ಬೀದರ್: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಬಡ ವಿದ್ಯಾರ್ಥಿಗಳ ಕಲ್ಯಾಣದ ಆಶಯ ಸಾಕಾರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಹೇಳಿದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಗಂಜ್‍ನ ತುಳಸಿ ಟೈರ್ಸ್ ಕಚೇರಿಯಲ್ಲಿ ಆಯೋಜಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿವಕುಮಾರ ಸ್ವಾಮೀಜಿ ಅವರು ಉಚಿತ ಶಿಕ್ಷಣದ ಮೂಲಕ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಬಾಳು ಹಸನಾಗಿಸಿದ್ದರು. ಸುಂದರ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಅವರ ಮಾರ್ಗದಲ್ಲಿ ಸಾಗಬೇಕು. ನಿರ್ಗತಿಕ, ಬಡ ಹಾಗೂ ಅಸಹಾಯಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಲಾದ ನೆರವು ನೀಡಬೇಕು’ ಎಂದು ಸಲಹೆ ಮಾಡಿದರು.
ಸಾಹಿತಿ ಬಸವರಾಜ ಬಲ್ಲೂರ ಮಾತನಾಡಿ, ಶಿಕ್ಷಣದಿಂದಲೇ ಸಮಾಜದ ಉದ್ಧಾರ ಸಾಧ್ಯ ಎಂದು ಅರಿತಿದ್ದ ಶಿವಕುಮಾರ ಸ್ವಾಮೀಜಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ಪೂರ್ವ ಪ್ರಾಥಮಿಕದಿಂದ ಪದವಿ ವರೆಗೂ ವಿವಿಧ ಶಾಲಾ, ಕಾಲೇಜು ಆರಂಭಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವೆ, ಆಶ್ರಯದೊಂದಿಗೆ ಅಕ್ಷರ ದಾಸೋಹ ಮಾಡಿದ್ದರು ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿ, ಸಿದ್ಧಗಂಗಾ ಶ್ರೀ ತಮ್ಮ ಸಮಾಜೋಧಾರ್ಮಿಕ ಕಾರ್ಯಗಳಿಂದಾಗಿಯೇ ಮನೆ ಮಾತಾಗಿದ್ದರು. ಮಠಾಧೀಶರಿಗೆ ಮಾದರಿಯಾಗಿದ್ದರು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘ ಅವರ ಕಾರ್ಯಗಳ ಪ್ರಚಾರ ಹಾಗೂ ಪ್ರಸಾರದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ಮಾತನಾಡಿ, ಸಿದ್ಧಗಂಗಾ ಮಠ ಬಡ ವಿದ್ಯಾರ್ಥಿಗಳಿಗೆ ಕಲ್ಪವೃಕ್ಷವಾಗಿದೆ. ಲಕ್ಷಾಂತರ ಬಡ ವಿದ್ಯಾರ್ಥಿಗಳು ಮಠದಲ್ಲಿ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಇಡೀ ಬದುಕನ್ನು ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರೆಂದೇ ಹೆಸರಾಗಿದ್ದರು. ಎಲ್ಲರೂ ಅವರ ತತ್ವ, ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ, ಪತ್ರಕರ್ತ ನಾಗೇಶ ಪ್ರಭಾ ಮಾತನಾಡಿದರು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಪ್ರಮುಖರಾದ ಜಗನ್ನಾಥ ಕಮಲಾಪುರೆ, ಶಿವಕುಮಾರ ಪಟಪಳ್ಳಿ, ಗುರುಪಾದಪ್ಪ ಸಿರ್ಸಿ, ಅಶೋಕ ದಿಡಗೆ, ಸಿದ್ಧಾರೂಢ ಭಾಲ್ಕೆ, ಧರ್ಮವೀರ ಬಿರಾದಾರ, ಸಂಜುಕುಮಾರ ಹುಣಜಿ, ಶಶಿಕಾಂತ ಪಾಟೀಲ ತೇಗಂಪುರ, ಮಹಾದೇವ ಪಟ್ನೆ ಇದ್ದರು. ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಗಭೂಷಣ ಹುಗ್ಗೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.