ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಸಂಗದಿಂದ ಸದ್ಗುಣ ಬೆಳೆಸಿಕೊಳ್ಳಿ: ಸಿದ್ಧಾರೂಢ ಮಠದ ಸಿದ್ಧಲಿಂಗ ಸ್ವಾಮೀಜಿ

Last Updated 13 ಫೆಬ್ರುವರಿ 2019, 16:11 IST
ಅಕ್ಷರ ಗಾತ್ರ

ಬೀದರ್‌: ‘ಪ್ರತಿಯೊಬ್ಬರು ಸತ್ಸಂಗದ ಮೂಲಕ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಅರಕೇರಿ ಸಿದ್ಧಾರೂಢ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಅಮೃತ ಮಹೋತ್ಸವದ ನಾಲ್ಕನೆಯ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶರೀರ ಹಾಗೂ ಮನಸ್ಸನ್ನು ಶುಚಿಗೊಳಿಸಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕಿದೆ. ಇದು ಜ್ಞಾನದ ಮಹಾ ಕುಂಭಮೇಳ. ಇಲ್ಲಿಗೆ ಬಂದು ಮಿಂದವರಿಗೆಲ್ಲ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ’ ಎಂದು ತಿಳಿಸಿದರು.

ಅಷ್ಟಗಿಯ ಜಡಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಹೊಲದಲ್ಲಿ ಕರಿಕೆ ಇದ್ದರೆ ಬೆಳೆಗೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಅದನ್ನು ಕಿತ್ತು ಕಟ್ಟೆಗೆ ಹಾಕಲಾಗುತ್ತದೆ. ಹಾಗೆಯೇ ಜ್ಞಾನವೆಂಬ ದಂಡದಿಂದ ಶರೀರವೆಂಬ ಹೊಲವನ್ನು ಹಸನು ಮಾಡಬೇಕು’ ಎಂದರು.

ಮಾಗಣಗೇರಾ ಹಿರೇಮಠದ ವಿಶ್ವರಾಧ್ಯ ಶಿವಾಚಾರ್ಯರು, ‘ನಾನು, ಮನ್ನಿಜಗುಣ ಶಿವಯೋಗಿಗಳು, ಸಿದ್ಧಾರೂಢರನ್ನು ನೋಡಿಲ್ಲ. ಆದರೆ ಅವರ ತತ್‌ ಸ್ವರೂಪರೇ ಆದ ಶಿವಕುಮಾರರನ್ನು ನೋಡಿ ಆನಂದ ಪಡಬೇಕಾದ ಪ್ರಸಂಗ ಇದು’ ಎಂದು ಬಣ್ಣಿಸಿದರು.

ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ‘ಪರತತ್ವ ಅರಿಯಲು ಪ್ರಥಮ ಸೋಪಾನ ಶರೀರ. ‘ಶರೀರ ಹಸನು ಮಾಡಿ’ ಎಂದರೆ ಇದು ಮಲಿನಗೊಂಡಿದೆ ಎಂದರ್ಥ. ಪರತತ್ವದ ಬೆಳೆ ಬೆಳೆಯಲು ಶರೀರಕ್ಕೆ ಆವರಿಸಿಕೊಂಡಿರುವ ದೋಷವನ್ನು ನಿವಾರಿಸಿಕೊಳ್ಳಬೇಕು’ ಎಂದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಪರಮಾತ್ಮನಿಗೆ ಬೇಕಾದದ್ದು ಪಡಿಪದಾರ್ಥವಲ್ಲ. ಪರಿಶುದ್ಧವಾದ ಅಂತಃಕರಣವೊಂದಿದ್ದರೆ ಸಾಕು. ಮಹಾತ್ಮರ ಸಂಗದಿಂದ ದುರ್ಗುಣ, ದುರಾಚಾರವನ್ನು ಕಳೆದು ಕೊಳ್ಳಬೇಕಿದೆ. ಸಂತ್ಸಗದ ಸವಿಯ ಆನಂದ ಉಂಡವನೇ ಬಲ್ಲ. ಶಿವಕುಮಾರ ಸ್ವಾಮೀಜಿ ಶರಣರ ಈ ಪವಿತ್ರ ನಾಡಿನಲ್ಲಿ ಅಧ್ಯಾತ್ಮದ ಅನುಭವ ಮಂಟಪವನ್ನೇ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಜಾತ್ಯತೀತ ಧರ್ಮವನ್ನು ಕಟ್ಟುವ ಕೆಲಸ ಮಾಡಿದ್ದಾರೆ’ ಎಂದು ನುಡಿದರು.

ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ‘ಮನುಷ್ಯನಿಗೆ ಪರಮಾತ್ಮನನ್ನು ಕಾಣುವವರೆಗೂ ಶಾಂತಿ ದೊರೆಯದು’ ಎಂದು ಹೇಳಿದರು.

‘ಮನುಷ್ಯನಿಗೆ ಆರೋಗ್ಯ, ಆನಂದ ಸಿಗಬೇಕಾದರೆ ಪರಮಾತ್ಮನಲ್ಲಿ ಲೀನವಾಗಬೇಕು. ಗಂಡ, ಹೆಂಡತಿ, ಊಟ, ವಸತಿ, ಆಸ್ತಿ, ಅಂತಸ್ತು ಇವುಗಳೆಲ್ಲ ಗೌಣ. ಒಂದು ವೇಳೆ ಹೆಂಡತಿ ಊಟದಲ್ಲಿ ವಿಷ ಬೆರೆಸುತ್ತಾಳೆಂದು ಗೊತ್ತಾದರೆ ನ್ಯಾಯಾಲಯಕ್ಕೆ ಹೋಗುತ್ತಿರಿ. ಅರ್ಥಾತ್ ನಮ್ಮ ಮುಖ್ಯ ಇಚ್ಛೆಗೆ ತೊಂದರೆ ಬಂದರೆ ಎಲ್ಲವನ್ನು ತ್ಯಾಗ ಮಾಡುತ್ತೇವೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಗದಗನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ‘ಶರೀರ ಭಗವಂತನಿಂದ ಲಭಿಸಿದ ವರ. ಅದನ್ನು ಚೆನ್ನಾಗಿಟ್ಟುಕೊಂಡು ಸಾರ್ಥಕ ಬದುಕನ್ನು ನಡೆಸಿದರೆ ಅದೇ ನಿಜವಾದ ಆನಂದ. ನಾವು ಹೊರಗಿನ ಕಸ ತೆಗೆಯುವ ಕೆಲಸ ಮಾಡಿದ್ದೇವೆ. ಶಿವಕುಮಾರ ಸ್ವಾಮೀಜಿ ಅಂತರಂಗದ ಕಸವನ್ನು ತೆಗೆಯುವ ಕೆಲಸ ಮಾಡಿದ್ದಾರೆ’ ಎಂದು ನುಡಿದರು.

ನಿರ್ಭಯಾನಂದ ಸ್ವಾಮೀಜಿ, ಕಲಬುರ್ಗಿಯ ಮಾತೆ ಲಕ್ಷ್ಮಿದೇವಿ, ಮಂಟೂರಿನ ಸದಾನಂದ ಸ್ವಾಮೀಜಿ, ಬಸವಗಿರಿಯ ಅಕ್ಕ ಅನ್ನಪೂರ್ಣ, ಡಾ. ಗಂಗಾಬಿಕೆ, ನಿಜಗುಣ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ವಿನಾಯಕ ಸ್ವಾಮೀಜಿ, ಜ್ಞಾನೇಶ್ವರಿತಾಯಿ, ಸಂಗೀತಾದೇವಿ, ಅಮೃತಾನಂದಮಯಿ, ಶಶಿಕಲಾತಾಯಿ, ರಾಜೇಶ್ವರಿತಾಯಿ ಇದ್ದರು.

ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ.ಶೆಟಕಾರ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪೂರೆ, ಸುಭಾಷ ಉಪ್ಪೆ, ಕರಬಸಪ್ಪ ಮುಸ್ತಾಪುರೆ, ಉದಯಭಾನು ಹಲವಾಯಿ, ಪ್ರಭುಶೆಟ್ಟಿ ಮುದ್ದಾ, ಈಶ್ವರಗೌಡ ಕಮಡಳ್ಳಿ, ಮಡಿವಾಳಪ್ಪ ಗಂಗಶೆಟ್ಟಿ, ಡಾ. ಹಾವಗಿರಾವ್ ಮೈಲಾರೆ, ಅಮರನಾಥ ಕಣಜಿ, ಸಹಜಾನಂದ ಕಣಜಿ, ಸಿದ್ಧಾರೂಢ ಕಣಜಿ, ಡಾ. ಚಂದ್ರಪ್ಪ ಭತಮುರ್ಗೆ, ಶರಣಬಸಪ್ಪ ಹೊಸಮನಿ, ಲಕ್ಷ್ಮಣ ಪೂಜಾರಿ, ರಮೇಶಕುಮಾರ ಪಾಟೀಲ ಚಟ್ನಳ್ಳಿ, ಅನಿಲಕುಮಾರ ಔರಾದೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT