆ ಬಗ್ಗೆ ತರಬೇತಿ ನೀಡಲಾಗುತ್ತದೆ.

* ಇದು ಲಿಂಗಾಯತ ಧರ್ಮ ಪ್ರಚಾರಕ್ಕೆ ರೂಪಿಸಿದ ಅಭಿಯಾನ ಎಂಬ ಟೀಕೆ ವ್ಯಕ್ತವಾಗುತ್ತಿದೆಯಲ್ಲಾ?
ನಾಲಿಗೆ ತೃಪ್ತಿಗಾಗಿ ಕೆಲವರು ಏನನ್ನೋ ಮಾತನಾಡುತ್ತಾರೆ. ಆದರೆ, ನಮಗೆ ಉದ್ದೇಶ ಸ್ಪಷ್ಟವಾಗಿದೆ. ಲಿಂಗಾಯತ–ವೀರಶೈವ ಜಗಳಕ್ಕೆ ಹೋಗುತ್ತಿಲ್ಲ. ಬಸವಾದಿ ಶಿವಶರಣರ ತತ್ವ ಪ್ರತಿಪಾದನೆಯಷ್ಟೇ ನಮ್ಮ ಗುರಿ.

* ಈ ಹೊತ್ತಿನ ರಾಜಕೀಯ ಸ್ಥಿತ್ಯಂತರದಲ್ಲಿ ಈ ಆಂದೋಲನವನ್ನು ಹೇಗೆ ಅನ್ವಯಿಸುವಿರಿ?
ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಈ ಆಂದೋಲನದ ಕೇಂದ್ರಬಿಂದುವಲ್ಲ. ಯಾವ ರಾಜಕಾರಣಿಗಳನ್ನೂ ಇದಕ್ಕೆ ಆಹ್ವಾನಿಸಿಲ್ಲ. ಬರುವವರನ್ನು ನಾವು ದೂರ ಇಡುವುದಿಲ್ಲ. ಈ ಚಿಂತನೆ ಅವರ ಮನಸ್ಸಿಗೆ ತಟ್ಟಿದರೆ ಹೆಚ್ಚು ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT