ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಜಾ ಭಜಂತ್ರಿಯೊಂದಿಗೆ ವಿದ್ಯಾರ್ಥಿಗಳ ಸ್ವಾಗತ

ಕಮಠಾಣದಲ್ಲಿ ಸಿಂಗಾರಗೊಂಡ ಬಂಡಿ ಮೆರವಣಿಗೆ
Last Updated 29 ಮೇ 2019, 13:43 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಕೆಲ ಖಾಸಗಿ ಶಾಲೆಗಳು ಬುಧವಾರ ಪ್ರಾರಂಭವಾದವು. ಶಾಲೆಯ ಪ್ರವೇಶ ದ್ವಾರದಲ್ಲಿ ತಳಿರು ತೋರಣ ಕಟ್ಟಿ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು.

ಬೀದರ್‌ ತಾಲ್ಲೂಕಿನ ಕಮಠಾಣದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಮಕ್ಕಳ ಸಂಭ್ರಮ ಹೆಚ್ಚಿಸಲು ಎತ್ತಿನ ಬಂಡಿಯಲ್ಲಿ ಮಕ್ಕಳನ್ನು ಗ್ರಾಮದಿಂದ ಹಲಗಿ ಬಾರಿಸುತ್ತ ಮೆರವಣಿಗೆಯಲ್ಲಿ ಶಾಲಾ ಆವರಣದ ವರೆಗೆ ಕರೆ ತಂದರು. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದರು.

ಶಾಲೆಗಳ ಪ್ರವೇಶ ದ್ವಾರದಲ್ಲಿ ತೆಂಗಿನ ಗರಿಗಳನ್ನು ಕಟ್ಟಲಾಗಿತ್ತು, ಮಾವಿನ ಎಲೆ ಹಾಗೂ ಗುಲ್‌ಮೋಹರ್‌ ಹೂವಿನಿಂದ ಅಲಂಕರಿಸಲಾಗಿತ್ತು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಹಂಚಿಕೆ ಮಾಡಿ ಮಾರ್ಗದರ್ಶನ ನೀಡಿ ಸಿಹಿ ವಿತರಿಸಲಾಯಿತು. ಫತೇಪುರದ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆಯಲಾಯಿತು.

ಸಂಸ್ಕಾರಯುತ ಶಿಕ್ಷಣ ಕೊಡಿ

ಬೀದರ್‌ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸರಳವಾಗಿ ನಡೆಯಿತು.

ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ್ ಪಾಟೀಲ, ‘ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಸಂಸ್ಕಾರಯುತ ಶಿಕ್ಷಣ ಕೊಡಬೇಕು. ಪ್ರತಿ ಪಾಠಕ್ಕೆ ಬೇಕಾದ ಅವಧಿಗೆ ತಕ್ಕಂತೆ ಪಠ್ಯ ವಿಂಗಡಣೆ ಮಾಡಬೇಕು. ಉದಾಹರಣೆಯೊಂದಿಗೆ ಮಕ್ಕಳಿಗೆ ಪಾಠ ಮಾಡುವ ಮೂಲಕ ಮಕ್ಕಳು ಪ್ರತಿಯೊಂದು ವಿಷಯವನ್ನು ಕರಗತ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ರೇವಣಪ್ಪ ಸಂಗೋಳಗಿ ಹಾಗೂ ಮುಖ್ಯ ಶಿಕ್ಷಕಿ ಸರಸ್ವತಿ ಸ್ವಾಮಿ ಇದ್ದರು. ಮೊದಲ ದಿನ 209 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೊದಲ ದಿನ 93 ಮಕ್ಕಳ ಪ್ರವೇಶ
ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮೊದಲ ದಿನವೇ 93 ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.

ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಮೊದಲ ತರಗತಿಗೆ 30, ಎಲ್‌ಕೆಜಿಗೆ 32, ಕಮಲನಗರ ತಾಲ್ಲೂಕಿನ ಠಾಣಾಕುಸನೂರಲ್ಲಿ 12, ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ 4, ಬೀದರ್‌ ತಾಲ್ಲೂಕಿನ ಮನ್ನಳ್ಳಿಯಲ್ಲಿ 5 ಹಾಗೂ ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ 10 ವಿದ್ಯಾರ್ಥಿಗಳು ಪ್ರವೇಶ ಪಡೆದು ಗಮನ ಸೆಳೆದಿದ್ದಾರೆ

ಜಿಲ್ಲೆಯ 21ಕೆಪಿಎಸ್ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ಐದು ಶಾಲೆಗಳಲ್ಲಿ ಎಲ್‌ಕೆಜಿ ಆರಂಭವಾಗಿದೆ. ಜೂನ್‌ 10ರ ವರೆಗೆ ಪ್ರವೇಶಕ್ಕೆ ಅವಕಾಶ ಇದೆ. ಜೂನ್‌ 10ರಂದು ಶಾಲೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 11ರಿಂದ ಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.

ಆದರ್ಶ ವಿದ್ಯಾಲಯ ಪ್ರವೇಶ: ಆಯ್ಕೆ ಪಟ್ಟಿ ಪ್ರಕಟ

ಬೀದರ್‌: ತಾಲ್ಲೂಕಿನ ಜನವಾಡದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನದಡಿ ಸರ್ಕಾರಿ ಆಂಗ್ಲ ಮಾಧ್ಯಮ ಆದರ್ಶ ವಿದ್ಯಾಲಯದಲ್ಲಿ 2019-20ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲೆಯ ಮತ್ತು ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಮಾಹಿತಿಯನ್ನು ವಿದ್ಯಾರ್ಥಿಗಳ ಪಾಲಕರ ದೂರವಾಣಿ ಸಂಖ್ಯೆಗೂ ಕಳುಹಿಸಲಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ಮೀಸಲಾತಿ ಗುಂಪಿನ ಪ್ರಮಾಣಪತ್ರ, ಅಂಕಪಟ್ಟಿ, ಸ್ಯಾಟ್ಸ್ ಟಿ.ಸಿ, ಮಗುವಿನ ಮತ್ತು ಪಾಲಕರ ಆಧಾರ್ ಕಾರ್ಡ್, ಅಲಾಟ್‍ಮೆಂಟ್ ಕಾರ್ಡ್, ನಾಲ್ಕು ಭಾವಚಿತ್ರಗಳು, ಬ್ಯಾಂಕ್ ಪಾಸ್‌ಬುಕ್‌ ಪ್ರತಿ ತರಬೇಕು.

ಹೊರ ತಾಲ್ಲೂಕಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಬೀದರ್ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಮತ್ತಿತರ ಅಗತ್ಯ ದಾಖಲೆಗಳೊಂದಿಗೆ 2019ರ ಜೂನ್ 1ರೊಳಗಾಗಿ ಪ್ರವೇಶ ಪಡೆಯಬೇಕು. ನಿಗದಿತ ದಿನಾಂಕದೊಳಗೆ ಪ್ರವೇಶ ಪಡೆಯದಿದ್ದಲ್ಲಿ ಸೀಟು ರದ್ದಾಗಲಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9449691105, 8970224448ಗೆ ಸಂಪರ್ಕಿಸಬಹುದು ಎಂದು ಶಾಲೆಯ ಮುಖ್ಯ ಶಿಕ್ಷಕ ಗೋಪಾಲರಾವ್ ಪಡವಳಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT