ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರ ಸ್ಮಾರಕ ಪೂರ್ಣಕ್ಕಾಗಿ ಸತ್ಯಾಗ್ರಹ

ಗೋರಟಾ(ಬಿ) ಸ್ಮಾರಕ; 7 ವರ್ಷಗಳಿಂದ ವಿಳಂಬ
Last Updated 8 ಮಾರ್ಚ್ 2021, 5:16 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿಗೆ ಸಮೀಪದ ಹುಲಸೂರ ತಾಲ್ಲೂಕಿನ ಗೋರಟಾ(ಬಿ) ದಲ್ಲಿನ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿನ ಹುತಾತ್ಮರ ಸ್ಮಾರಕದ ಕಾಮಗಾರಿ ಪೂರ್ಣಕ್ಕೆ ಆಗ್ರಹಿಸಿ ಬಸವಪರ ಸಂಘಟನೆಗಳಿಂದ ಭಾನುವಾರ ನಗರದ ಬಿಜೆಪಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.

ತ್ರಿಪುರಾಂತ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಭಾವಚಿತ್ರದ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿ, ‘ಈ ಭಾಗದ ಸ್ವಾತಂತ್ರ್ಯಕ್ಕಾಗಿ ಗೋರಟಾದ ಅನೇಕರು ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ಸ್ಮರಣಾರ್ಥ ನಿರ್ಮಿಸುತ್ತಿರುವ ಸ್ಮಾರಕದ ಕೆಲಸ ಶೀಘ್ರ ಪೂರ್ಣಗೊಳ್ಳದಿದ್ದರೆ ನೂರಾರು ಮಠಾಧೀಶರ ಜತೆ ಸತ್ಯಾಗ್ರಹ ಕೈಗೊಳ್ಳಲು ಸಿದ್ಧನಿದ್ದೇನೆ’ ಎಂದರು.

ಬಸವಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಿವಕುಮಾರ ಬಿರಾದಾರ ಮಾತನಾಡಿ, ‘ಗೋರಟಾ(ಬಿ)ದಲ್ಲಿ ನಡೆದ ವಿಮೋಚನಾ ಚಳವಳಿಗಾರರ ಹತ್ಯೆಯ ಘಟನೆ ದಕ್ಷಿಣ ಭಾರತದ ಜಲಿಯನವಾಲಾ ಬಾಗ್ ಹತ್ಯಾಕಾಂಡ ಎಂದು ಇತಿಹಾಸದಲ್ಲಿ ನಮೂದಾಗಿದೆ. 7 ವರ್ಷಗಳ ಹಿಂದೆ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಕೆಲಸ ಅರ್ಧಕ್ಕೆ ನಿಂತಿದೆ’ ಎಂದರು.

‘ಭೂಮಿಪೂಜೆ ನಡೆದ ನಂತರ ವರ್ಷದಲ್ಲೇ ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ ನೆರವೇರಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ, ಧ್ವಜ ಸ್ತಂಭ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ಕಟ್ಟೆ ನಿರ್ಮಿಸಲಾಗಿದೆ. ಪ್ರತಿಮೆ ಪ್ರತಿಷ್ಠಾಪಿಸಿಲ್ಲ. ಆವರಣಗೋಡೆ, ಉದ್ಯಾನ ನಿರ್ಮಾಣ ಒಳಗೊಂಡು ಬಹಳಷ್ಟು ಕೆಲಸ ಇನ್ನು ಬಾಕಿಯಿದೆ’ ಎಂದು ದೂರಿದರು.

ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕ ಸುಭಾಷ ಹೊಳಕುಂದೆ, ನಗರಸಭೆ ಮಾಜಿ ಸದಸ್ಯ ರವಿ ಕೊಳಕೂರ, ಪ್ರಮುಖರಾದ ಮಹೇಶ ಸುಂಟನೂರೆ, ಬಸವರಾಜ ಪಾಟೀಲ ಗೋರಟಾ, ಸಂಜೀವ ಮೆಟಗೆ, ವಿವೇಕ ಚಳಕಾಪುರೆ, ಸಂತೋಷ ಸಣ್ಣೂರೆ, ಶಿವಕುಮಾರ ಕನಕಟ್ಟೆ, ನಾಗರಾಜ ಮಂಗಾ, ನೀಲೇಶ ಖೂಬಾ, ವೀರೇಶ ಬೋರಗೆ, ಸಾಗರ ಶಾಶೆಟ್ಟೆ, ಪ್ರೇಮಕುಮಾರ, ಶಿವು ಆಗ್ರೆ, ಪ್ರವೀಣ ಮಹಾಜನ, ಸಿದ್ದು ಹಲಶೆಟ್ಟೆ, ಅನಿಲ ಸಕ್ಕರಬಾವಿ, ಅಜೇಯಸ್ವಾಮಿ, ಬಸವರಾಜ ಮುರುಡ, ಮಹೇಶ ಅಂಬುಲಗೆ, ಚೆನ್ನವೀರಸ್ವಾಮಿ, ಸಂಗ ಮೇಶ ಸಜ್ಜನಶೆಟ್ಟಿ ಪಾಲ್ಗೊಂಡಿದ್ದರು.

ಉಪ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಕೆ

ಬಿಜೆಪಿ ಕಾರ್ಯಕರತರ ಸಮಾವೇಶಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ರಾಜ್ಯ ಘಟಕದ ನಳಿನ್‌ಕುಮಾರ ಕಟೀಲ್‌ ಅವರ ಮೆರವಣಿಗೆ ಧರಣಿ ಕುಳಿತ ಸ್ಥಳದಲ್ಲಿಂದ ಹಾದುಬಂತು. ಈ ಸಂದರ್ಭದಲ್ಲಿ ಧರಣಿನಿರತರು ಅವರಿಗೆ ಮನವಿಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT