ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚಳಿಯದೆ ಉಳಿಯುವುದೇ ನಿಸ್ವಾರ್ಥ ಸೇವೆ: ಜ್ಯೋತಿರ್ಮಯಾನಂದ ಸ್ವಾಮೀಜಿ

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ನುಡಿ
Last Updated 18 ಜನವರಿ 2021, 14:49 IST
ಅಕ್ಷರ ಗಾತ್ರ

ಬೀದರ್‌: ‘ನಾನು ನನ್ನದು ಎನ್ನುವುದು ಸ್ವಾರ್ಥ. ನಾವು ನಮ್ಮವರು ಎಂಬುದು ನಿಸ್ವಾರ್ಥ. ತಮಗಾಗಿ ಮಾಡಿದ ಕಾರ್ಯ ಯಾರೂ ನೆನಪಿಡುವುದಿಲ್ಲ. ಈ ಸಮಾಜಕ್ಕಾಗಿ, ಸಾಹಿತ್ಯಕ್ಕಾಗಿ, ಸಂಸ್ಕೃತಿಗಾಗಿ, ಕಲೆ ಅಭಿವೃದ್ಧಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ನುಡಿದರು.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಆಶ್ರಯದಲ್ಲಿ ಚಂದ್ರಶೇಖರ ಹೆಬ್ಬಾಳೆ ಅವರ ತೋಟದ ಮನೆಯ ಆವರಣದಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡ ಜಾನಪದ ಸಂಭ್ರಮ ಹಾಗೂ ಶಿವರತ್ನ ಪ್ರಶಸ್ತಿ ಪ್ರದಾನ ಸಮಾರಂಭದದಲ್ಲಿ ಅವರು ಮಾತನಾಡಿದರು.

‘ಜನಪದ ಈ ದೇಶದ ಉಸಿರು. ಜನಪದದಿಂದಲೇ ವಿಶ್ವಕ್ಕೆ ಶಾಂತಿ ದೊರಕಿದೆ. ಸ್ವಾಮಿ ವಿವೇಕಾನಂದರು ಭಾರತದ ಜನಪದ ಸಂಸ್ಕೃತಿಯನ್ನು ಚಿಕಾಗೋದಲ್ಲಿ ಪಸರಿಸಿ ವಿಶ್ವಪ್ರಸಿದ್ಧಿಯಾದರು. ಹಾಗೆಯೇ ಇಂದು ಜಿಲ್ಲೆಯಲ್ಲಿ ಜನಪದ ಕಲೆ ಹಾಗೂ ಕಲಾವಿದರನ್ನು ಉಳಿಸುವ ಕಾರ್ಯ ಹೆಬ್ಬಾಳೆಯವರು ಮಾಡುತ್ತಿದ್ದಾರೆ. ರತ್ನಮ್ಮ ಹೆಬ್ಬಾಳೆ ಅವರು ಸಾವಿರಾರು ಹಾಡುಗಳನ್ನು ಹಾಡುತ್ತಿದ್ದರು. ಹಾಗೆಯೇ ಅವರ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ’ ಎಂದರು.

‘ಜನಪದ ಗಾಯಕಿ ರತ್ನಮ್ಮ ಹೆಬ್ಬಾಳೆಯವರ ದ್ವಿತೀಯ ಸ್ಮರಣೋತ್ಸವದ ಪ್ರಯುಕ್ತ ಹೆಬ್ಬಾಳೆ ಪರಿವಾರದವರು ಹಿರಿಯರ ಸ್ಮರಣೆಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಅವಿಸ್ಮರಣೀಯ’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಬಣ್ಣಿಸಿದರು.

‘ಹೆಬ್ಬಾಳೆ ಕುಟುಂಬ ತಮ್ಮ ಹಿರಿಯರ ಸ್ಮರಣೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂವರ್ಧನೆಗಾಗಿ ದುಡಿಯುತ್ತಿರುವುದು ಶ್ಲಾಘನೀಯ. ಹಿರಿಯರ ಸೇವೆ ದೇವರ ಸೇವೆ ಮಾಡಿದಂತೆ. ಅದರಲ್ಲೂ ಕಲೆ ಮತ್ತು ಕಲಾವಿದರನ್ನು ಹಾಗೂ ಸಮಾಜದಲ್ಲಿ ದುಡಿಯುವ ವಿವಿಧ ರಂಗದ ಸಾಧಕರನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ನಿಜಕ್ಕೂ ಅವರ ನಿಸ್ವಾರ್ಥ ಸೇವೆ ಮೆಚ್ಚುವಂಥದ್ದು’ ಎಂದರು.

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಎಳ್ಳು ಅಮಾವಾಸ್ಯೆ ಇದೊಂದು ಜನಪದ ಸೊಗಡಿನ ಹಬ್ಬ. ಒಕ್ಕಲಿಗ ಮುದ್ದಣ್ಣನವರನ್ನು ನೆನೆಯುವ ಹಬ್ಬ. ಜನಪದ ಊಟ ಭಜ್ಜಿ ರೊಟ್ಟಿ ಅಂಬಲಿ ಸವಿದು ಭೂತಾಯಿಗೆ ಚರಗ ಚೆಲ್ಲುವ ಹಬ್ಬ. ಇಂತಹ ಜನಪದ ಹಬ್ಬ, ಜನಪದ ಸಂಭ್ರಮ, ಜನಪದ ಹಾಡುಗಳು ಒಟ್ಟಿನಲ್ಲಿ ದೇಶಿ ಸೊಗಡಿನ ಹಬ್ಬವನ್ನು ರತ್ನಮ್ಮ ತಾಯಿಯವರ ಸ್ಮರಣೆಯಲ್ಲಿ ಆಚರಿಸುತ್ತಿರುವುದು ಖುಷಿ ತಂದಿದೆ’ ಎಂದರು.

ಬೆಂಗಳೂರಿನ ಜಾನಪದ ಗಾಯಕ ಜೋಗಿಲ ಸಿದ್ದರಾಜು, ರಾಮಚಂದ್ರ ಹಾಗೂ ಉಷಾ ಬಸಪ್ಪನವರ ಜನಪದ ಗೀತೆಗಳನ್ನು ಹಾಡಿದರು. ಸುಧೀರ್ ತಬಲಾ, ಪ್ರಮೋದ ಕೀಬೋರ್ಡ್‍ ಹಾಗೂ ಪವನ್ ರಿದಂಪ್ಯಾಡ್‍ ನುಡಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಚನ್ನಬಸಪ್ಪ ಹಾಲಹಳ್ಳಿ ವಹಿಸಿದ್ದರು. ಗಂಗಾಂಬಿಕಾ ಅಕ್ಕ, ಸಿಪಿಐ ಮಲ್ಲಮ್ಮ ಚೌಬೆ, ಜಿ.ಪಂ.ಲೆಕ್ಕಾಧಿಕಾರಿ ದೀಪುಕುಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ರೆಡ್ಡಿ, ಅಪ್ಪಾರಾವ್ ಗುನ್ನಳ್ಳಿಕರ್, ರವಿ ಮಾಸಿಮಾಡೆ, ಸಂತೋಷ ಪಾಟೀಲ ಗುನ್ನಳ್ಳಿಕರ್, ಪ್ರೊ.ಎಸ್.ಬಿ.ಬಿರಾದಾರ, ಸಿ.ಎ.ಪಾಟೀಲ, ಮೃತ್ಯುಂಜಯ ಸಜ್ಜನಶೆಟ್ಟಿ, ಚಂದ್ರಶೇಖರ ಹೆಬ್ಬಾಳೆ ಇದ್ದರು.

ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಪಿತಾ ಹೆಬ್ಬಾಳೆ ವಚನ ನೃತ್ಯ ನಡೆಸಿಕೊಟ್ಟರು. ಅಶೋಕ ಹೆಬ್ಬಾಳೆ ಸ್ವಾಗತಿಸಿದರು. ರಾಜಕುಮಾರ ಹೆಬ್ಬಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT