ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಶೇಂಗಾ ಹೋಳಿಗೆ ಸವಿದು, ಮನೆಮನೆಗೆ ಎಳ್ಳು-ಬೆಲ್ಲ ಬೀರಿದರು
Last Updated 15 ಜನವರಿ 2021, 3:55 IST
ಅಕ್ಷರ ಗಾತ್ರ

ಬೀದರ್: 2020ನೇ ಸಾಲಿನ ಸಂಭ್ರಮ ಕಸಿದ ಕೊರೊನಾ ಪ್ರಭಾವ ಕಡಿಮೆಯಾದ ಕಾರಣ ಜಿಲ್ಲೆಯ ಜನ ಹೊಸ ನಿರೀಕ್ಷೆಗಳೊಂದಿಗೆ 2021ನೇ ಸಾಲಿನ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಿದರು.

ಮಂಗಳವಾರ ಹಾಗೂ ಬುಧವಾರ ಎಳ್ಳ ಅಮಾವಾಸ್ಯೆ ಆಚರಿಸಿದ್ದ ಕುಟುಂಬದ ಸದಸ್ಯರು ಗುರುವಾರ ಮಕರ ಸಂಕ್ರಾಂತಿಯ ಸಂಭ್ರಮದಲ್ಲಿ ಭಾಗಿಯಾದರು. ಮಹಿಳೆಯರು ಮನೆಯ ಅಂಗಳದಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಮೃದ್ಧಿಯ ಸಂಕೇತವಾದ ಹಬ್ಬವನ್ನು ಸ್ವಾಗತಿಸಿ ಬರಮಾಡಿಕೊಂಡರು.

ಬೆಳಿಗ್ಗೆ ಮನೆ ಮಂದಿಯೆಲ್ಲ ಮೈಗೆ ಎಳ್ಳು ಪುಡಿ ಹಚ್ಚಿಕೊಂಡು ಸ್ನಾನ ಮಾಡಿದರು. ಎಳ್ಳು, ಬೆಲ್ಲ, ಬಾರೆಕಾಯಿ, ಕ್ಯಾರೆಕಾಯಿ, ಕಬ್ಬು ಮೆಲ್ಲಿ ಬಾಯಿ ಸಿಹಿ ಮಾಡಿಕೊಂಡರು. ಊಟದಲ್ಲಿ ಶೇಂಗಾ ಹೋಳಿಗೆ, ಅನ್ನ, ಸಾಂಬಾರು ಹಾಗೂ ಇತರ ಖಾದ್ಯಗಳನ್ನು ಸವಿದರು.

ಮಕ್ಕಳು ಶುಭ್ರ ಬಟ್ಟೆ ಧರಿಸಿ ಸಂಜೆ ಮನೆಮನೆಗೆ ಎಳ್ಳು-ಬೆಲ್ಲ ಬೀರಿ ಖುಷಿ ಹಂಚಿಕೊಂಡರು. ಕುಟುಂಬದ ಸದಸ್ಯರು, ಸ್ನೇಹಿತರು ಪರಸ್ಪರ ಎಳ್ಳು-ಬೆಲ್ಲ ತಿನ್ನಿಸಿ ಹಬ್ಬದ ಶುಭ ಕೋರಿದರು.

ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆಗೆ ವರ್ಷವಿಡೀ ಹೆಗಲು ಕೊಡುವ ಎತ್ತುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ ಕಿಚ್ಚು ಹಾಯಿಸಿದರು.

ಮಕ್ಕಳು ಗಾಳಿಪಟ ಹಾರಿಸಿ ಆನಂದಿಸಿದರು. ಆನೇಕರು ಮಂದಿರಗಳಿಗೆ ತೆರಳಿ ಸುಖಃ, ಶಾಂತಿ, ಸಮೃದ್ಧಿ ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT