ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ತಗಡಿನ ಶೆಡ್‍ಗಳಲ್ಲಿ ಶಾಲೆಗಳು: ಸಚಿವ ಸುರೇಶ್‌ಕುಮಾರ್‌ ತೀವ್ರ ಅಸಮಾಧಾನ

ತಗಡಿನ ಶೆಡ್‍ಗಳಲ್ಲಿ ಶಾಲೆಗಳು: ಸಚಿವ ಸುರೇಶ್‌ಕುಮಾರ್‌ ತೀವ್ರ ಅಸಮಾಧಾನ
Last Updated 29 ಸೆಪ್ಟೆಂಬರ್ 2020, 15:24 IST
ಅಕ್ಷರ ಗಾತ್ರ

ಜನವಾಡ/ ಬೀದರ್: ಜಿಲ್ಲೆಯಲ್ಲಿ ತಗಡಿನ ಶೆಡ್‍ಗಳಲ್ಲಿ ಅನೇಕ ಶಾಲೆಗಳು ನಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು, ಶಾಲೆಗಳಿಗೆ ಮೂಲಸೌಕರ್ಯ ಒದಗಿಸದ ಶಿಕ್ಷಣ ಶಿಕ್ಷಣ ಸಂಸ್ಥೆಗಳ ವಿರುದ್ಧ ತ್ವರಿತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದ ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಒಂದು ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲ್ಲೂಕಿನಲ್ಲಿ ಟಿನ್ ಶೆಡ್‍ಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಇಲ್ಲದ ಶಾಲೆಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿ ಕ್ರಮ ಜರುಗಿಸಲಾಗುವುದು’ ಎಂದರು.

‘ಹೊಸ ಶಾಲೆಗೆ ಪರವಾನಗಿ ಕೊಡುವಾಗ ಎಲ್ಲ ರೀತಿಯ ಸೌಕರ್ಯಗಳು ಇವೆಯೇ ಎನ್ನುವುದನ್ನು ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯ. ಟಿನ್ ಶೆಡ್‍ಗಳಲ್ಲಿ ಇರುವ ಶಾಲೆಗಳಿಗೆ ಹಿಂದೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಿದರಷ್ಟೇ ಶಾಲೆಗೆ ಅನುಮತಿ ಕೊಡಲಾಗುವುದು’ ಎಂದು ಹೇಳಿದರು.

‘ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಬೀದರ್ ಜಿಲ್ಲೆಯಲ್ಲಿ ಟಿನ್ ಶೆಡ್‍ಗಳಲ್ಲಿ ನಡೆಯುತ್ತಿರುವ ಶಾಲೆಗಳ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಅವರಿಗೆ ನೀಡಿದ ಭರವಸೆಯಂತೆ ಶಾಲೆಗಳ ಪರಿಶೀಲನೆಗೆ ಜಿಲ್ಲೆಗೆ ಭೇಟಿ ನೀಡಿದ್ದೇನೆ’ ಎಂದರು.

‘ಮನ್ನಾಎಖ್ಖೆಳ್ಳಿಯಲ್ಲಿ ಪ್ರಿಯಾ ಹಿರಿಯ ಪ್ರಾಥಮಿಕ ಶಾಲೆ, ನರೇಂದ್ರ ಹಿರಿಯ ಪ್ರಾಥಮಿಕ ಶಾಲೆ, ಭಂಗೂರಿನಲ್ಲಿ ನೈಟಿಂಗೇಲ್ ಪಬ್ಲಿಕ್ ಶಾಲೆ ಹಾಗೂ ಯಾಕತಪುರದಲ್ಲಿ ಇನ್ಫಂಟ್ ಜೀಸಸ್ ಪಬ್ಲಿಕ್ ಶಾಲೆ, ಬೀದರ್‌ನ ಮಾಧನಗರದಲ್ಲಿರುವ ರೇಹಾನ್‌ ಪಬ್ಲಿಕ್‌ ಶಾಲೆಗೆ ಭೇಟಿ ಕೊಟ್ಟಿದ್ದೇನೆ. ಈ ಶಾಲೆಗಳು ಮಕ್ಕಳಿಗೆ ಅನುಕೂಲಕರ ವಾಗಿಲ್ಲ. ಟಿನ್ ಶೆಡ್ ಬದಲು ಮರದ ಕೆಳಗೆ ಶಾಲೆ ನಡೆಸುವುದು ಎಷ್ಟೋ ಉತ್ತಮ’ ಎಂದು ಹೇಳಿದರು.

‘ಇಂದಿನ ಮಕ್ಕಳೆ ನಾಳಿನ ನಾಗರಿಕರು ಎಂದು ಹೇಳಿ ಸಮಾಜದಲ್ಲಿ ಶಾಲೆಗಳನ್ನು ನಡೆಸುವವರು ಮಕ್ಕಳ ಬಗ್ಗೆ ಕನಿಷ್ಠ ಕಾಳಜಿ ಹೊಂದಿರಬೇಕು. ಕಾಳಜಿಯ ಅಭಾವ ಇಂತಹ ಶಾಲೆಗಳಲ್ಲಿ ಕಾಣುತ್ತಿದೆ. ಕೆಲವರು ಶಾಲೆ ಆರಂಭಿಸಲು ಅನುಮತಿ ಪಡೆದು 9 ವರ್ಷ ಕಳೆದರೂ ಕಟ್ಟಡ ನಿರ್ಮಿಸಿಲ್ಲ. ಮತ್ತೆ ಸಮಯ ಕೇಳುತ್ತಿದ್ದಾರೆ. ಇಂತಹ ಸಂಸ್ಥೆಗಳಿಗೆ ನೀಡಿರುವ ಅನುಮತಿಯನ್ನು ಹೇಗೆ ಮುಂದುವರಿಸಲು ಸಾಧ್ಯ? ಶಿಕ್ಷಣ ಸಂಸ್ಥೆಗಳು ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತಗಡಿನ ಶೆಡ್‍ಗಳಲ್ಲಿ ನಡೆಯುವ ಶಾಲೆಗಳು ಬಹಳಷ್ಟು ಇದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಕೊರೊನಾ ಇರುವ ಸಂದ ರ್ಭದಲ್ಲಾದರೂ ಸಂಸ್ಥೆಗಳು ಕಟ್ಟಡ ಕಟ್ಟಿ ಕೊಳ್ಳಬಹುದಿತ್ತು. ಸಮಯ ಇದ್ದರೂ ಕಟ್ಟಿಕೊಂಡಿಲ್ಲ’ ಎಂದು ಹೇಳಿದರು.

ನಂತರ ಬೀದರ್‌ನ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ನಳಿನ್‌ ಅತುಲ್‌, ಡಿಡಿಪಿಐ ಗಂಗಣ್ಣ ಸ್ವಾಮಿ, ಬಿಜೆಪಿ ಮುಖಂಡರಾದ ಶೈಲೇಂದ್ರ ಬೆಲ್ದಾಳೆ, ರೇವಣಸಿದ್ದಪ್ಪ ಜಲಾದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT