ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವಕ್ಕೆ ಚಾಲನೆ

7

ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವಕ್ಕೆ ಚಾಲನೆ

Published:
Updated:
Prajavani

ಬೀದರ್: ನಗರದ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಭಾನುವಾರ ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವ ನಾಡಿನ ಸಕಲ ಮಠಾಧೀಶರ ಸಮ್ಮುಖದಲ್ಲಿ ಭಾನುವಾರ ಚಾಲನೆ ದೊರೆಯಿತು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗೋವಾದಿಂದ ಬಂದಿರುವ ಭಕ್ತರು ಕರ್ನಾಟಕ ಫಾರ್ಮಾಸಿ ಕಾಲೇಜಿನ ಆವರಣದಿಂದ ಬ್ಯಾಂಡ್‌ಬಾಜಾ ಹಾಗೂ ಡೊಳ್ಳು ವಾದನದೊಂದಿಗೆ ಮೆರವಣಿಗೆಯಲ್ಲಿ ಹೊರಟು ಪ್ರಮುಖ ಮಾರ್ಗವಾಗಿ ಎನ್‌.ಕೆ.ಜಾಬಶೆಟ್ಟಿ ಆಯುರ್ವೇದ ಕಾಲೇಜಿನ ಮೈದಾನದಲ್ಲಿ ನಿರ್ಮಿಸಿರುವ ಮಹಾಮಂಟಪಕ್ಕೆ ಬಂದರು.

ಸಾಂಪ್ರದಾಯಿಕ ಉಡುಗೆ ತೊಟ್ಟು ತಲೆಯ ಮೇಲೆ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು. ಡಾ. ಬಸವರಾಜ ಪಾಟೀಲ, ಡಾ.ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ವಾಲಿ, ಮಲ್ಲಿಕಾರ್ಜುನ ಹತ್ತಿ, ಕಲ್ಯಾಣರಾವ್ ಮುಜರಕೆ, ಡಾ. ಹಾವಗಿರಾವ್ ಮೈಲಾರೆ, ಮಡಿವಾಳಪ್ಪ ಗಂಗಶೆಟ್ಟಿ, ಸಹಜಾನಂದ ಕಂದಗೋಳ, ಪ್ರಭುಲಿಂಗ ಬೆಣ್ಣೆ, ಶಿವಶರಣಪ್ಪ ಸಾವಳಗಿ, ರೇವಣಸಿದ್ದಪ್ಪ ಜಲಾದೆ, ವಿರೂಪಾಕ್ಷ ಗಾದಗಿ, ಲಕ್ಷ್ಮಣ ಪೂಜಾರಿ, ಸಿದ್ಧಾರೂಢ ಕಂದಗೊಳ, ಚಂದ್ರಪ್ಪಾ ಭತಮೂರ್ಗಿ, ರಮೇಶಕುಮಾರ ಪಾಟೀಲ, ಡಾ. ಮಲ್ಲಿನಾಥ ಮಠಪತಿ, ಅಮರನಾಥ ಕಣಜಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಪ್ರಣವ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಮಾನವ ಜನ್ಮ ಶ್ರೇಷ್ಠ: ‘ಮಾನವ ಜನ್ಮ ಶ್ರೇಷ್ಠವಾದದ್ದು. ಪ್ರತಿಯೊಬ್ಬರು ಸದ್ಗುಣಗಳನ್ನು ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನುಡಿದರು.

ನಗರದ ಚಿದಂಬರಾಶ್ರಮ ಸಿದ್ಧಾರೂಢ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವದ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾನವನ ಮನಸ್ಸು ಚಂಚಲವಾದದ್ದು. ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮಾನವ ಜನ್ಮ ಪಾಪ ಪುಣ್ಯಗಳಿಂದ ಮಿಶ್ರಿತವಾಗಿದೆ. ಈ ಜನ್ಮವನ್ನು ಕೇವಲ ಭೋಗದ ಸುಖಕ್ಕಾಗಿ ಹಾಳು ಮಾಡಿಕೊಳ್ಳಬಾರದು. ಸದ್ಗುಣಗಳಿಂದ ಮುಕ್ತಿ ಪಡೆದುಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ಸಿದ್ಧಾರೂಢರು ಅಂದು ನಾಡಿನಾದ್ಯಂತ ಸಂಚರಿಸಿ ಜ್ಞಾನದ ಬೆಳಕನ್ನು ಹರಿಸಿದರು. ವಿದ್ಯೆ, ಜ್ಞಾನ ಹಾಗೂ ಜನ ಸೇವೆಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದರು. ಗುರುವನ್ನು ಗೌರವದಿಂದ ಕಾಣಬೇಕು. ಗುರುವಿನ ದೃಷ್ಟಿಯಲ್ಲಿ ಶ್ರೀಮಂತರು ಹಾಗೂ ಬಡವರು ಎನ್ನುವ ಭೇದ ಇಲ್ಲ. ಭಕ್ತರಿಗೆ ಜ್ಞಾನವನ್ನು ಧಾರೆ ಎರೆಯುವುದು ಅವರ ಕೆಲಸವಿರುತ್ತದೆ’ ಎಂದು ಹೇಳಿದರು.

‘ಅಂದು ಸಿದ್ಧಾರೂಢರು ಮಾಡಿದ್ದನ್ನು ಇಂದು ಶಿವಕುಮಾರ ಸ್ವಾಮಿ ಅವರೂ ಮಾಡುತ್ತಿದ್ದಾರೆ. ಸತತ 75 ವರ್ಷಗಳ ಕಾಲ ತಮ್ಮ ಜ್ಞಾನವನ್ನು ಭಕ್ತಕುಲಕ್ಕೆ ಧಾರೆ ಎರೆಯುತ್ತ ಬಂದಿದ್ದಾರೆ. ಅವರು 100 ವರ್ಷಗಳ ಕಾಲ ನಗುನಗುತ್ತಾ ಬಾಳಿ ಬದುಕಬೇಕು. ಹಾಗೂ ಭಕ್ತರಿಗೆ ಜ್ಞಾನದ ಧಾರೆ ಎರೆಯಬೇಕು’ ಎಂದು ಶುಭಹಾರೈಸಿದರು.

ಶಿವರಾತ್ರಿ ದೇಶಿಕೇಂದ್ರದ ಜಯರಾಜೇಂದ್ರ ಸ್ವಾಮಿ ಮಾತನಾಡಿ,‘ಸಿದ್ಧಾರೂಢರು ನಡೆದಾಡಿದ ಕ್ಷೇತ್ರವೇ ಸುಕ್ಷೇತ್ರವಾಗಿದೆ. ಅವರು ಭಕ್ತರ ಮನಸ್ಸಿನಲ್ಲಿ ಅಚಲವಾಗಿ ಉಳಿದುಕೊಂಡಿದ್ದಾರೆ. ಆರೂಢರ ರೂಪವೇ ಶಿವಕುಮಾರ ಸ್ವಾಮೀಜಿ’ ಎಂದು ಬಣ್ಣಿಸಿದರು.

‘ಮಾನವ ಜೀವನದಲ್ಲಿ ಸಂಪತ್ತು ಕಳೆದುಕೊಂಡರೆ ಏನೂ ಆಗದು. ಆರೋಗ್ಯ ಕಳೆದುಕೊಂಡರೆ ಸ್ವಲ್ಪ ನಷ್ಟವಾಗುತ್ತದೆ. ಆದರೆ ಚಾರಿತ್ರ್ಯವನ್ನು ಕಳೆದುಕೊಂಡರೆ ಸರ್ವಸ್ವವನ್ನೇ ಕಳೆದುಕೊಂಡಂತೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಕಲ್ಯಾಣಕ್ಕಾಗಿ ಮಹಾತ್ಮರು ಅವರಿಸುತ್ತಾರೆ. ತತ್ವಜ್ಞಾನಿಯಾದವರು ಜನಸಾಮಾನ್ಯರ ಹಿತ ಕಾಪಾಡುತ್ತಾರೆ’ ಎಂದರು. ಗಣೇಶನಾಂದ ಮಹಾರಾಜ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !