ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮದ ದ್ವಾರದಲ್ಲಿಯೇ ತಿಪ್ಪೆಗುಂಡಿಗಳು: ಗಬ್ಬೆದ್ದು ನಾರುತ್ತಿದೆ ಸಿಂಧನಕೇರಾ

ಗುಂಡು ಅತಿವಾಳ
Published 31 ಆಗಸ್ಟ್ 2024, 6:22 IST
Last Updated 31 ಆಗಸ್ಟ್ 2024, 6:22 IST
ಅಕ್ಷರ ಗಾತ್ರ

ಹುಮನಾಬಾದ್: ಗ್ರಾಮದ ದ್ವಾರದಲ್ಲಿಯೇ ಸ್ವಾಗತಿಸುವ ತಿಪ್ಪೆಗುಂಡಿಗಳು, ಶಾಲೆ ಪಕ್ಕ ಮತ್ತು ರಸ್ತೆ ಬದಿಯಲ್ಲಿಯೇ ಮಲ ಮೂತ್ರಗಳ ವಿಸರ್ಜನೆ, ಎಲ್ಲೆಂದರಲ್ಲಿ ರಾಶಿ ರಾಶಿ ಕಸ. ಚರಂಡಿಗಳಿಲ್ಲದೆ ರಸ್ತೆ ಮೇಲೆ ತ್ಯಾಜ್ಯ ನೀರು ಹರಿದು ಗಬ್ಬೆದ್ದು ನಾರುತ್ತಿದೆ. ಇದು ತಾಲ್ಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಕಂಡು ಬರುವ ದೃಶ್ಯಗಳು.

ಈ ಗ್ರಾಮದಲ್ಲಿ 6 ಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಇದೆ. 12 ಜನ ಗ್ರಾ.ಪಂ ಸದಸ್ಯರಿದ್ದಾರೆ. ಆದರೆ ನೈರ್ಮಲ್ಯ ಮರೀಚಿಕೆಯಾಗಿದೆ.

ರಸ್ತೆ ಮೇಲೆ ಚರಂಡಿ ನೀರು: ಗ್ರಾಮದಲ್ಲಿ ಪ್ರಮುಖ ಕಡೆ ಮಾತ್ರ ಸಿಸಿ ರಸ್ತೆಗಳು ನಿರ್ಮಾಣ ಆಗಿದೆ. ಆದರೆ ಬಹುತೇಕ ಬಡಾವಣೆಯಲ್ಲಿ ರಸ್ತೆ ಚರಂಡಿಗಳು ನಿರ್ಮಿಸಿಲ್ಲ. ಪ್ರತಿ ಮನೆಯಿಂದ ಹರಿದು ಬರುವ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲಲ್ಲಿ ರಸ್ತೆ ಕಿತ್ತು ಹೋಗಿದ್ದರಿಂದ ನೀರು ನಿಂತಲ್ಲೇ ನಿಂತು ಗಬ್ಬು ವಾಸನೆ ಬೀರುತ್ತಿದೆ.

ರೋಗ ಭೀತಿ: ತ್ಯಾಜ ನೀರು ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡುತ್ತಿದೆ. ಈಗಾಗಲೇ ಕೆಲವರು ಡೆಂಗಿಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ಭೀಮರೆಡ್ಡಿ ತಿಳಿಸಿದ್ದಾರೆ.

ರಾಶಿ ರಾಶಿ ಕಸ: ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ರಾಶಿ ಕಸ, ಬೀಡಿ ಸಿಗರೇಟು, ಗುಟಕಾ ಚೀಟಿಗಳು ಬಿದ್ದಿರುವುದು ಕಾಣಿಸುತ್ತವೆ. ಗ್ರಾಮ ಪಂಚಾಯಿತಿ ಅವರು ಸ್ವಚ್ಚತೆ ಮಾಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದಿಂದ ಹುಮನಾಬಾದ್ ಪಟ್ಟಣಕ್ಕೆ ಆಗಮಿಸುವ ರಸ್ತೆಯ‌ ಎರಡು ಭಾಗದಲ್ಲಿ ಗಿಡ ಗಂಟೆಗಳು ಆವರಿಸಿವೆ. ಎರಡು ಬದಿಯಲ್ಲಿ ಗಿಡಗಳು ಒಂದಕ್ಕೊಂದು ತಳಕು ಹಾಕಿಕೊಂಡಿದ್ದು ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ವಾಹನಗಳು ಸೈಡ್‌ ತೆಗೆದು ಕೊಳ್ಳಲು ಜಾಗವೇ ಇಲ್ಲ. ಚಾಲಕರು ಎಚ್ಚರ ತಪ್ಪಿ ಚಲಾಯಿಸಿದರೆ ಅಪಘಾತ ಖಚಿತ. ಕೆಲ ಬಡಾವಣೆಗಳಲ್ಲಿಯೂ ಜಾಲಿಗಿಡಗಳು ವ್ಯಾಪಕವಾಗಿ ಬೆಳೆದಿವೆ.

ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ರಸ್ತೆಯ ಮೇಲೆ ಸಂಗ್ರಹಗೊಂಡ ಕೊಳೆಚೆ ನೀರು ಪ್ಲಾಸ್ಟಿಕ್ ಕಸ
ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ರಸ್ತೆಯ ಮೇಲೆ ಸಂಗ್ರಹಗೊಂಡ ಕೊಳೆಚೆ ನೀರು ಪ್ಲಾಸ್ಟಿಕ್ ಕಸ
ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರಿಚೀಕೆಯಾಗಿದೆ. ಈಗಾಗಲೇ ಗ್ರಾಮದಲ್ಲಿ ಎರಡು ಡೆಂಗಿ ಪ್ರಕರಣಗಳು ವರದಿಯಾಗಿವೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು
ಭೀಮರೆಡ್ಡಿ ನಿವಾಸಿ
ಗ್ರಾಮದಲ್ಲಿ ಚರಂಡಿಗಳ ಸಮಸ್ಯೆ ಇದೆ. ಈಗಾಗಲೇ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚರಂಡಿ ನಿರ್ಮಿಸುವುದಕ್ಕೂ ತಿಳಿಸಲಾಗುವುದು.
ದಿಪೀಕಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ
ಸದ್ಯ ಹಣಕುಣಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ ಸಿಂಧನಕೇರಾ ಗ್ರಾಮದಲ್ಲಿಯೂ ಸ್ವಚ್ಛತೆ ಮಾಡಿಸಲಾಗುವುದು.
ಪದ್ಮಪ್ಪ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT