ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಸಾಹಿತ್ಯ ಸಮ್ಮೇಳನಕ್ಕೆ ಅನರ್ಹರ ಆಯ್ಕೆ: ವ್ಯಾಪಕ ವಿರೋಧ

ಅನೇಕ ಕನ್ನಡ ಕೃತಿ ರಚಿಸಿದ ಲೇಖಕರ ಮೂಲೆಗುಂಪು
Last Updated 15 ಫೆಬ್ರುವರಿ 2023, 6:55 IST
ಅಕ್ಷರ ಗಾತ್ರ

ಬೀದರ್: ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷ ಸ್ಥಾನಕ್ಕೆ ಪರಿಷತ್ತಿನ ಮಾನದಂಡಗಳನ್ನು ಅನುಸರಿಸದೇ ಅರ್ಹರನ್ನು ಆಯ್ಕೆ ಮಾಡದೇ ಅನರ್ಹರು ಹಾಗೂ ಆಪ್ತರನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಸಾಹಿತ್ಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ತಾಲ್ಲೂಕು ಘಟಕಗಳ ರಚನೆಯಲ್ಲೇ ಎಡವಿದೆ. ಹೀಗಾಗಿ ಕೆಲ ತಾಲ್ಲೂಕು ಘಟಕಗಳು ದಿಕ್ಕು ದೆಸೆಯಿಲ್ಲದೆ ಸಾಗಿವೆ. ಸಾಹಿತಿಗಳು, ಅರ್ಹರು, ಅನುಭವಿಗಳು, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆಗೆ ತಮ್ಮ ಬದುಕು ಸವೆಸಿದವರನ್ನು ಸಂಪೂರ್ಣ ಮೂಲೆಗುಂಪು ಮಾಡಿ ಈಗಷ್ಟೇ ಕಣ್ಣು ಬಿಡುತ್ತಿರುವ ವ್ಯಕ್ತಿಗಳಿಗೆ ಮಣೆ ಹಾಕಿತ್ತಿರುವುದು ತೀವ್ರ ಟೀಕೆಗೆ ಪ್ರಮುಖ ಕಾರಣವಾಗಿದೆ.

ಪರಿಷತ್ತು ಜಾತಿ, ಧರ್ಮ ಹಾಗೂ ಸಮುದಾಯಕ್ಕೆ ಅಂಟಿಕೊಂಡರೆಪರಿಷತ್ತಿನ ಮೂಲ ಉದ್ದೇಶವೇ ಮಣ್ಣು ಪಾಲು ಆಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರಿಗೆ ಇದೆ ಎಂದು ಭಾವಿಸಿ ಮತದಾರರು ಎರಡು ಅವಧಿಗೆ ಅವರನ್ನು ಆಯ್ಕೆ ಮಾಡಿದ್ದಾರೆ. ಇವರು ತಾಲ್ಲೂಕು ಘಟಕಗಳ ಮೇಲೆ ಹಿಡಿತ ಇಟ್ಟುಕೊಳ್ಳದ ಕಾರಣ ಅವು ದಾರಿ ತಪ್ಪುತ್ತಿವೆ.

ಕಮಲನಗರದ ಸಾಹಿತಿ ಬಾ.ನಾ.ಸೋಲಾಪುರೆ ನಮ್ಮ ಮಧ್ಯೆ ಇಲ್ಲ. ಆದರೆ, ಅವರಿಗೆ ಕಮಲನಗರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಭಾಗ್ಯ ದೊರೆಯಲಿಲ್ಲ. ಅಂಗವಿಕಲ ಸಾಹಿತಿ ಮಹಾದೇವಮ್ಮ ತಾಯಿ ಅವರು ಅನೇಕ ಅನಾಥ ಮಕ್ಕಳನ್ನು ಸಲಹುವ ಜತೆಗೆ ಹಲವು ಕೃತಿಗಳನ್ನು ಹೊರ ತಂದಿದ್ದಾರೆ. ಇನ್ನೂ ಅನೇಕ ಸಾಹಿತಿಗಳು ತಾಲ್ಲೂಕಿನಲ್ಲಿ ಇದ್ದಾರೆ. ನಿವೃತ್ತ ಪ್ರಾಚಾರ್ಯ ಎಸ್‌.ಎನ್‌.ಶಿವಣರ್‌ ಐದು ಕೃತಿಗಳನ್ನು ಹೊರ ತಂದಿದ್ದಾರೆ. ಬೀದರ್‌ನ ಅಕ್ಕ ಮಹಾದೇವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ವಿಶ್ವನಾಥ ಕಿವಡೆ 15 ಕೃತಿಗಳನ್ನು ಬರೆದಿದ್ದಾರೆ. ಇವರೆಲ್ಲರನ್ನೂ ಕಡೆಗಣಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡದವರಿಗೆ ಮಣೆ ಹಾಕಿರುವುದು ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಮಿತಿಯಲ್ಲೂ ಅಸಮಾಧಾನ ಮೂಡಿಸಿದೆ.

ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನು ಆಯ್ಕೆ ಮಾಡುವ ಮೊದಲು ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಬೇಕು. ಆದರೆ, ಇಲ್ಲಿ ತಾಲ್ಲೂಕು ಘಟಕಗಳು ಜಿಲ್ಲಾ ಕಾರ್ಯಕಾರಿಣಿ ಸಮಿತಿಯೊಂದಿಗೆ ಚರ್ಚೆಯನ್ನೇ ನಡೆಸಿಲ್ಲ. ಜಿಲ್ಲಾ ಘಟಕ ತಾಲ್ಲೂಕು ಘಟಕಗಳ ಮೇಲಿನ ನಿಯಂತ್ರಣ ಕಳೆದುಕೊಂಡಂತೆ ಸೂಚಿಸುತ್ತಿದೆ.

ಚಿಟಗುಪ್ಪ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಗೊಂದಲ ಉಂಟಾಗಿ ಕೊನೆಯೇ ಸಭೆಯನ್ನೇ ಮುಂದೂಡಬೇಕಾಯಿತು. ಅರ್ಹರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದರೆ ಸಹಜವಾಗಿಯೇ ಸಮ್ಮೇಳನಕ್ಕೆ ಜನ ಬರುತ್ತಾರೆ. ಅನರ್ಹರಿಗೆ ಮಣೆ ಹಾಕಿದರೆ ಬಾಡಿಗೆ ಜನರನ್ನು ಕರೆ ತರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾಹಿತಿಗಳು ಅಸಮಾಧಾನ ಹೊರ ಹಾಕಿದ್ದಾರೆ.

‘ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಧಾರ್ಮಿಕ ಹಾಗೂ ರಾಜಕೀಯ ಪ್ರಭಾವ ಕೆಲಸ ಮಾಡಬಾರದು. ಹೆಚ್ಚು ಕೃತಿಗಳನ್ನು ರಚಿಸಿದವರು ಹಾಗೂ ಹಿರಿಯರಿಗೆ ಆದ್ಯತೆ ಕೊಡಬೇಕು. ಈಚೆಗೆ ಕಸಾಪ ನಿಯಮಾವಾಳಿ ಪಾಲಿಸುತ್ತಿಲ್ಲ. ಆಪ್ತರಿಗೆ ಮಣೆ ಹಾಕುತ್ತಿದೆ. ಹೀಗೆ ಮಾಡಿದರೆ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯವಿಲ್ಲ’ ಎಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಹೇಳುತ್ತಾರೆ.

‘ಕಮಲನಗರದಲ್ಲಿ ಸಚಿವ ಪ್ರಭು ಚವಾಣ್‌ ಅವರು ಸಮ್ಮೇಳನದ ಖರ್ಚು ನೋಡಿಕೊಳ್ಳಲು ಒಪ್ಪಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅದಕ್ಕೆ ಪ್ರತಿಯಾಗಿ ಧರ್ಮಗುರು ಚುನಾವಣೆಯಲ್ಲಿ ತೆರೆಮರೆಯಲ್ಲಿ ನೆರವಿಗೆ ಬರಲಿದ್ದಾರೆ ಎನ್ನುವ ಭ್ರಮೆ ಅಲ್ಲಿ ಮನೆ ಮಾಡಿದೆ. ಒಟ್ಟಾರೆ ಕಮಲನಗರ ತಾಲ್ಲೂಕು ಘಟಕದ ಸಮ್ಮೇಳನದ ಅಧ್ಯಕ್ಷರ ಆಯ್ಕೆ ತಪ್ಪು ನಿರ್ಧಾರದಿಂದ ಕೂಡಿದೆ. ಇದರಿಂದ ಹಿರಿಯ ಸಾಹಿತಿಗಳಿಗೆ ನೋವಾಗಿದೆ’ ಎಂದು ತಿಳಿಸುತ್ತಾರೆ.

‘ಕಮಲನಗರ ತಾಲ್ಲೂಕು ಘಟಕದ ಸಭೆಯಲ್ಲಿ ಚರ್ಚಿಸಿದ ನಂತರ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರ ಗಮನಕ್ಕೆ ತಂದು ತಾಲ್ಲೂಕು ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ’ ಎಂದು ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಪ್ರಶಾಂತ ಮಠಪತಿ ಹೇಳುತ್ತಾರೆ.

ಭಾಲ್ಕಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ವಿಷಯದಲ್ಲಿ ಆರಂಭದಲ್ಲಿ ಇಂತಹದ್ದೇ ಸಮಸ್ಯೆಯಾಗಿತ್ತು. ಕೊನೆಯ ಗಳಿಗೆಯಲ್ಲಿ ಕನ್ನಡಾಭಿಮಾನಿಗಳು ಹಾಗೂ ಸಾಹಿತಿಗಳ ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸಲಾಯಿತು. ನಂತರ ಅಲ್ಲಿ ಅರ್ಹರಿಗೆ ಅವಕಾಶ ದೊರೆತಿದೆ.

ಸಾಹಿತಿಗಳಲ್ಲದವರ ಹೆಸರು ಘೋಷಣೆ ಮಾಢಿರುವ ಕಾರಣ ಎಲ್ಲರಿಗೂ ಮುಜಗರವಾಗಿದೆ. ಬಹಿರಂಗವಾಗಿ ಅಕ್ಷೇಪ ವ್ಯಕ್ತಪಡಿಸಿದರೆ ಒಂದು ಸಮುದಾಯವನ್ನು ಎದುರು ಹಾಕಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ. ವೈಯಕ್ತಿಕವಾಗಿ ವಿರೋಧಿಸುವುದಿಲ್ಲ. ಆದರೆ, ಸಾಹಿತಿಗಳನ್ನೇ ಆಯ್ಕೆ ಮಾಡಬೇಕಿತ್ತು ಎನ್ನುವುದು ಕಲಮನಗರ ತಾಲ್ಲೂಕಿನ ಸಾಹಿತಿಗಳ ಒತ್ತಾಸೆಯಾಗಿದೆ.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಕೃತಿಗಳೇ ಮಾನದಂಡವಾಗಬೇಕು. ನಂತರ ಸೇವಾ ಹಿರಿತನ ಪರಿಗಣಿಸಬೇಕು. ಧರ್ಮ, ರಾಜಕೀಯದಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನೇ ಕಳೆದುಕೊಳ್ಳಲಿದೆ ಎಂದು ಬುದ್ಧ, ಬಸವ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್‌ ಪ್ರತಿಕ್ರಿಯಿಸಿದ್ದಾರೆ.


‘ಕಸಾಪ ತಾಲ್ಲೂಕು ಘಟಕಗಳು ಸಭೆ ನಡೆಸಿ ಮೂರು ಅಥವಾ ನಾಲ್ಕು ಹೆಸರುಗಳನ್ನು ಜಿಲ್ಲಾ ಕಾರ್ಯಕಾರಣಿ ಸಮಿತಿಗೆ ಕಳಿಸಿಕೊಡಬೇಕು. ಒಂದು ತಾಲ್ಲೂಕು ಘಟಕ ಮಾತ್ರ ಹಾಗೆ ಮಾಡಿಲ್ಲ. ಪರಿಷತ್ತಿನ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಯ್ಕೆ ಮಾಡಿದರೆ ಅದನ್ನು ತಡೆ ಹಿಡಿಯುವ ಅಧಿಕಾರ ಜಿಲ್ಲಾ ಘಟಕಕ್ಕೆ ಇದೆ. ಈ ಕುರಿತು ಪರಿಶೀಲಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT