ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸ್ಕಾಂಗೆ ವಿದ್ಯುತ್‌ ಮಾರಾಟ| ತಿಂಗಳಿಗೆ ₹ 1 ಲಕ್ಷ ವಿದ್ಯುತ್​ ಬಿಲ್ ಉಳಿತಾಯ!

ಗುರುನಾನಕ ಎಂಜಿನಿಯರಿಂಗ್‌ ಕಾಲೇಜು
Last Updated 13 ಜೂನ್ 2019, 19:45 IST
ಅಕ್ಷರ ಗಾತ್ರ

ಬೀದರ್: ಬೇಸಿಗೆಯಲ್ಲಿ ಬಿಸಿಲಿನ ತಾಪ. ವಿದ್ಯುತ್‌ ಕೈಕೊಟ್ಟರೆ ಸಹಿಸಲಾಗದಷ್ಟು ಸೆಕೆ. ಕಾಲೇಜಿನ ಕೆಲಸಕ್ಕೂ ಅಡಚಣೆ. ಸಾಲದ್ದಕ್ಕೆ ಪ್ರತಿ ತಿಂಗಳು ಶಾಕ್‌ ಕೊಡುವಂತೆ ಬರುತ್ತಿದ್ದ ₹ 5 ಲಕ್ಷ ಮೊತ್ತದ ವಿದ್ಯುತ್‌ ಬಿಲ್‌!

ಇದೀಗ ಬಿಸಿಲನ್ನೇ ಬಂಡವಾಳ ಮಾಡಿಕೊಂಡು ಸೌರಶಕ್ತಿಯ ಮೂಲಕ ವಿದ್ಯುತ್‌ ಉತ್ಪಾದಿಸಿ ಇವುಗಳಿಗೆ ಪರಿಹಾರ ಕಂಡುಕೊಂಡ ಇಲ್ಲಿಯ  ಗುರುನಾನಕ್ ದೇವ್ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಯು ವಿದ್ಯುತ್ ಬಿಲ್‌ನಲ್ಲಿ ಪ್ರತಿ ತಿಂಗಳು ₹ 1 ಲಕ್ಷ ಉಳಿತಾಯವನ್ನೂ ಮಾಡುತ್ತಿದೆ.

ನಗರದಲ್ಲಿ ಬೇಸಿಗೆಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತದೆ. ಮಳೆಗಾಲದಲ್ಲಿ ಹೇಳಿಕೊಳ್ಳುವಂತಹ ಮಳೆ ಸುರಿಯುವುದಿಲ್ಲ. ಮೋಡಗಳು ಇದ್ದರೂ ಅಷ್ಟಕಷ್ಟೇ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾಲೇಜು ಆಡಳಿತ ಮಂಡಳಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 160 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು ಶಾಲಾ, ಕಾಲೇಜು, ಹಾಸ್ಟೆಲ್‌ ಹಾಗೂ ಕಚೇರಿಗಳಿಗೂ ಬಳಸಿಕೊಳ್ಳುತ್ತಿದೆ.

ಗುರುನಾನಕ್ ದೇವ್ ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ 2,500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ದೊಡ್ಡದಾದ ಕ್ಯಾಂಪಸ್‌ನಲ್ಲಿ ಆಡಳಿತ ಕಚೇರಿ, ಕಾಲೇಜು ಕಟ್ಟಡ, ಸಭಾಂಗಣ, ಕ್ರೀಡಾಂಗಣ, ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ಗುರುನಾನಕ ಪಬ್ಲಿಕ್‌ ಸ್ಕೂಲ್‌ ಸಹ ಇದೆ. ಎಲ್ಲ ಕಟ್ಟಡಗಳಲ್ಲಿ ಫ್ಯಾನ್, ಲೈಟ್, ಕಂಪ್ಯೂಟರ್ ಹಾಗೂ ಎಸಿ ಸಹ ಇವೆ. ಇವುಗಳ ಬಿಲ್‌ ಪ್ರತಿ ತಿಂಗಳು ₹ 5 ಲಕ್ಷ ವರೆಗೆ ಬರುತ್ತಿತ್ತು. ಇದು ಆಡಳಿತ ಮಂಡಳಿಗೆ ತಲೆನೋವಾಗಿತ್ತು.

ವಿದ್ಯುತ್‌ ಕೈಕೊಟ್ಟಾಗ ಎರಡು ಜನರೇಟರ್‌ಗಳನ್ನು ಆನ್‌ ಮಾಡಲಾಗುತ್ತಿತ್ತು. ಒಂದು ಜನರೇಟರ್ ಒಂದು ಗಂಟೆ ನಡೆದರೆ 18 ಲೀಟರ್‌ ಡೀಸೆಲ್‌ ಬೇಕಾಗುತ್ತಿತ್ತು. ಒಂದು ಗಂಟೆಯ ಇಂಧನಕ್ಕಾಗಿಯೇ ₹ 2,448 ಖರ್ಚಾಗುತ್ತಿತ್ತು. ಇಂತಹ ಖರ್ಚುಗಳಿಗೆ ಈಗ ಸಂಪೂರ್ಣ ಕಡಿವಾಣ ಬಿದ್ದಿದೆ.

‘2011ರಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮ (ಕೆಆರ್‌ಇಡಿಸಿ) ಪ್ರಾತ್ಯಕ್ಷಿಕೆ ನಡೆಸಿತ್ತು. ನಮ್ಮ ಸಂಸ್ಥೆಯು 200 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಅನುಮತಿ ಕೇಳಿತ್ತು. ಆದರೆ, ಅದು ನಿಯಮಾವಳಿ ಪ್ರಕಾರ 160 ಕಿಲೋ ವ್ಯಾಟ್ ಘಟಕಕ್ಕೆ ಅನುಮತಿ ನೀಡಿದೆ’ ಎಂದು ಜಿಎನ್‌ಡಿ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊ.ದೀಪಕ ಗೋರೆ ಹೇಳುತ್ತಾರೆ.

‘2016ರಲ್ಲಿ 100 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಸ್ಥಾಪನೆ ಮಾಡಲಾಗಿತ್ತು. 2019ರ ಮಾರ್ಚ್‌ನಲ್ಲಿ 60 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕ ಸ್ಥಾಪಿಸಿದ್ದೇವೆ. ಪ್ರಸ್ತುತ ಘಟಕದಿಂದ ಅಗತ್ಯವಿರುವಷ್ಟು ವಿದ್ಯುತ್‌ ಬಳಸಿ ಉಳಿದ ವಿದ್ಯುತ್‌ನ್ನು ಜೆಸ್ಕಾಂಗೆ ಪ್ರತಿ ಕಿಲೋ ವ್ಯಾಟ್‌ಗೆ ₹ 9.50ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ತಿಳಿಸುತ್ತಾರೆ.

‘ಸೋಲಾರ್‌ ಪೆನಲ್‌ಗಳು 25 ವರ್ಷಗಳ ವರೆಗೆ ಬಾಳಿಕೆ ಬರುತ್ತವೆ. ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಇನ್ನೂ ಹೆಚ್ಚು ಅವಧಿಗೆ ಬಾಳಿಕೆ ಬರಬಹುದು. ಸೌರ ವಿದ್ಯುತ್‌ ಉತ್ಪಾದನೆಯಿಂದಾಗಿ ಪ್ರತಿ ವರ್ಷ ₹ ಅಂದಾಜು ₹ 12 ಲಕ್ಷ ಉಳಿತಾಯ ಆಗುತ್ತದೆ. ಜೆಸ್ಕಾಂಗೆ ಮಾರಾಟ ಮಾಡಿದ ವಿದ್ಯುತ್‌ನಿಂದ ₹ 66 ಸಾವಿರ ಆದಾಯ ಬರುತ್ತಿದೆ. 10 ವರ್ಷಗಳಲ್ಲಿ ಪರೋಕ್ಷವಾಗಿ ಮೂಲ ಬಂಡವಾಳದ ಮೊತ್ತ ದೊರೆಯಲಿದೆ’ ಎಂದು ಪ್ರಾಚಾರ್ಯ ರವೀಂದ್ರ ಏಕಲಾರಕರ್ ಹೇಳುತ್ತಾರೆ.

**

ಬೀದರ್‌ನಲ್ಲಿರುವ ಐತಿಹಾಸಿಕ ಗುರುದ್ವಾರ ಹಾಗೂ ಗುರುನಾನಕ ಆಸ್ಪತ್ರೆಗೂ ಸೋಲಾರ್‌ ಪೆನಲ್‌ ಅಳವಡಿಸುವ ಚಿಂತನೆ ನಡೆದಿದೆ.
-ರವೀಂದ್ರ ಏಕಲಾರಕರ್,ಪ್ರಾಚಾರ್ಯ, ಜಿಎನ್‌ಡಿ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT