ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಉಪ ಚುನಾವಣೆ: ಸರಾಫ್ ಬಜಾರ್, ಅಡತ್ ಬಜಾರ್ ಬಂದ್

ಸ್ಥಳೀಯರಿಗೆ ಸಿಗದ ಬಿಜೆಪಿ ಟಿಕೆಟ್
Last Updated 29 ಮಾರ್ಚ್ 2021, 2:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ಈ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಸ್ಥಳೀಯರಿಗೆ ನೀಡದಿರುವುದನ್ನು ಪ್ರತಿಭಟಿಸಿ ಬಂದ್ ಆಚರಿಸಲು ಸ್ವಾಭಿಮಾನಿ ಬಳಗ ಕರೆ ನೀಡಿದ್ದರಿಂದ ಭಾನುವಾರ ಸರಾಫ್ ಬಜಾರ್, ಅಡತ್ ಬಜಾರ್‌ಗಳಲ್ಲಿ ಇಡೀ ದಿನ ಅಂಗಡಿಗಳನ್ನು ಬಂದ್ ಇಡಲಾಗಿತ್ತು.

ಸ್ವಾಭಿಮಾನಿ ಬಳಗದ ಯುವಕರು ಮುಖ್ಯರಸ್ತೆಯ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಸ್ಥಳೀಯರು 16 ಆಕಾಂಕ್ಷಿಗಳಿದ್ದರೂ ಅನ್ಯ ಜಿಲ್ಲೆಯವರಿಗೆ ಟಿಕೆಟ್ ನೀಡಿ ಅನ್ಯಾಯ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರು ಸ್ಥಳೀಯರಿಗೆ ಮಾತ್ರ ಚುನಾವಣಾ ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿ ಮೋಸ ಮಾಡಿದ್ದಾರೆ’ ಎಂದು ಸ್ವಾಭಿಮಾನಿ ಬಳಗದ ಸದಸ್ಯರು ಆರೋಪಿಸಿದರು.

‘ನಾಮಪತ್ರ ಸಲ್ಲಿಕೆಗೆ ಮಾರ್ಚ್ 30ರ ವರೆಗೆ ಕಾಲಾವಕಾಶ ಇದೆ. ಆದ್ದರಿಂದ ಇನ್ನು ಮುಂದಾದರೂ ಅಭ್ಯರ್ಥಿ ಬದಲಾವಣೆ ಮಾಡಬೇಕು’ ಎಂದು ಯುವಕರು ಒತ್ತಾಯಿಸಿದರು.

‘ಒಂದು ವೇಳೆ ಬೇಡಿಕೆಗೆ ಒಪ್ಪದಿದ್ದರೆ ಸ್ಥಳೀಯರನ್ನು ಕಣಕ್ಕೆ ಇಳಿಸಿ ಅವರನ್ನು ಬೆಂಬಲಿಸಲಾಗುತ್ತದೆ. ನಾವು ಬಿಜೆಪಿ ಕಾರ್ಯಕರ್ತರಾಗಿದ್ದರೂ ಈ ಪಕ್ಷಕ್ಕೆ ಮತದಾನ ಮಾಡುವುದಿಲ್ಲ’ ಎಂದು ಎಚ್ಚರಿಸಲಾಯಿತು.

ಪ್ರಮುಖರಾದ ವಿಜಯಕುಮಾರ ಪಂಚಾಳ, ಚನ್ನಪ್ಪ ರಾಜಾಪುರೆ, ನೀಲೇಶ ಖೂಬಾ, ಶಿವಕುಮಾರ ಬಿರಾದಾರ, ಬಸವರಾಜ ಪಾಲ್ಗೊಂಡಿದ್ದರು.

ಆಕಾಂಕ್ಷಿಗಳ ಭಾವಚಿತ್ರ ಪ್ರದರ್ಶನ

ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಟಿಕೆಟ್‌ನ ಸ್ಥಳೀಯ ಆಕಾಂಕ್ಷಿಗಳಾದ ಸಂಜಯ ಪಟವಾರಿ, ಮಲ್ಲಿಕಾರ್ಜುನ ಖೂಬಾ, ಗುಂಡುರೆಡ್ಡಿ, ಸೂರ್ಯಕಾಂತ ನಾಗಮಾರಪಳ್ಳಿ, ಉಮೇಶ ಬಿರಬಿಟ್ಟೆ, ಪ್ರದೀಪ ವಾತಡೆ, ಪದ್ಮಾಕರ ಪಾಟೀಲ, ಲತಾ ಹಾರಕೂಡೆ, ಅನಿಲ ಭೂಸಾರೆ, ಶಾಲಿನಿ ವಾಡೇಕರ್, ಸುಧೀರ ಕಾಡಾದಿ, ವಿಜಯಕುಮಾರ ಮಂಠಾಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ರವಿ ಚಂದನಕೇರೆ, ಅರವಿಂದ ಮುತ್ತೆ ಅವರ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಿ ಪ್ರದರ್ಶಿಸಲಾಯಿತು. ‘ಬಿಜೆಪಿ ಟಿಕೆಟ್ ಸ್ಥಳೀಯರಿಗೆ ಇಲ್ಲ ಅಂದರೆ, ಬಸವಕಲ್ಯಾಣ ನಿಮ್ಮ ಜತೆ ಇಲ್ಲ. ಆದ್ದರಿಂದ ತಪ್ಪು ಸರಿಪಡಿಸಿ’ ಎಂದೂ ಬರೆಯಲಾಗಿತ್ತು.

‘ಖೂಬಾ ಸಭೆಯಲ್ಲಿ ಪಾಲ್ಗೊಂಡರೆ ಕ್ರಮ’

‘ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾರ್ಚ್ 30ರಂದು ಉಪಚುನಾವಣೆ ಸಂಬಂಧ ಆಯೋಜಿಸಿರುವ ಸಭೆಗೂ ಬಿಜೆಪಿಗೂ ಸಂಬಂಧವಿಲ್ಲ. ಅವರ ಯಾವುದೇ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

‘ಮಲ್ಲಿಕಾರ್ಜುನ ಖೂಬಾ ಅವರು ವೈಯಕ್ತಿಕ ಹಿತಾಸಕ್ತಿಯಿಂದ ಸಮಾಜದಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಕಾರಣ ಅವರ ಸಭೆಗಳಲ್ಲಿ ಭಾಗವಹಿಸದೆ ಅವುಗಳನ್ನು ವಿಫಲಗೊಳಿಸಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT