ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದಲ್ಲಿ ಕೃಷಿ ಅಭಿವೃದ್ಧಿಗೆ ಆದ್ಯತೆ’

ನಾನು ಮತ ಹಾಕಿದವರಿಗೆ ಮಾತ್ರ ಪ್ರತಿನಿಧಿಯಲ್ಲ, ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳ ಜಾರಿ: ರೂಪಾಲಿ
Last Updated 30 ಮೇ 2018, 12:41 IST
ಅಕ್ಷರ ಗಾತ್ರ

ಕಾರವಾರ:  ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೊಂದಿರುವ ಗುರಿಗಳು, ಕನಸುಗಳು ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ನಿಮ್ಮ ಅಧಿಕಾರಾವಧಿಯಲ್ಲಿ ಆದ್ಯತಾ ವಲಯವೆಂದು ಯಾವುದನ್ನು ಗುರುತಿಸಿದ್ದೀರಿ?

ಕೃಷಿ ಕ್ಷೇತ್ರ ನನ್ನ ಆದ್ಯತಾ ವಲಯವಾಗಿದೆ. ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾದ ಸಾಕಷ್ಟು ಜಮೀನಿದೆ. ಆದರೂ ಇಲ್ಲಿ ಯಾಕೆ ಹಿನ್ನಡೆಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲಾಗುವುದು. ಈಗ ಕೃಷಿ ಕಾರ್ಮಿಕರ ಸಮಸ್ಯೆಯಿದ್ದರೂ ಯಂತ್ರೋಪಕರಣಗಳಿವೆ. ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ಬೇಸಾಯಕ್ಕೆ ಯಂತ್ರಗಳ ಬಳಕೆ ವ್ಯಾಪಕವಾಗಿದೆ. ಅದೇ ರೀತಿ ನಮ್ಮಲ್ಲೂ ಈ ವರ್ಷದಿಂದಲೇ ರೈತರನ್ನು ಉತ್ತೇಜಿಸುವುದು ನನ್ನ ಕನಸಾಗಿದೆ.

ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಪ್ರವಾಹದ ಆತಂಕ ಇರುವ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಕೂಡಲೇ ಅಗತ್ಯ ಸೌಕರ್ಯ ಒದಗಿಸುವುದು ನನ್ನ ಮತ್ತೊಂದು ಆದ್ಯತೆ.

* ಉಪ್ಪು ನೀರಿನ ಸಮಸ್ಯೆ ದೊಡ್ಡದಾಗಿದೆ. ಪರಿಹಾರ ಹೇಗೆ?

ಸಿಹಿ ನೀರಿಗೆ ಉಪ್ಪು ನೀರು ಸೇರದಂತೆ ತಡೆಯಲು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚೆಂಡಿಯಾ, ಶಿರವಾಡ ಮುಂತಾದೆಡೆ ಉಪ್ಪು ನೀರು ಬರುವ ಕಾರಣ ಹಲವು ಬಾವಿಗಳ ನೀರು ಬಳಕೆಗೇ ಸಾಧ್ಯವಿಲ್ಲದಂತಾಗಿದೆ. ಉಪ್ಪು ನೀರು ಬರುವಲ್ಲಿ ತಡೆಗೋಡೆ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

* ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮವೇನು?

ನಮ್ಮ ಕ್ಷೇತ್ರದ ಯುವಕ, ಯುತಿಯರಿಗೆ ಇಲ್ಲೇ ಉದ್ಯೋಗ ಸಿಗುವಂತೆ ಮಾಡುವುದು ನನ್ನ ದೊಡ್ಡ ಆಸೆಯಾಗಿದೆ. ಕೈಗಾ, ಸೀಬರ್ಡ್‌ ಯೋಜನೆಗಳಿಂದಾಗಿ ನಮ್ಮ ಜನರು ನಿರಾಶ್ರಿತರಾದರು. ಆದರೆ, ನಮ್ಮ ಯುವಕರಿಗೆ ಕೆಲಸ ಕೊಡುತ್ತಿಲ್ಲ. ಇದು ನನಗೆ ಆತಂಕ ತಂದಿದೆ. ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ ಹಾಗೂ ನಿತನ್ ಗಡ್ಕರಿ ಅವರ ಬಳಿ ಪ್ರಸ್ತಾಪಿಸಿದ್ದೇನೆ. ಸ್ಥಳೀಯ ಯುವಕರಿಗೆ ಉದ್ಯೋಗದ ಪರಿಶೀಲನೆ ಮಾಡಲಾಗುತ್ತಿದೆ.

* ಆರೋಗ್ಯ ಕ್ಷೇತ್ರ ಇಲ್ಲಿನ ಮತ್ತೊಂದು ಸಮಸ್ಯೆಯಲ್ಲವೇ?

ಇದು ನಮ್ಮ ದುರಂತ. ರಾಜಕೀಯ ಮಾಡಲೆಂದೇ ರಾಜಕಾರಣ ಮಾಡಿದ್ದರಿಂದಾಗಿ ಜಿಲ್ಲಾ ಆಸ್ಪತ್ರೆ ಹಿಂದುಳಿದಿದೆ. ಕೆಲವೊಂದನ್ನು ಮಾನ ವೀಯ ದೃಷ್ಟಿಯಿಂದಲೂ ನೋಡಬೇಕು. ಆಗ ಎಲ್ಲವೂ ಒಳ್ಳೆಯದಾಗುತ್ತದೆ. ಇಲ್ಲಿ ಏನೇ ಹೆಚ್ಚಿನ ಚಿಕಿತ್ಸೆ ಬೇಕಿದ್ದರೂ ಗೋವಾ, ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಇಲ್ಲೇ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು.

* ಜನರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ?

ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಒಮ್ಮತದಿಂದ ನಾನು ಶಾಸಕಿಯಾಗಿದ್ದೇನೆ. ಈಗ ನಾನು ನನಗೆ ಮತ ಹಾಕಿದವರಿಗಷ್ಟೇ ಪ್ರತಿನಿಧಿಯಲ್ಲ. ಕ್ಷೇತ್ರದ ಎಲ್ಲರಿಗೂ ಬೇಕಾದ್ದನ್ನು ಪೂರೈಸುವ ಜವಾಬ್ದಾರಿ ನನ್ನ ಮೇಲಿದೆ. ಪಕ್ಷಾತೀತವಾಗಿ ಜನರ ಸೇವೆ ಮಾಡುತ್ತೇನೆ.

* ಕಾರವಾರದ ಬಂದರಿನ ಎರಡನೇ ಹಂತದ ವಿಸ್ತರಣೆ ಬಗ್ಗೆ ನಿಲುವೇನು?

ಅಭಿವೃದ್ಧಿ ಕಾರ್ಯಗಳು ಜನರಿಗೆ ತೊಂದರೆಯಾಗದಂತೆ ಆಗಬೇಕು. ಬಂದರು ವಿಸ್ತರಣೆ ವಿಚಾರದಲ್ಲೂ ಇದನ್ನೇ ಹೇಳಬಯಸುತ್ತೇನೆ.

ಆರೋಗ್ಯ ಕ್ಷೇತ್ರದ ಸುಧಾರಣೆಗೆ ಎಷ್ಟು ಸಮಯ ಬೇಕಾಗಬಹುದು?

ಇದಕ್ಕೆ ಸಮಯದ ಗುರಿ ಹಾಕಿಕೊಂಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಿದ್ದರೆ ಕೂಡಲೇ ನಾವು ಜಾರಿಗೆ ತರಬಹುದಿತ್ತು. ಜಿಲ್ಲಾ ಆಸ್ಪತ್ರೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅದರ ದುರಸ್ತಿ, ಉತ್ತಮ ವೈದ್ಯರ ನೇಮಕವಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತಷ್ಟು ವೈದ್ಯರ ಅಗತ್ಯವಿದೆ. 400 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಶ್ರಮಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT