ರೈಲು ನಿಲ್ದಾಣ ಶುಚಿ:ಶಾಹೀನ್ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

7
ಮನೆ ಆವರಣದಲ್ಲಿ ಸಸಿ ನೆಟ್ಟರು

ರೈಲು ನಿಲ್ದಾಣ ಶುಚಿ:ಶಾಹೀನ್ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

Published:
Updated:
Deccan Herald

ಬೀದರ್‌: ಸ್ವಚ್ಛತೆ ಹಾಗೂ ಹಸಿರು ಜಾಗೃತಿಗೆ ಪೂರಕ ಚಟುವಟಿಕೆಗಳ ಮೂಲಕ ಇಲ್ಲಿಯ ಶಾಹೀನ್ ವಿಜ್ಞಾನ ಪದವಿಪೂರ್ವ ಕಾಲೇಜು ಗಾಂಧಿ ಜಯಂತಿಯನ್ನು ಮಂಗಳವಾರ ಅರ್ಥಪೂರ್ಣ ಆಚರಿಸಿತು.

ಪಾಲಕರ ಒಪ್ಪಿಗೆ ಪಡೆದುಕೊಂಡೇ ವಿದ್ಯಾರ್ಥಿಗಳು ಕಾಲೇಜಿನಿಂದ ಒಯ್ದಿದ್ದ ಸಸಿಗಳನ್ನು ಮನೆ ಆವರಣದಲ್ಲಿ ನೆಟ್ಟು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

ಪ್ರಾಚಾರ್ಯ ಖಾಜಾ ಪಟೇಲ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ಖಾದರ್ ನೇತೃತ್ವದಲ್ಲಿ ಎರಡು ಬಸ್‌ ಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೈಯಲ್ಲಿ ಪೊರಕೆ ಹಾಗೂ ಕಸದತೊಟ್ಟಿ ಹಿಡಿದುಕೊಂಡು ಸ್ವಚ್ಛತಾ ಕಾರ್ಯ ಶುರು ಮಾಡಿದರು.

ತಲಾ ಹತ್ತು ವಿದ್ಯಾರ್ಥಿಗಳು ಮತ್ತು ನಾಲ್ವರು ಸಿಬ್ಬಂದಿಯನ್ನು ಒಳಗೊಂಡ 10 ತಂಡಗಳನ್ನು ರಚಿಸಿ ರೈಲು ಹಳಿ, ಪ್ಲಾಟ್‌ ಫಾ ರಂ, ಟಿಕೆಟ್ ಕೌಂಟರ್ ಹಾಗೂ ಆವರಣವನ್ನು ಶುಚಿಗೊಳಿಸಿದರು.

ಕಸಗುಡಿಸಿ, ಕಸ ಕಡ್ಡಿಗಳನ್ನು ಆಯ್ದು ಕಸದ ತೊಟ್ಟಿಗಳಲ್ಲಿ ತುಂಬಿದರು. ನಂತರ ರೈಲ್ವೆ ಇಲಾಖೆಯವರು ನೀಡಿದ ಚೀಲದಲ್ಲಿ ತುಂಬಿ ಸ್ಥಳಾಂತರಿಸಿದರು.
ವಿದ್ಯಾರ್ಥಿಗಳ ಸ್ವಚ್ಛತಾ ಪ್ರಜ್ಞೆಗೆ ಸಂತಸ ವ್ಯಕ್ತಪಡಿಸಿದ ಅನೇಕ ಪ್ರಯಾಣಿಕರು ತಾವೂ ಕೈಯಲ್ಲಿ ಪೊರಕೆ ಹಿಡಿದು ಕಸಗುಡಿಸಿದರು. ಓದಿನ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡ ವಿದ್ಯಾರ್ಥಿಗಳನ್ನು ರೈಲ್ವೆ ಇಲಾಖೆಯವರೂ ಮುಕ್ತಕಂಠದಿಂದ ಪ್ರಶಂಶಿಸಿದರು.

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದರು.

ಕಾಲೇಜಿನ ಎರಡು ಸಾವಿರ ವಿದ್ಯಾರ್ಥಿಗಳು ತಮ್ಮ ಮನೆಗಳ ಆವರಣದಲ್ಲಿ ಸಸಿ ನೆಟ್ಟಿದ್ದಾರೆ. ಸಸಿ ನೆಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಟೋಕನ್ ಕೊಡಲಾಗಿತ್ತು. ಈ ಪೈಕಿ ಡ್ರಾ ಮೂಲಕ ಆಯ್ಕೆಯಾದ 50 ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಶಾಹೀನ್ ಕಾಲೇಜು ವತಿಯಿಂದ ಹೈದರಾಬಾದ್‌ಗೆ ಶೈಕ್ಷಣಿಕ ಪ್ರವಾಸಕ್ಕೆ ಒಯ್ಯಲಾಗುವುದು ಎಂದು ಹೇಳಿದರು.

ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳು ವರ್ಷದಲ್ಲಿ 100 ಗಂಟೆ ಶ್ರಮದಾನ ಮಾಡಲಿದ್ದಾರೆ. ನವೆಂಬರ್ 25 ರಂದು ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನ ನಡೆಸಲಿದ್ದಾರೆ. 500 ವಿದ್ಯಾರ್ಥಿಗಳು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !