ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಟಕಚಿಂಚೋಳಿ | ನಿಸರ್ಗದ ಮಡಿಲಲ್ಲಿ ಶಾಂತಲಿಂಗೇಶ್ವರ ಮಠ

ಖಟಕಚಿಂಚೋಳಿ: ತುಪ್ಪದ ಬಾವಿ ಇಲ್ಲಿಯ ವಿಶೇಷ
Published 17 ಆಗಸ್ಟ್ 2024, 5:02 IST
Last Updated 17 ಆಗಸ್ಟ್ 2024, 5:02 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಗ್ರಾಮದ ಹೊರವಲಯದ ನಿಸರ್ಗದ ಮಡಿಲಲ್ಲಿರು ಶಾಂತಲಿಂಗೇಶ್ವರ ದೇವಾಲಯಕ್ಕೆ ಶ್ರಾವಣದಲ್ಲಿ ಸಹಸ್ರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಶಾಂತಲಿಂಗೇಶ್ವರ ದೇಗುಲ ಗುಡ್ಡಗಾಡಿ ಪ್ರದೇಶದ ಮಧ್ಯದಲ್ಲಿದೆ. ದೇವಾಲಯದ ಸುತ್ತಲೂ ನಿರ್ಮಾಣವಾದ ಕೆರೆ, ತುಪ್ಪದ ಬಾವಿ ಭಕ್ತರ ದಾಹ ತಣಿಸುತ್ತಿವೆ.

‘ಭಾಲ್ಕಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಹಾಗೂ ಗ್ರಾಮದಿಂದ 1 ಕಿ.ಮೀ ಅಂತರದ ಬೆಟ್ಟದಲ್ಲಿ ಶಾಂತಲಿಂಗೇಶ್ವರ ದೇವಸ್ಥಾನವಿದೆ. ಈ ಪ್ರದೇಶಕ್ಕೆ ಹುಲಿಕುಂಟೆ ತಾಣ ಎಂದು ಕರೆಯಲಾಗುತ್ತದೆ’ ಎಂದು ಹಿರಿಯರಾದ ಧೂಳಪ್ಪ ಬನ್ನಾಳೆ, ವೀರಶೆಟ್ಟಿ ಕಲ್ಲಾ ಹೇಳುತ್ತಾರೆ.

‘ಹಿಂದಿನ ಕಾಲದಲ್ಲಿ ಈ ಪ್ರದೇಶ ದಟ್ಟವಾದ ಕಾಡಿನಿಂದ ಕೂಡಿತ್ತು. ಈ ಪ್ರದೇಶದಲ್ಲಿ ಹುಲಿಯೊಂದು ವಾಸಿಸುತ್ತಿತ್ತು. ಅದು ನೀರು ಕುಡಿಯಲು ಈ ಸ್ಥಳಕ್ಕೆ ಬರುತ್ತಿತ್ತು. ಆದ್ದರಿಂದ ಈ ಸ್ಥಳವನ್ನು ಹುಲಿಕುಂಟೆ ಎಂದು ಕರೆಯುತ್ತಾರೆ’ ಎನ್ನುತ್ತಾರೆ ಹಿರಿಯರು.

‘ದೇವಸ್ಥಾನದ ಆವರಣದಲ್ಲಿ ಪುರಾತನವಾದ ಬಾವಿಯಿದೆ. ಹಿಂದೆ ಜಾತ್ರೆ ನಡೆಯುವ ಸಂದರ್ಭದಲ್ಲಿ ಊಟಕ್ಕೆ ಕುಳಿತ ಭಕ್ತರಿಗೆ ತುಪ್ಪ ಕಡಿಮೆ ಬಿದ್ದಾಗ ಶಾಂತಲಿಂಗೇಶ್ವರ ಸ್ವಾಮೀಜಿ ತಮ್ಮ ಪವಾಡದಿಂದ ನೀರನ್ನು ತುಪ್ಪವಾಗಿ ಪರಿವರ್ತಿಸಿ ಭಕ್ತರಿಗೆ ಊಣ ಬಡಿಸಿದರು ಎಂಬ ಪ್ರತೀತಿ ಇದೆ. ಹೀಗಾಗಿ ಅದು ತುಪ್ಪದ ಬಾವಿ ಎಂದೇ ಜನಜನಿತವಾಗಿದೆ’ ಎಂದು ಶಾಂತಪ್ಪ ಕಡಗಂಚಿ ಹೇಳುತ್ತಾರೆ.

‘ಪ್ರತಿ ವರ್ಷ ಶ್ರಾವಣದ ಮೂರನೇ ಸೋಮವಾರ ಶಾಂತಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳ ಜನರಷ್ಟೇ ಅಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ಓಂಕಾರ ಸ್ವಾಮಿ ಹೇಳಿದರು.

ಜಾತ್ರೆ ವಿವರ: ಪ್ರತಿ ವರ್ಷ ಶ್ರಾವಣದ ಮೂರನೇ ಸೋಮವಾರ ನಡೆಯುವ ಶಾಂತಲಿಂಗೇಶ್ವರ ರಥೋತ್ಸವವು ಅದ್ದೂರಿಯಾಗಿ ನಡೆಸಲು ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಆಗಸ್ಟ್ 19 ರಂದು ಶಾಂತಲಿಂಗೇಶ್ವರ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ ಶಾಂತಲಿಂಗೇಶ್ವರ ಗದ್ದುಗೆಗೆ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಕುಸ್ತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯುವವು.

ಸಂಜೆ ನಡೆಯಲಿರುವ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುವರು. ಸಂಸದ ಸಾಗರ ಖಂಡ್ರೆ, ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಚಂದ್ರಶೇಖರ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸುವರು ಎಂದು ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಶಾಂತಲಿಂಗೇಶ್ವರ ಮಠ
ಶಾಂತಲಿಂಗೇಶ್ವರ ಮಠ
ಶಾಂತಿ ಲಿಂಗೇಶ್ವರ ಮೂರ್ತಿ
ಶಾಂತಿ ಲಿಂಗೇಶ್ವರ ಮೂರ್ತಿ

ಪ್ರತಿ ಶ್ರಾವಣ ಮಾಸದ ಮೂರನೇ ಸೋಮವಾರ ರಥೋತ್ಸವ ತುಪ್ಪದ ಬಾವಿ ಇಲ್ಲಿಯ ವಿಶೇಷ

ಪ್ರಕೃತಿಯ ಸುಂದರ ಮಡಿಲಲ್ಲಿ ಇರುವ ಶಾಂತಲಿಂಗೇಶ್ವರ ದೇವಸ್ಥಾನ ಪವಿತ್ರ ತಾಣವಾಗಿದೆ. ಭಕ್ತರಿಗೆ ಸ್ನಾನಗೃಹ ವಸತಿ ಸೇರಿದಂತೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು
ರೇವಣಸಿದ್ಧ ಜಾಡರ್ ಭಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT