ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಸಂಕ್ರಾಂತಿ ಮೆರುಗು ಹೆಚ್ಚಿಸುವ ಗಾಳಿಪಟದ ಸಂಭ್ರಮ

ಹೈದರಾಬಾದ್, ಮುಂಬೈ ನಗರಗಳ ಬಣ್ಣ ಬಣ್ಣದ ಆಕರ್ಷಕ ಗಾಳಿಪಟ
Last Updated 13 ಜನವರಿ 2019, 19:45 IST
ಅಕ್ಷರ ಗಾತ್ರ

ಚಿಟಗುಪ್ಪ: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಡಗರ ಸಂಭ್ರಮ. ಹುಮನಾಬಾದ್ ಪಟ್ಟಣದಲ್ಲಿ ಎಳ್ಳು ಬೆಲ್ಲ ವಿನಿಮಯದ ಜೊತೆಗೆ ಮನೆ ಮನೆಯ ಛಾವಣಿಯ ಮೇಲೆ ಮಕ್ಕಳಿಂದ ವೃದ್ಧರ ವರೆಗೂ ಕೈಯಲ್ಲಿ ಬಣ್ಣ ಬಣ್ಣದ ಗಾಳಿಪಟ. ಗಾಳಿ ತುಸು ಜೋರಾದರೆ ಸಾಕು ಕೇಕೆ ಹಾಕುವ ಅವರ ಉತ್ಸಾಹ. ಪಟ ಮುಗಿಲಿಗೆ ಏರಿದಂತೆ ಮಕ್ಕಳ ಉತ್ಸಾಹವೂ ಮೇರೆ ಮೀರುವುದು ಕಂಡುಬರುತ್ತದೆ.

ವ್ಯಾಪಾರಿಗಳು, ಗಣ್ಯರು, ರಾಜಕಾರಣಿಗಳು ಹೀಗೆ ಎಲ್ಲರೂ ಬಯಲು ಮೈದಾನಗಳಲ್ಲಿ, ಮನೆ ಛಾವಣಿಗಳ ಮೇಲೆ ದೊಡ್ಡ ಶಾಮಿಯಾನ್, ಧ್ವನಿ ವರ್ಧಕಗಳನ್ನು ಹಾಕಿಕೊಂಡು ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ.

ಜ.14 ರಿಂದ 15 ರ ವರೆಗೂ ಎರಡು ದಿನ ಗಾಳಿ ಪಟದ ಸಂಭ್ರಮಾಚರಣೆ ನಡೆಯುತ್ತದೆ. ಗಾಳಿ ಪಟ ಹಾರಿಸುವ ಸ್ಥಳಗಳಿಗೆ ಸ್ನೇಹಿತರು, ಅತಿಥಿಗಳು ಬಂದಲ್ಲಿ ಮಿರ್ಚಿ, ಸೂಸ್ಲಾ, ಉಪ್ಪಿಟ್ಟು, ಗುಲಾಬ್ ಜಾಮೂನು ಹೀಗೆ ಬಗೆ ಬಗೆಯ ತಿನಿಸನ್ನು ಕೊಡಲಾಗುತ್ತದೆ.

ಗಾಳಿಪಟ ವ್ಯಾಪಾರಿಗಳು ಹೈದರಾಬಾದ್, ಮುಂಬೈ ನಗರಗಳಿಂದ ಬಣ್ಣ ಬಣ್ಣದ ಆಕರ್ಷಕ ಗಾಳಿಪಟಗಳನ್ನು ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ.

ಆಂಖೇದಾರ್, ಟೋಪಿದಾರ್, ಪಟೇದಾರ್, ಧೂಮೇದಾರ್, ಚಾಕೆದಾರ್, ತಿರಂಗಾ, ಮೋದಿ, ನೋಟ್ ಬಂದಿ ಹೀಗೆ ವಿವಿಧ ಬಗೆಯ ಗಾಳಿಪಟಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

‘ಹತ್ತಿಯ ದಾರದ ಸ್ಥಾನದಲ್ಲಿ ಪ್ಲಾಸ್ಟಿಕ್ ದಾರ ಆಕ್ರಮಿಸಿದ್ದು, ಪ್ಲಾಸ್ಟಿಕ್‌ ದಾರಕ್ಕೂ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ಸಂಗಮೇಶ್ ಜಾಜಿ, ರಾಜು ಶೀಲವಂತ, ಉದಯಕುಮಾರ ಅಗಡಿ, ಸಿದ್ದಣ್ಣ ಚಕಪಳ್ಳಿ, ಕರೆಪ್ಪ ಪಾಟೀಲ ತಿಳಿಸುತ್ತಾರೆ.

ಎರಡು ದಿನ ಪಟ್ಟಣದೆಲ್ಲೆಡೆ ಗಾಳಿಪಟಗಳು ಗರಿ ಬಿಚ್ಚಿದ ಹಕ್ಕಿಯಂತೆ ಆಕಾಶದಲ್ಲಿ ಹಾರಾಡುವುದು ನೋಡುವುದೇ ಸಂಭ್ರಮ. ಹಿರಿಯರು ಮಕ್ಕಳ ಜೊತೆಗೆ ಗಾಳಿ ಪಟ ಹಾರಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳು ಇನ್ನೂ ಹೆಚ್ಚು ಸಂಭ್ರಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT